ನ್ಯೂಸ್

ಪರಂಪರೆ ತಿಳಿದುಕೊಳ್ಳದೆ ಹೀಯಾಳಿಸುವುದು ಏಕೆ?

Webdesk - Ravikanth
| ಡಾ. ಪ್ರಿಯಾಂಕ ಎಂ.ಜಿ.

ಇತ್ತೀಚೆಗೆ ಒಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು, ಅಲ್ಲಿ ಒಬ್ಬರು ವೇದದ ಬಗ್ಗೆ ಮಾತನಾಡಲು ಶುರುಮಾಡಿ, ‘ಅದು ನಮಗೆ ಬೇಕಾಗಿಲ್ಲ, ಅದೇನು ನಮಗೆ ಹೊಟ್ಟೆ ತುಂಬಿಸುತ್ತ? ಅವೆಲ್ಲ ಬರೀ ಬಡಾಯಿ, ಆದರೆ ನನಗೆ ಅದೇನು ಅಂತ ಗೊತ್ತಿಲ್ಲ. ಆದ್ರೂ ಅದು ವೇಸ್ಟ್’ ಎಂದಾಗ ಆ ಮಾತಿಗೆ ಅನೇಕರು ಪ್ರತ್ಯುತ್ತರವಾಗಿ ತಲೆಯಾಡಿಸುತ್ತ ಭಾರಿ ಚರ್ಚೆ ಮಾಡುತ್ತಿದ್ದರು. ಅದನ್ನು ಕೇಳಿದ ನಂತರ ನನಗೆ ಅನ್ನಿಸಿದ್ದು ವೇದ ಅಂದರೆ ಏನು ಅಂತನೇ ಗೊತ್ತಿಲ್ಲ, ಅದು ಹೇಗೆ ಪ್ರಯೋಜನಕ್ಕೆ ಬಾರದ್ದು ಎಂದು ಅದಕ್ಕೆ ಹಣೆಪಟ್ಟಿ ಕಟ್ಟಿಯಾರು! ಹಾಗಾಗಿ ಯಾವುದಾದರೂ ವಿಷಯವನ್ನು ವೇಸ್ಟ್ ಅಥವಾ ಬೆಸ್ಟ್ ಎಂದು ಪರಿಗಣಿಸುವ ಮುನ್ನ ನಾವು ಅದರ ಬಗ್ಗೆ ಒಂದಿಷ್ಟು ಮಾಹಿತಿ ಅರಿತು ಮಾತನಾಡುವುದು ಲೇಸು.

ವೇದ ಅಂದರೆ ಜೀವನ, ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ವೇದಾಂತ ಎನ್ನುವುದು. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) ಆಗುವುದೆ ಉಪನಿಷತ್. ‘ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು’ ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್​ಗಳ ಭಾಷ್ಯದಲ್ಲಿ ಉಪನಿಷತ್ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ವೇದ ಒಂದು ಧರ್ಮಕ್ಕೆ, ಮತಕ್ಕೆ, ಅಥವಾ ಬರೀ ವೈದಿಕರಿಗೆ, ಮುಮುಕ್ಷಕರಿಗೆ ಸೇರಿದ ಸ್ವತ್ತಲ್ಲ, ಇದು ಇಡೀ ವಿಶ್ವದ ಸ್ವತ್ತು. ವೇದಾಂತವೆನ್ನುವುದು ಒಂದು ಮತವಲ್ಲ, ಅದು ಸಿದ್ಧಾಂತ. ಮತಿಯಿಂದ ಹುಟ್ಟಿದ್ದು ಮತ, ಆದರೆ ಅನುಭವದಿಂದ ಬಂದದ್ದು ತತ್ತ್ವ ಸಿದ್ಧಾಂತ. ಸಂಸಾರಿಗಳಿಗಂತೂ ಈ ವೇದಾಂತದ ಅಧ್ಯಯನ ಕಡ್ಡಾಯ, ಏಕೆಂದರೆ ಮನುಷ್ಯನ ಅಂತಃಸತ್ವವನ್ನು ವಿಕಾಸ ಮಾಡುವ ಎಲ್ಲ ಜ್ಞಾನ ಅದರಲ್ಲಿದೆ. ಅದು ಮನುಷ್ಯನನ್ನು ಜಾಗೃತ ಜೀವನದತ್ತ ಕೊಂಡೊಯ್ಯುವುದರ ಜೊತೆಗೆ ಆತ್ಮಸಂತೋಷವನ್ನು ಉಂಟುಮಾಡುವ ಒಂದು ದಿವ್ಯಸಾಧನ. ಮಾನವ ಲೌಕಿಕ ಸುಖಕ್ಕಿಂತ ಅಲೌಕಿಕ ಸುಖದೆಡೆಗೆ ಹೋದಷ್ಟು ಅವನು ಹೆಚ್ಚು ಶಾಂತವಾಗಿರುತ್ತಾನೆ. ಮನೆ, ಕಾರು, ಐಶ್ವರ್ಯ ಇವೆಲ್ಲ ಕ್ಷಣಿಕ ಸುಖ ನೀಡುವ ಸಲಕರಣೆಗಳು. ಆದರೆ ನಾವು ಶಾಶ್ವತವಾದ ಪರಮ ಸುಖದೆಡೆಗೆ ಸಾಗಬೇಕು. ಅಂತಹ ಅತೀವ ಶಾಂತ ಮತ್ತು ಸುಖವನ್ನು ಕೊಡುವ ಏಕೈಕ ಮಾರ್ಗ ಅದುವೇ ವೇದಾಂತ (ಸತ್ಯಮಾರ್ಗ).

