ನ್ಯೂಸ್

ಕಾಪು ದಾಸ್ತಾನು ಮೊತ್ತ ಕಡಿತವೇಕೆ ?: ಎನ್.ರವಿಕುಮಾರ್ ಪ್ರಶ್ನೆ‌| Fertilizer shortage

ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಗೊಬ್ಬರದ ಕೊರತೆಯಾಗದಂತೆ ನಿಗಾವಹಿಸಲು, ರಸಗೊಬ್ಬರ ಖರೀದಿಗೆ ಹಣಕಾಸಿನ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕಾಪು ದಾಸ್ತಾನು ಅಂದರೆ ಬಫರ್ ದಾಸ್ತಾನನ್ನು ಇಡಲು ಹಿಂದಿನ ಬಿಜೆಪಿ ಸರ್ಕಾರ 1000 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಸಿದ್ದರಾಮಯ್ಯ ಅವರ ಗೊಬ್ಬರ ಬಫರ್ ದಾಸ್ತಾನನ್ನು ಇಡಲು ತೆಗೆದಿಟ್ಟಿರುವ ಹಣ ಕೇವಲ 400 ಕೋಟಿ ರೂ. ಈ ಮೊತ್ತ ಕಡಿತ ಮಾಡಿದ್ದೇಕೆ ? ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ  ಮಾಧ್ಯಮಗಳ ಜತೆ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಯುರಿಯಾ ಗೊಬ್ಬರವನ್ನು ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ಅದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆಕೊಟ್ಟಿದೆ ಎಂದರು.

ಉತ್ತರ -ದಕ್ಷಿಣ ಕರ್ನಾಟಕಗಳಲ್ಲಿ ರಾಗಿ, ಜೋಳ, ಮೆಕ್ಕೆಜೋಳ, ಹೆಸರು ಮುಂತಾದ ಬೆಳೆಗೆ ಗೊಬ್ಬರದ ಅವಶ್ಯಕತೆ ಇದೆ. ಆದರೆ ಯುರಿಯಾ ಗೊಬ್ಬರವನ್ನು ಸರಬರಾಜು ಮಾಡಲು ರಾಜ್ಯ ಸರ್ಕಾರದಿಂದ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಸಿರು ಗೊಬ್ಬರ ಬಹಳ ಕಡಿಮೆ. ಆ ಭಾಗದಲ್ಲಿ ಯುರಿಯಾ ಗೊಬ್ಬರವನ್ನೇ ಹೆಚ್ಚು ಉಪಯೋಗಿಸುತ್ತಾರೆ. ಅಲ್ಲಿನ ರೈತರಿಗೆ ಯುರಿಯಾ ಗೊಬ್ಬರ ಸಿಗದೆ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.

ಬೆಳೆ ರಕ್ಷಣೆ ತಾಪತ್ರಯ

ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿರುವ ಕಾರಣ ರೈತರ ಬೆಳೆಗೆ ಶೀತವಾಗಿದೆ. ಬೆಳೆಗೆ ಗೊಬ್ಬರ ನೀಡಿದರೆ ಬೆಳೆ ಚೆನ್ನಾಗಿ ಬರುತ್ತದೆ ಇಲ್ಲವೆಂದರೆ ಬೆಳೆ ಬರುವುದಿಲ್ಲ ಎಂದು ರೈತರು ಮಾತನಾಡುತ್ತಿದ್ದಾರೆ. ರೈತರ ಗೋಳನ್ನು ಕೇಳುವವರು ಯಾರು ಇಲ್ಲ ಎಂದು ಆರೋಪಿಸಿದರು.

ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದ ಗೊಬ್ಬರದ ಕೇಂದ್ರಗಳಲ್ಲಿ ಸಾವಿರಾರು ಸಂಖ್ಯೆಯ ರೈತರು ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕೂಡಲೇ ಯುರಿಯಾ ಗೊಬ್ಬರ ಒದಗಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಯುರಿಯಾ ಗೊಬ್ಬರದ ಪರ್ಯಾಯವಾಗಿ ನ್ಯಾನೋ ಯುರಿಯಾ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರಚಾರ ಮಾಡಿಲ್ಲ. ಯುರಿಯಾ ಗೊಬ್ಬರ ಸಿಗದಿದ್ದಾಗ ನ್ಯಾನೋ ಯುರಿಯಾ ಬಳಕೆ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಿತ್ತು; ಆದರೆ ಮಾಡಿಲ್ಲ್ಲ ಎಂದು ರವಿಕುಮಾರ್ ದೂರಿದರು.

ಕಾಂಗ್ರೆಸ್ ಸರ್ಕಾರ ನ್ಯಾನೋ ಯುರಿಯಾ ಸಿಂಪಡಣೆಗೆ ಬೇಕಾದ ಯಂತ್ರಗಳಿಗೆ ಸಹಾಯಧನಕ್ಕೆ ಅನುದಾನ ಕೊಡುತ್ತಿಲ್ಲ. ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಂಡು ಮಣ್ಣಿನಲ್ಲಿ ಸೇರಿಸುವ ಜೈವಿಕ ಗೊಬ್ಬರಗಳ ವಿತರಣೆಯನ್ನು ಕಡಿತಗೊಳಿಸಿದ್ದಾರೆ.

