ಮಧ್ಯಪ್ರದೇಶದಲ್ಲಿ ಗಂಡನನ್ನು ಬೆನ್ನ ಮೇಲೆ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ತಂದ ಮಹಿಳೆ
9 ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿ ಕಾಲು ಕಳೆದುಕೊಂಡಿರುವ ಪತಿ
ತ್ರಿಚಕ್ರ ವಾಹನ, ಪಿಂಚಣಿಗಾಗಿ ಅಧಿಕಾರಿಗಳ ಬಾಗಿಲು ತಟ್ಟುತ್ತಿರುವ ಬಡ ದಂಪತಿ
Madhya Pradesh Collectorate: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಹ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಪಾರ್ಶ್ವವಾಯುವಿಗೆ ಒಳಗಾಗಿ ಕಾಲು ಕಳೆದುಕೊಂಡಿರುವ ಪತಿಯನ್ನು ಹೆಂಡತಿಯೊಬ್ಬರು ಬೆನ್ನ ಮೇಲೆ ಹೊತ್ತು ತಂದು, ಅವರಿಗೆ ತ್ರಿಚಕ್ರ ವಾಹನ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಿಕೊಡುವಂತೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಮಹಾಜನ ಕಾಲೋನಿಯ ಬಿಂದುಬಾಯಿ ಎಂಬ ಮಹಿಳೆ, ಒಂಬತ್ತು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ ತಮ್ಮ ಪತಿ ದಯಾಶಂಕರ್ ಅವರನ್ನು ಬೆನ್ನ ಮೇಲೆ ಹೊತ್ತುಕೊಂಡೇ ಜಿಲ್ಲಾಧಿಕಾರಿ ವಿವೇಕ್ ಕುಮಾರ್ ಕಚೇರಿಗೆ ತಲುಪಿದ್ದಾರೆ.
ಚಿಕಿತ್ಸೆ ವೇಳೆ ಒಂದು ಕಾಲನ್ನು ಕಳೆದುಕೊಂಡಿದ್ದರಿಂದ ದಯಾಶಂಕರ್ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕಳೆದ ಒಂಬತ್ತು ವರ್ಷಗಳಿಂದ ಬಿಂದುಬಾಯಿ ಅವರೇ ಪತಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟದಲ್ಲಿದ್ದರೂ ಸರ್ಕಾರದಿಂದ ಯಾವುದೇ ಪಿಂಚಣಿ ಅಥವಾ ತ್ರಿಚಕ್ರ ವಾಹನದ ಸೌಲಭ್ಯ ಸಿಕ್ಕಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
‘ಪತಿಯನ್ನು ನಿರಂತರವಾಗಿ ಬೆನ್ನ ಮೇಲೆ ಹೊತ್ತು ಸಾಗುವುದರಿಂದ ನನಗೂ ದೈಹಿಕ ತೊಂದರೆಯಾಗುತ್ತಿದೆ. ಸರ್ಕಾರದ ನೆರವು ಸಿಗದೆ ಮಾನಸಿಕವಾಗಿಯೂ ನೊಂದಿದ್ದೇನೆ’ ಎಂದು ಬಿಂದುಬಾಯಿ ನೋವು ತೋಡಿಕೊಂಡಿದ್ದಾರೆ. ಆದರೆ ಡಿಸಿ ಕಚೇರಿಯಲ್ಲೂ ತಕ್ಷಣಕ್ಕೆ ಯಾವುದೇ ನೆರವು ಸಿಗದ ಕಾರಣ, ಅವರು ಮತ್ತೆ ಪತಿಯನ್ನು ಬೆನ್ನ ಮೇಲೆ ಹೊತ್ತುಕೊಂಡೇ ನಿರಾಶೆಯಿಂದ ಮನೆಗೆ ಹಿಂತಿರುಗಬೇಕಾಯಿತು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಎರಡು ವರ್ಷಗಳ ಹಿಂದೆ ಇವರಿಗೆ ವೀಲ್‌ಚೇರ್ ನೀಡಲಾಗಿದ್ದು, ನಿಯಮದಂತೆ 3 ವರ್ಷಗಳ ನಂತರವಷ್ಟೇ ತ್ರಿಚಕ್ರ ವಾಹನ ನೀಡಲು ಸಾಧ್ಯ. ಸದ್ಯ ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರವೇ ಪಿಂಚಣಿ ಹಾಗೂ ಟ್ರೈಸಿಕಲ್ ಸೌಲಭ್ಯ ಕಲ್ಪಿಸಲಾಗುವುದು’ ಎಂದಿದ್ದಾರೆ.