ಆತ್ಮಜ್ಞಾನವೇ ಮುಖ್ಯ: ಕುವೆಂಪು, ತೇಜಸ್ವಿ, ಬೇಂದ್ರೆ, ವರ್ಡ್ಸ್ ವರ್ತ್ ಇನ್ನು ಅನೇಕರು ತಮ್ಮ ಸಾಹಿತ್ಯಗಳಲ್ಲಿ ವೇದಾಂತಗಳ ಹಲವು ಮಜಲುಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಆದರೆ, ನಮ್ಮ ಅಜ್ಞಾನದಿಂದಾಗಿ ವೇದಗಳನ್ನು ತಪ್ಪಾಗಿ ಗ್ರಹಿಸಿ ಅದು ಬ್ರಾಹ್ಮಣರಿಗೆ, ಪೌರೋಹಿತ್ಯಕ್ಕೆ ಮಾತ್ರ ಸೀಮಿತ ಎಂದೂ, ಎಡ, ಬಲ ಹೀಗೆ ಅನೇಕ ಪಂಥಗಳನ್ನು ಸೃಷ್ಟಿಸಿಕೊಂಡು ಜೀವನವನ್ನು ಖೇದಮಯವನ್ನಾಗಿ ಮಾಡಿಕೊಂಡುಬಿಟ್ಟಿದ್ದೇವೆ. ಮಹರ್ಷಿ ಆಪಸ್ತಂಭರು ತಮ್ಮ ‘ಧರ್ಮಸೂತ್ರ’ದಲ್ಲಿ, ‘ಹೇಗೆ ಒಂದು ಮಾವಿನ ಮರವನ್ನು ಹಣ್ಣಿಗಾಗಿ ನೆಟ್ಟರೂ ಅದು ಅಷ್ಟಕ್ಕೆ ಸೀಮಿತವಾಗದೆ ಎಷ್ಟೋ ಜೀವಿಗಳಿಗೆ ನೆರಳಾಗಿ, ಹೂವಾಗಿ, ಹಣ್ಣಾಗಿ ನಾನಾ ರೀತಿಯಾಗಿ ಉಪಯೋಗಕ್ಕೆ ಬರುತ್ತದೆಯೋ, ಹಾಗೆಯೇ ಮನುಷ್ಯ ಸತ್ಯಮಾರ್ಗದಲ್ಲಿದ್ದರೆ, ಧರ್ವಚರಣೆ ಮಾಡುತ್ತಿದ್ದರೆ ಐಹಿಕ ಸುಖ ತಾನಾಗಿಯೇ ಬರುತ್ತದೆ’ ಎಂದು ವಿವರಿಸಿದ್ದಾರೆ. ಮನುಷ್ಯ ಐಹಿಕಕ್ಕಾಗಿ ತನ್ನ ಜೀವನವನ್ನು ಮುಡುಪಾಗಿ ಇಡುವ ಅವಶ್ಯಕತೆ ಇಲ್ಲ. ಧರ್ಮಮಾರ್ಗಿಯಾಗಿದ್ದರೆ ಸಾಕು ಅವನು ಕಲ್ಪಿಸಿದ್ದು ಅವನ ಕರ್ವನುಸಾರವಾಗಿ ಸಿದ್ಧಿಯಾಗುತ್ತದೆ. ಮೂಲವಾಗಿ ಮನುಷ್ಯ ಹುಟ್ಟಿರುವುದು ಇಂತಹ ಕ್ಷಣಿಕ ಸುಖದ ಸಂಗ್ರಹಕ್ಕಾಗಿ ಅಲ್ಲ, ಬದಲಿಗೆ ತನ್ನ ಆತ್ಮೊದ್ಧಾರ(ಆತ್ಮಜ್ಞಾನ) ಮಾಡಿಕೊಳ್ಳಲಿಕ್ಕೆ. ಇಂತಹ ಮಹತ್ವವಾದ ಜ್ಞಾನವಿಲ್ಲದೆ ಮಾನವನ ಬದುಕು ಅರ್ಥಹೀನ.