ಸಹಾಯಧನ ನೀಡಿಲ್ಲ

ಹಸಿರೆಲೆ ಗೊಬ್ಬರ ಮಾಡಲು ರೈತರಿಗೆ ಸಹಾಯಧನ ನೀಡಿರುವುದಿಲ್ಲ. ಇದ್ಯಾವುದೇ ಕಾರ್ಯವನ್ನು ಮಾಡದೆ ರೈತರನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ನವರ ಸರ್ಕಾರ ಕಡೆಗಣಿಸಿದೆ ಎಂದು ಆಕ್ಷೇಪಿಸಿದರು.

ಒಂದೆಡೆ ಜಾನುವಾರುಗಳು ಕಡಿಮೆಯಾಗುತ್ತಿವೆ. ಜಾನುವಾರು ಕಳವು ಮಾಡುವವರಿಗೆ ಈ ಸರ್ಕಾರ ಸಹಾಯ ಮಾಡುತ್ತದೆಯೇ ವಿನಾ ಅವನ್ನು ಸಾಕುವುದಕ್ಕೆ ಯಾವ ನೆರವನ್ನೂ ನೀಡುತ್ತಿಲ್ಲ. ಹಾಲಿನ ಪ್ರೋತ್ಸಾಹಧನವನ್ನೂ ನೀಡುತ್ತಿಲ್ಲ. ಇದರಿಂದ ರೈತರಿಗೆ ಏಟಿನಮೇಲೆ ಏಟು ಬೀಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರಿಗೆ ಗುಣಮಟ್ಟದ ರಸಗೊಬ್ಬರ ನೀಡುತ್ತಿಲ್ಲ. ಖಾಸಗಿ ಕಂಪನಿಗಳು ಕಳಪೆ ಬಿತ್ತನೆ ಬೀಜಗಳನ್ನು  ನೀಡುತ್ತಿದ್ದು, ರೈತರಿಗೆ ಉತ್ತಮ ಬೆಳೆ ಬರುತಿಲ್ಲ. ಪ್ರಸ್ತುತ ಮಳೆ ಚೆನ್ನಾಗಿ ಇರುವುದರಿಂದ ರೈತರಿಗೆ ಉತ್ತಮ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗದೇ ಇದ್ದಲ್ಲಿ ರೈತರಿಗೆ ಬಿತ್ತನೆ ಮಾಡುವ ಸಮಯ ಕಳೆದು ಹೋದರೆ ಬೆಳೆ ಬರುವುದಿಲ್ಲ. ಹಾಗಾಗಿ ರೈತರನ್ನು ಸಂಪೂರ್ಣವಾಗಿ ಈ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದರು.

ಬೇಜವಾಬ್ದಾರಿ ವರ್ತನೆ

ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಿತ್ತನೆ ಬೀಜದ ಬೆಲೆಯನ್ನು ಪ್ರತಿ ಕ್ವಿಂಟಲಿಗೆ ಶೇ 20 ರಷ್ಟು ಹೆಚ್ಚಿಸಿದೆ. ಸರ್ಕಾರ ತನ್ನ ದಾರಿದ್ರ್ಯ ಮತ್ತು ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಎಲ್ಲ ಬೆಲೆ ಏರಿಕೆಯನ್ನು ಮಾಡಿದೆ ಎಂದು ಟೀಕಿಸಿದರು.

ಬರ ಪರಿಹಾರವಾಗಿ ಕೇಂದ್ರ ಸರ್ಕಾರ ನೀಡಿದ 3,454 ಕೋಟಿ ಅನುದಾನದಲ್ಲಿ ನಯಾಪೈಸೆಯನ್ನು ರಾಜ್ಯದ ರೈತರಿಗೆ ಖರ್ಚು ಮಾಡಿಲ್ಲ. ರೈತರಿಗೆ ನೆರವಾಗಬೇಕು ಎಂದು ಹೇಳಿ ಬರ ಪರಿಹಾರವಾಗಿ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ರೈತರಿಗೆ ಖರ್ಚು ಮಾಡದೆ ಬೇರೆ ಉದ್ದೇಶಕ್ಕೆ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ, ರೈತರ ಬೆನ್ನಿನ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.

ರೈತರಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಧರ್ಮಪತ್ನಿ ಅವರು ತಮ್ಮ ಒಡವೆಗಳನ್ನು ಮುಂಬೈನ ಬ್ಯಾಂಕಿನಲ್ಲಿ ಅಡಮಾನವಿಟ್ಟು ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಮಂಡ್ಯ ರೈತರಿಗೆ, ಹಾಸನ ರೈತರಿಗೆ ಮತ್ತು ಬೆಂಗಳೂರು ನಗರದ ಜನರಿಗೆ ನೀರನ್ನು ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯನವರು ರೈತರಿಗಾಗಿ ಯಾವ ಅಣೆಕಟ್ಟನ್ನು ಕಟ್ಟಿದ್ದಾರೆ? ಯಾರಿಗೆ ನೀರನ್ನು ಕೊಟ್ಟಿದ್ದಾರೆ ಎಂದು ಎನ್.ರವಿಕುಮಾರ್ ಪ್ರಶ್ನಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್, ಕಾರ್ಯದರ್ಶಿ ಸತೀಶ್ ಕಡತನಮಲೆ, ಬೆಂಗಳೂರು ಉತ್ತರ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ ಮೂರ್ತಿ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷ ರುದ್ರಪ್ಪ ಉಪಸ್ಥಿತರಿದ್ದರು.