ನ್ಯೂಸ್

'ಕೈ'ಗೆ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ, ಪರಂಪರೆ ಎಂದರೆ ಯಾಕಿಷ್ಟು ದ್ವೇಷ, ಅಸಡ್ಡೆ?: ಆರ್​. ಅಶೋಕ ಕಿಡಿ

ಮೋಹನ್​ ಶೆಟ್ಟಿ

ಬೆಂಗಳೂರು: ಗಂಗೆಯಲ್ಲಿ ಮಿಂದೆದ್ದರೆ ಬಡತನ ನಿರ್ಮೂಲನೆ ಆಗುತ್ತಾ ಎಂದು ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವ್ಯಂಗ್ಯವಾಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​. ಅಶೋಕ, 144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳದ ಈ ಪರಮ ಪವಿತ್ರ ಪರ್ವಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಒಮ್ಮೆ ಮಿಂದರೆ ಪಾಪಗಳೆಲ್ಲವೂ ಕಳೆಯುತ್ತದೆ, ಪುಣ್ಯ ಲಭಿಸುತ್ತದೆ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆಯಾಗಿದೆ ಎಂದರು.

"ಭಾರತೀಯತೆ, ಸನಾತನ ಧರ್ಮದ ಬಗ್ಗೆ ಕಣಕಣದಲ್ಲೂ ದ್ವೇಷ ತುಂಬಿಕೊಂಡಿರುವ ನಕಲಿ ಗಾಂಧಿ ಕುಟುಂಬವನ್ನು ಓಲೈಸುವ ಭರದಲ್ಲಿ, ಶತಕೋಟಿ ಹಿಂದೂಗಳ ನಂಬಿಕೆಯನ್ನು ಯಾಕೆ ಅಪಮಾನಿಸುತ್ತೀರಿ? ಹಜ್ ಯಾತ್ರೆ ಬಗ್ಗೆಯೋ, ರಂಜಾನ್ ಉಪವಾಸದ ಬಗ್ಗೆಯೋ ಈ ರೀತಿ ಟೀಕೆ ಮಾಡುವ ಧೈರ್ಯ ತೋರಿ ನೋಡೋಣ" ಎಂದು ಕಿಡಿಕಾರಿದರು.

"ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಎಲ್ಲರಿಗೂ ತಮ್ಮ ತಮ್ಮ ಮತ, ಧರ್ಮ, ನಂಬಿಕೆಗಳನ್ನು ಆಚರಣೆ ಮಾಡುವ ಹಕ್ಕಿದೆ, ಸ್ವಾತಂತ್ರ್ಯವಿದೆ. ಗಂಗೆಯಲ್ಲಿ ಮಿಂದೇಳುವ ಆಚರಣೆಯನ್ನು ಪ್ರಶ್ನೆ ಮಾಡೋದು, ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಸಂವಿಧಾನಕ್ಕೂ ಅಪಚಾರ ಮಾಡಿದಂತೆ" ಎಂದು ಹೇಳಿದ್ದಾರೆ.