ನ್ಯೂಸ್

ಗಂಡನ ದೇಹದಲ್ಲಿ ಲವ್​ ಬೈಟ್​ ನೋಡಿ ಜಗಳವಾಡಿದ ಹೆಂಡತಿ! ತಾಯಿ, ಸಹೋದರನ ವಿರುದ್ಧ ದೂರು ದಾಖಲಿಸಿದ ಗಂಡ!

ಅಹಮದಾಬಾದ್​: ಗಂಡನ ದೇಹದಲ್ಲಿ ಲವ್​ ಬೈಟ್​ ಕಂಡ ಹೆಂಡತಿ, ಅವನೊಂದಿಗೆ ಜಗಳಕ್ಕೆ ನಿಂತಿದ್ದು, ಇದೀಗ ಗಂಡ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ತನ್ನ ಅಮ್ಮ ಮತ್ತು ಸಹೋದರನೇ ಆತನ ಮೇಲೆ ಹಲ್ಲೆ ಮಾಡಿದ್ದಾಗಿ ಆತ ದೂರು ದಾಖಲಿಸಿದ್ದಾನೆ.

ಅಹಮದಾಬಾದ್​ನ ವಾಸ್ನಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜೀತು ಓಡ್​ ದೂರು ಸಲ್ಲಿಸಿರುವ ಪತಿ. ಈತ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಒಂದು ದಿನ ಈತನ ಕೈನಲ್ಲಿ ಲವ್​ ಬೈಟ್​ ಇರುವುದನ್ನು ಹೆಂಡತಿ ಕಂಡಿದ್ದಾಳೆ. ಇದು ಬೇರೆಯ ಹೆಂಗಸಿಂದಲೇ ಆಗಿರುವ ಲವ್​ ಬೈಟ್​ ಎಂದು ಆರೋಪಿಸಿದ್ದಾಳೆ. ಅದೇ ವಿಚಾರವಾಗಿ ಗಂಡನ ಜತೆ ಜಗಳಕ್ಕೆ ನಿಂತಿದೆ.

ಗಂಡ ಹೆಂಡತಿ ಜಗಳದ ಮಧ್ಯೆ ಹೆಂಡತಿಯ ಚಿಕ್ಕಪ್ಪನೂ ಹೋಗಿದ್ದಾನೆ. ನೀನು ನಿನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಚಿಕ್ಕಪ್ಪ ಆರೋಪಿಸಿದ್ದಾನೆ. ಈ ವಿಚಾರವಾಗಿ ಅವರಿಬ್ಬರ ನಡುವೆ ಜಗಳವಾಗಿದೆ. ಜೀತು ಮೇಲೆ ಹೆಂಡತಿಯ ಚಿಕ್ಕಪ್ಪ ಹಲ್ಲೆ ಮಾಡಿದನಂತೆ. ಆ ಕಾರಣವಿಟ್ಟುಕೊಂಡು ಜೀತು ಪೊಲೀಸ್​ ಠಾಣೆಯ ಮೆಟ್ಟಿಲೇರಿ, ದೂರು ದಾಖಲಿಸಿದ್ದಾನೆ.

ಈ ರೀತಿ ದೂರನ್ನಿತ್ತು ಮನೆಗೆ ಬಂದ ಜೀತುಗೆ ಆತನ ತಾಯಿ ಮತ್ತು ಸಹೋದರ ಬೈದಿದ್ದಾರೆ. ಇಬ್ಬರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರಂತೆ. ಎರಡನೇ ಬಾರಿಗೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಜೀತು ತನ್ನ ತಾಯಿ ಮತ್ತು ಸಹೋದರನ ವಿರುದ್ಧವೂ ದೂರು ದಾಖಲಿಸಿ ಬಂದಿದ್ದಾನೆ. (ಏಜೆನ್ಸೀಸ್​)