ಹೈದರಾಬಾದ್: ಕಳೆದ ತಿಂಗಳು ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಯೋಧರ ವಿರುದ್ಧದ ಘರ್ಷಣೆಯಲ್ಲಿ ತೆಲಂಗಾಣ ಮೂಲದ ಕರ್ನಲ್ ಸಂತೋಷ್ ಬಾಬುರವರು ಹುತಾತ್ಮರಾಗಿದ್ದರು. ದೇಶಕ್ಕಾಗಿ ಬಲಿದಾನ ಮಾಡಿದ ಸಂತೋಷ್ ಸ್ಮರಣಾರ್ಥವಾಗಿ ಅವರ ಪತ್ನಿಗೆ ತೆಲಂಗಾಣ ಸರ್ಕಾರ ಒಳ್ಳೆಯ ಸರ್ಕಾರಿ ಹುದ್ದೆಯನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ: ಫೇಸ್ಬುಕ್ ಲೈವ್ ಹೋಗಿ ಪತ್ನಿ ಎದುರಲ್ಲೇ ವ್ಯಕ್ತಿ ನೇಣಿಗೆ ಶರಣು: ಡೆತ್ನೋಟ್ನಲ್ಲಿತ್ತು ನೋವಿನ ಮಾತು
ಡೆಪ್ಯುಟಿ ಕಲೆಕ್ಟರ್ ಆಗಿ ಸಂತೋಷ್ ಅವರ ಪತ್ನಿ ಸಂತೋಷಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇಮಕಾತಿ ಪತ್ರವನ್ನು ಸಂತೋಷಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಹಿರಿಯ ಅಧಿಕಾರಿಗಳು ಮತ್ತು ಸಚಿವರು ಉಪಸ್ಥಿತರಿದ್ದರು.
ನೇಮಕ ಬೆನ್ನಲ್ಲೇ ಕಲೆಕ್ಟರ್ ಶ್ವೇತಾ ಮೊಹಾಂತಿ ಅವರು ಹೈದರಾಬಾದ್ನ ಬಂಜಾರ ಹಿಲ್ಸ್ ಏರಿಯಾದಲ್ಲಿನ 711 ಸ್ಕ್ವೇರ್ ಯಾರ್ಡ್ ಮನೆ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂತೋಷಿ ಅವರಿಗೆ ಹಸ್ತಾಂತರಿಸಿದರು.
ಸಂತೋಷಿ ಅವರ ಬಗ್ಗೆ ಮಾತನಾಡಿದ ಚಂದ್ರಶೇಖರ್ ರಾವ್, 4 ವರ್ಷದ ಮಗ ಮತ್ತು 8 ವರ್ಷದ ಮಗಳಿರುವ ಸಂತೋಷಿ ಅವರನ್ನು ಹೈದರಾಬಾದ್ ಸುತ್ತಮುತ್ತ ಏರಿಯಾದಲ್ಲೇ ಪೋಸ್ಟಿಂಗ್ ಹಾಕಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ಹುದ್ದೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ನೀಡಲು ಸಹ ತಿಳಿಸಿದ್ದಾರೆ. ಯಾವಾಗಲೂ ಸರ್ಕಾರ ಕರ್ನಲ್ ಬಾಬು ಕುಟುಂಬದ ಪರವಾಗಿ ನಿಲ್ಲುವುದಾಗಿ ರಾವ್ ಭರವಸೆ ನೀಡಿದ್ದಾರೆ.
39 ವರ್ಷದ ಕರ್ನಲ್ ಸಂತೋಷ್ ಬಾಬು ಸೇರಿದಂತೆ ಭಾರತೀಯ ಸೇನೆಯ 20 ಯೋಧರು ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಚೀನಾ ಯೋಧರೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು. 2004ರಲ್ಲಿ ಸೇನೆಗೆ ಸೇರಿದ್ದ ಸಂತೋಷ್ 16 ಬಿಹಾರ್ ರೆಜಿಮೆಂಟ್ನಲ್ಲಿ ಕಮ್ಯಾಂಡಿಂಗ್ ಅಧಿಕಾರಿಯಾಗಿದ್ದರು. (ಏಜೆನ್ಸೀಸ್)