ನ್ಯೂಸ್

ಮಲಗಿದ್ದ ವೇಳೆ ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದು, ಮುಖಕ್ಕೆ ಕಾರ ಎರಚಿದ ಪತ್ನಿ| Domestic violence

Domestic violence: ದಕ್ಷಿಣ ದೆಹಲಿಯಲ್ಲಿ ಕೌಟುಂಬಿಕ ಹಿಂಸಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬಳು ಮಲಗಿದ್ದ ತನ್ನ ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದು, ಮುಖಕ್ಕೆ ಕಾರ ಎರಚಿದ್ದಾಳೆ ಎಂದು ಆರೋಪಿಸಲಾಗಿದೆ. ಈ ವೇಳೆ ಅವರ 8 ವರ್ಷದ ಪುತ್ರಿ ಅಲ್ಲೇ ಇದ್ದಳು ಎಂದು ಬುಧವಾರ(ಅ. 08) ವರದಿಯಾಗಿದೆ.

ಅ. 03ರಂದು ಈ ಘಟನೆ ನಡೆದಿದ್ದು, ಔಷದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ತೀವ್ರ ಸುಟ್ಟಗಾಯಗಳೊಂದಿಗೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಘಟನೆ ಬಗ್ಗೆ ಪತಿ ದಿನೇಶ್ ತನ್ನ ಪತ್ನಿ ವಿರುದ್ಧ ಅಂಬೇಡ್ಕರ್ ನಗರ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಿಸಲಾಗಿದೆ.

ಅ. 2 ರಂದು ಕೆಲಸ ಮುಗಿಸಿ ತಡರಾತ್ರಿ ಮನೆಗೆ ಹಿಂತಿರುಗಿ, ಊಟ ಮಾಡಿ ಮಲಗಿದ್ದೆ. ನನ್ನ ಪತ್ನಿ ಮತ್ತು ಮಗಳು ಹತ್ತಿರದಲ್ಲೇ ಮಲಗಿದ್ದರು. ಬೆಳಗಿನ ಜಾವ 3.15 ರ ಸುಮಾರಿಗೆ, ಇದ್ದಕ್ಕಿದ್ದಂತೆ ನನ್ನ ದೇಹದಾದ್ಯಂತ ತೀವ್ರವಾದ, ಸುಡುವ ನೋವು ಅನುಭವಿಸಿದೆ. ನನ್ನ ಪತ್ನಿ ನಿಂತುಕೊಂಡು ನನ್ನ ತಲೆ ಮತ್ತು ಮುಖದ ಮೇಲೆ ಕುದಿಯುವ ಎಣ್ಣೆಯನ್ನು ಸುರಿಯುವುದನ್ನು ನಾನು ನೋಡಿದೆ.  ಎದ್ದೇಳಲು ಅಥವಾ ಸಹಾಯಕ್ಕಾಗಿ ಕರೆಯುವ ಮೊದಲು, ಅವಳು ನನ್ನ ಸುಟ್ಟಗಾಯಗಳ ಮೇಲೆ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನೂ ಜಾಸ್ತಿ ನೀವು ಕೂಗಿದರೆ, ನಾನು ನಿಮ್ಮ ಮೇಲೆ ಹೆಚ್ಚಿನ ಎಣ್ಣೆಯನ್ನು ಸುರಿಯುತ್ತೇನೆ ಎಂದು ನನಗೆ ಬೆದರಿಕೆ ಹಾಕಿದ್ದಳು ಎಂದು ಉಲ್ಲೇಖೀಸಿದ್ದಾರೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮಹಿಳೆಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 118, 124 ಹಾಗೂ 326 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪಿಟಿಐ ವರದಿ ಮಾಡಿದೆ. (ಏಜೆನ್ಸೀಸ್)