ನ್ಯೂಸ್

Video | ಈ ಮನುಷ್ಯರಿಗೆ ಏನಾಗಿದೆ?; ನಡುರಸ್ತೆಯಲ್ಲಿ ಕಾಡುಪ್ರಾಣಿಯೊಂದಿಗೆ ಇದೆಂಥ ಚೆಲ್ಲಾಟ!

ಬೆಂಗಳೂರು: ಈ ದೃಶ್ಯವನ್ನು ನೋಡಿದರೆ ಡಾ.ರಾಜ್​ಕುಮಾರ್ ಅವರ ಸಿನಿಮಾದಲ್ಲಿನ ಹಾಡೊಂದರ 'ಪ್ರಾಣಿಗಳೇ ಗುಣದಲಿ ಮೇಲು, ನರಮನುಷ್ಯ ಅದಕ್ಕಿಂತ ಕೀಳು..' ಎಂಬ ಸಾಲೊಂದು ನೆನಪಾದರೂ ಅಚ್ಚರಿ ಏನಲ್ಲ. ನಡುರಸ್ತೆಯಲ್ಲಿ ಸಿಕ್ಕ ಚಿರತೆಯೊಂದು ಮಾನವಸ್ನೇಹಿಯಾಗಿ ವರ್ತಿಸಿದ್ದರೆ, ಅದರ ಸುತ್ತ ನೆರೆದಿದ್ದ ಮನುಷ್ಯರ ವರ್ತನೆ ಆ ಪ್ರಾಣಿಯಷ್ಟೇ ವಿಚಿತ್ರವಾಗಿತ್ತು. ಇಂಥದ್ದೊಂದು ದೃಶ್ಯದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಾಹನದಲ್ಲಿ ಸಾಗುತ್ತಿದ್ದ ಕೆಲವರಿಗೆ ಚಿರತೆಯೊಂದು ಎದುರಾಗಿದೆ. ಚಿರತೆ ಸುಮ್ಮನಿದ್ದುದನ್ನು ನೋಡಿ ಅವರು ಮೊಬೈಲ್​ ಫೋನ್​ನಿಂದ ಅದರ ವಿಡಿಯೋ ತೆಗೆಯಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಈ ಚಿರತೆ ಮನೆಯಲ್ಲಿನ ಸಾಕುನಾಯಿಯಂತೆ ಮೈಮೇಲೆ ಎರಗಿ ಪ್ರೀತಿ ತೋರುವಂತೆ ವರ್ತಿಸಿದೆ. ಆದರೆ ಅದರೊಂದಿಗಿನ ವಿಡಿಯೋಗಾಗಿ ಜನರು ಮುಗಿಬಿದ್ದು ಅದರ ಸುತ್ತಲೇ ಅಡ್ಡಾಡುತ್ತಿದ್ದರೂ ಚಿರತೆ ವ್ಯಗ್ರವಾಗಿ ವರ್ತಿಸದೆ ಇರುವುದಕ್ಕೆ ಹಲವರಿಂದ ಕೌತುಕದ ಪ್ರಶ್ನೆಗಳು ಮೂಡಿಬಂದಿವೆ.

ಇಂಥದ್ದೊಂದು ದೃಶ್ಯ ಕಂಡುಬಂದಿರುವ ಸ್ಥಳ ಹಿಮಾಚಲ ಪ್ರದೇಶದ ತೀರ್ಥನ್​ ಕಣಿವೆ ಎನ್ನಲಾಗುತ್ತಿದೆ. ಅಲ್ಲದೆ ಈ ಚಿರತೆ ಯಾವುದಾದರೂ ರೆಸಾರ್ಟ್​​ನಲ್ಲಿ ಸಾಕಿದ್ದಾಗಿರಬಹುದು. ಹೀಗಾಗಿ ಇದು ಮಾನವಸ್ನೇಹಿ ಆಗಿ ವರ್ತಿಸುತ್ತಿದ್ದಿರಬಹುದು ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿರತೆಯ ಈ ವರ್ತನೆ ಬಗ್ಗೆ ಐಎಫ್​ಎಸ್ ಅಧಿಕಾರಿ ಪರ್ವೀನ್ ಕಸ್ವಾನ್​ ಪ್ರತಿಕ್ರಿಯಿಸಿದ್ದು, ಈ ಚಿರತೆಯ ವರ್ತನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಜನರು ಸರಿಯಾಗಿ ವರ್ತಿಸುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಅದು ಯಾವುದಾದರೂ ಎಸ್ಟೇಟ್​ನಿಂದ ತಪ್ಪಿಸಿಕೊಂಡಿರಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದೂ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)