ವಾಸ್ತವ ಅರಿಯಬೇಕು: ಇತ್ತೀಚಿನ ದಿನಗಳಲ್ಲಿ ಅನೇಕ ವಿದೇಶಿಯರು ಭಾರತೀಯ ಪರಂಪರೆಯತ್ತ ಒಲವು ತೋರುತ್ತಿದ್ದಾರೆ. ಅಲ್ಲಿನ ಶಾಲೆಗಳಲ್ಲಿ ವೇದಮಂತ್ರಗಳ ಪಠಣವನ್ನು ಕಡ್ಡಾಯವಾಗಿ ಮಾಡಿಸುತ್ತಿದ್ದಾರೆ. ಆದರೆ ನಾವು ಭಾರತೀಯರು ನಮ್ಮ ಪರಂಪರೆಯ ಮಹತ್ವ ಅರಿಯುತ್ತಿಲ್ಲ. ವೇದೋಪನಿಷತ್ತುಗಳನ್ನು ಯಥೋಚಿತವಾಗಿ ವಿಶ್ಲೇಷಣೆ ಮಾಡುವವರೇ ಇಲ್ಲವಾಗಿದೆ. ಇದೇ ಕಾರಣಕ್ಕೆ ಅಲ್ಲಮ ಪ್ರಭುಗಳ ‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರಗೋಷ್ಠಿ...’ ಎಂಬ ವಚನವು ಪ್ರಸ್ತುತ ಸಂದರ್ಭಕ್ಕೆ ಬಹಳ ಮುಖ್ಯವಾದ ಚಿಂತನೆಯಾಗಿ ಕಂಡುಬರುತ್ತದೆ. ನಿಜವಾದ ಅರ್ಥದಲ್ಲಿ ಜಾತಿಯೆನ್ನುವುದು ಮಾನವನ ಆಯಾ ಜ್ಞಾನದ ಮೇಲೆ ಅವಲಂಬನೆಯಾಗಿರುತ್ತದೆ. ಪುರಾಣ ಕಾಲದಲ್ಲಿ ಶೂದ್ರರೂ ಬ್ರಾಹ್ಮಣರಾಗಿದ್ದಂಥ ಅನೇಕ ನಿದರ್ಶನಗಳು ನಮ್ಮಲ್ಲಿವೆ. 20ನೇ ಶತಮಾನದಲ್ಲಿ ಡಾ. ಅಂಬೇಡ್ಕರ್ ಅವರದ್ದು ಪೂರ್ಣ ಪರಿಶುದ್ಧ ಪುಣ್ಯಜೀವನ. ಅವರ ವಿದ್ವತ್ತು ಮತ್ತು ಜ್ಞಾನದ ಎತ್ತರ ಹೋಲಿಕೆಗೆ ನಿಲುಕುವಂತಹದ್ದಲ್ಲ. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಪ್ರಪಂಚದ ದೊಡ್ಡ ವಿದ್ವನ್ಮಣಿಗಳನ್ನು ಪಟ್ಟಿ ಮಾಡುವಾಗ ಇಟ್ಟ ಮೊಟ್ಟಮೊದಲ ಹೆಸರೇ ಅಂಬೇಡ್ಕರ್ ಅವರದ್ದು. ಆದರೆ ನಮಗೆ ಅವರ ಜಾತಿ ಕಾಣಿಸಿತೇ ಹೊರತು, ಜ್ಞಾನವಲ್ಲ.

