ನ್ಯೂಸ್

ಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ... ಬಳಿಕ ಆಗಿದ್ದೆಲ್ಲವೂ ದುರಂತ!

arunakunigal

ಚಿಕ್ಕಬಳ್ಳಾಪುರ: ಆಕೆ ಸುರಸುಂದರಿ, ಆದ್ರೂ ಆಕೆಗೆ ಮಕ್ಕಳಾಗೋ ಭಾಗ್ಯ ಕರುಣಿಸಲಿಲ್ಲ ಆ ದೇವರು! ಆದರೂ ಆಕೆಗೆ ಬಾಳು ಕೊಡುತ್ತೇನೆ ಎಂದು ಸುಂದರಿಯ ಪಾಲಕರನ್ನು ಒಪ್ಪಿಸಿದ ಮಹಾಶನೊಬ್ಬ ಮದುವೆಯನ್ನೂ ಮಾಡಿಕೊಂಡ. ಇದಾದ ಎರಡು ತಿಂಗಳೊಳಗೆ ಆಕೆ ದುರಂತ ಅಂತ್ಯಕಂಡಿದ್ದಾಳೆ.

ಬಾಗೇಪಲ್ಲಿ ಪಟ್ಟಣದ 17ನೇ ವಾರ್ಡ್​ನ ನಿವಾಸಿ ರಿಯಾಜ್ ಹಾಗೂ ಮುಮ್ತಾಜ್ ದಂಪತಿ ಪುತ್ರಿ ಆಯಿಷಾ ಮೃತ ದುರ್ದೈವಿ. 27 ವರ್ಷ ವಯಸ್ಸಾಗಿದ್ದರೂ ಆಯಿಷಾ ಋತುಮತಿ ಆಗಿರಲಿಲ್ಲ. ವೈದ್ಯರಿಗೆ ತೋರಿಸಿದ್ರೂ ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ಮಗಳಿಗೆ ಮಕ್ಕಳಾಗೋ ಭಾಗ್ಯ ಇಲ್ಲ ಅಂತ ಪೋಷಕರು ಮದುವೆ ಮಾಡುವ ಗೋಜಿಗೂ ಹೋಗಿರಲಿಲ್ಲ. ಇದನ್ನೂ ಓದಿರಿ ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

2 ತಿಂಗಳ ಹಿಂದೆ ತನ್ನ ಬಂಧು-ಬಳಗದ ಜೊತೆ ಆಯಿಷಾಳ ಮನೆಗೆ ಬಂದ ಗುಡಿಬಂಡೆ ಮೂಲದ ಇಮ್ತಿಯಾಜ್, 'ನನ್ನ ಹೆಂಡತಿ ತೀರಿಹೋಗಿದ್ದಾಳೆ. ನಿಮ್ಮ ಮಗಳನ್ನ ಚೆನ್ನಾಗಿ ನೋಡಿಕೊಳ್ತೀನಿ' ಎಂದು ಹೇಳಿ ಎರಡನೇ ಮದುವೆಯಾಗಿದ್ದ. ಆಯಿಷಾಗೆ ಮಕ್ಕಳು ಆಗಲ್ಲ ಎನ್ನುವ ವಿಚಾರವನ್ನು ಇಮ್ತಿಯಾಜ್​ ಮತ್ತು ಆತನ ಸಂಬಂಧಿಕರಿಗೆ ಆಯಿಷಾ ತಂದೆ ರಿಯಾಜ್​ ತಿಳಿಸಿಯೇ ಮಗಳ ಮದುವೆ ಮಾಡಿದ್ದರಂತೆ. ಸತ್ಯವನ್ನು ಮರೆಮಾಚಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿ ಗಂಡನ ಮನೆಯವರು ಗಲಾಟೆ ಮಾಡುತ್ತಿದ್ದರಂತೆ.

'ಮದುವೆಯಾದ ಒಂದು ತಿಂಗಳಷ್ಟೆ ಆಗಿತ್ತು. ಆಗಲೇ ಕಿರುಕುಳ ಕೊಟ್ಟು ತವರು ಮನೆಗೆ ಮಗಳನ್ನು ಅಳಿಯ ಕಳುಹಿಸಿದ್ದ. 20 ದಿನಗಳಿಂದ ನಮ್ಮ ಮನೆಯಲ್ಲೇ ಇದ್ದ ಆಯಿಷಾ ದಿನನಿತ್ಯ ನೊಂದುಕೊಳ್ಳುತ್ತಿದ್ದಳು. ಗಂಡನಿಗೆ ಫೋನ್ ಮಾಡಿದರೂ 'ನನಗೆ ಫೋನ್ ಮಾಡಬೇಡ' ಎಂದು ಬೈಯ್ಯುತ್ತಿದ್ದ. ರಾಜೀ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸೋಣ ಅಂದ್ರೂ ಅಳಿಯ ಬರುತ್ತಿರಲಿಲ್ಲ. ಸಾಕಷ್ಟು ನೊಂದಿದ್ದ ಆಯಿಷಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ' ಎಂದು ಮೃತಳ ತಂದೆ ರಿಯಾಜ್ ಆರೋಪಿಸಿದ್ದಾರೆ.

ಮದುವೆಗೆ ಮನೆಯ ಮುಂದೆ ಹಾಕಿದ್ದ ಚಪ್ಪರ ತೆಗೆಯುವ ಮುನ್ನವೇ ಮಗಳು ದುರಂತ ಸಾವಿಗೀಡಾಗಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆ ಸೂತಕದ ಮನೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಬಾಗೇಪಲ್ಲಿ ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)