ಕೆಲವರು ಕುವೆಂಪು ಅವರನ್ನು ಬ್ರಾಹ್ಮಣವಿರೋಧಿ ಎಂದು ಟೀಕಿಸುತ್ತಾರೆ, ಆದರೆ ಕುವೆಂಪು ಎಂದೂ ಬ್ರಾಹ್ಮಣರನ್ನು ದೂಷಿಸಲಿಲ್ಲ. ಬದಲಿಗೆ ಅವರು ‘ರಾಮಾಯಣ ದರ್ಶನ’ವನ್ನು ವೆಂಕಣ್ಣಯ್ಯನವರಿಗೆ ಸಮರ್ಪಿಸಿದ್ದಾರೆ. ಶೂದ್ರನ ಕೈಯಲ್ಲಿದ್ದ ಪೊರಕೆಯನ್ನು, ದಲಿತನ ತಲೆಯ ಮೇಲಿದ್ದ ಬುಟ್ಟಿಯನ್ನು ಬ್ರಾಹ್ಮಣನ ಮೇಲೆ ಹೊರೆಸಿ ಅವರೇನು ಸಂತುಷ್ಟರಾಗಿಲ್ಲ, ಬದಲಿಗೆ ಸಾಮಾಜಿಕ ನೆಲೆಗಟ್ಟಿನಲ್ಲಿ ಸಮಾನತೆಯ ಪರಿಸರವನ್ನು ನಿರ್ವಿುಸಲು ಅವರು ಸದಾ ಧ್ಯಾನಿಸಿದ ಜೀವಂತ ಕಾವ್ಯ. ಒಬ್ಬ ವಿಶ್ವಮಾನವನಿಗೆ ಬ್ರಾಹ್ಮಣ, ಶೂದ್ರ ಎಂಬ ಸಂಕುಚಿತ ಭಾವವಾದರೂ ಹೇಗೆ ಬರಲು ಸಾಧ್ಯ. ಅವರ ಜಗತ್ತಿನ ವಿಸ್ತಾರ ಇಡೀ ವಿಶ್ವವಾಗಿತ್ತು. ಒಟ್ಟಾರೆಯಾಗಿ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಬ್ರಾಹ್ಮಣ ಎನ್ನುವುದು ಜಾತಿಯಲ್ಲ, ಜನಾಂಗವಲ್ಲ ಅದು ತಿಳಿವಳಿಕೆ. ಹಾಗಾಗಿ ಸಾಮಾಜಿಕ ತಾರತಮ್ಯದ ಬಗ್ಗೆ ವಿಚಾರ ಮಾಡುವ ವರ್ಗದವರು ಇದಕ್ಕೆ ಒಂದು ನಿರ್ದಿಷ್ಟ ಜಾತಿಯವರನ್ನು ಹೊಣೆ ಮಾಡಬಾರದೆಂಬ ಕನಿಷ್ಠ ಸಾಮಾಜಿಕ ಸಭ್ಯತೆಯನ್ನು ತಮ್ಮ ಚರ್ಚೆಯಲ್ಲಿ ಕಾಪಾಡಿಕೊಳ್ಳಬೇಕಾಗುತ್ತದೆ.

ನಮ್ಮ ನಾಡು, ನುಡಿ, ಪರಂಪರೆ ಮತ್ತು ಸಮೃದ್ಧ ಸಂಸ್ಕೃತಿಯನ್ನು ಹೀಯಾಳಿಸದೆ, ಬ್ರಾಹ್ಮಣ, ಬ್ರಾಹ್ಮಣ್ಯ, ಮತ-ಧರ್ಮ ಎಂದು ಕಚ್ಚಾಡದೆ ಸಾಮರಸ್ಯ ಬೆಳೆಸಿಕೊಳ್ಳಬೇಕು. ನಮ್ಮನ್ನು ನಾವು ನಿರಂಕುಶಮತಿಗಳನ್ನಾಗಿಸಿಕೊಂಡು, ಸನಾತನ ಪರಮ ಜ್ಞಾನವನ್ನು ಪಡೆದುಕೊಂಡು ವಿಶ್ವಮಾನವರಾಗುವುದರೊಂದಿಗೆ ರಾಷ್ಟ್ರನಿರ್ವಣದತ್ತ ಗಮನಹರಿಸೋಣ.

(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)