ನ್ಯೂಸ್

ಮೊದಲ ಔಷಧ ಸಿದ್ಧ: ರಷ್ಯಾ ಅಧ್ಯಕ್ಷ ಘೋಷಣೆ, ಪುತಿನ್ ಮಗಳಿಗೂ ಲಸಿಕೆ

ಮಾಸ್ಕೊ: ಕರೊನಾ ಔಷಧ ತಯಾರಿಕೆಗೆ ಭಾರಿ ಪೈಪೋಟಿ ಏರ್ಪಟ್ಟಿರುವ ಬೆನ್ನಲ್ಲಿಯೇ ಕೋವಿಡ್-19 ಸೋಂಕಿಗೆ ವಿಶ್ವದಲ್ಲೇ ಮೊದಲನೆಯ ಔಷಧ ಸಿದ್ಧಪಡಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಔಷಧ ಸಿದ್ಧವಾಗಿರುವುದನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮಂಗಳವಾರ ಅಧಿಕೃತವಾಗಿಯೇ ಘೋಷಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಮಗಳಿಗೂ ಈ ಲಸಿಕೆ ನೀಡಲಾಗಿದೆ ಎಂದಿದ್ದಾರೆ.

ಸಚಿವರುಗಳ ಸಭೆಯಲ್ಲಿ ಔಷಧ ಸಿದ್ಧವಾಗಿರುವ ಬಗ್ಗೆ ಪುತಿನ್ ಮಾತನಾಡಿದ್ದು, ವಿಶ್ವದ ಮೊದಲ ಕರೊನಾ ಔಷಧ ನೋಂದಣಿಯಾಗಿದೆ ಎಂದು ಹೇಳಿದ್ದಾರೆ. ದೇಶದ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಮಾಸ್ಕೊದಲ್ಲಿರುವ ಗಮಾಲೆಯಾ ಇನ್​ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ ಔಷಧವು ಸೋಂಕು ನಿವಾರಿಸುತ್ತದೆ ಎಂದು ತಿಳಿಸಲಾಗಿದೆ. ಔಷಧ ಟ್ರಯಲ್​ನಲ್ಲಿ ಯಶಸ್ವಿಯಾಗುವ ಮೊದಲೇ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆರಂಭಿಸಿರುವುದಾಗಿ ರಷ್ಯಾ ಕಳೆದ ತಿಂಗಳು ತಿಳಿಸಿತ್ತು. ಅದಾದ ಒಂದೇ ತಿಂಗಳಲ್ಲಿ ಲಸಿಕೆ ಸಿದ್ಧವಾಗಿರುವುದಾಗಿ ಹೇಳಿಕೊಂಡಿದೆ.

ಸ್ಪುಟ್ನಿಕ್-5 ಸೆಪ್ಟೆಂಬರ್​ಗೆ ಮಾರುಕಟ್ಟೆಗೆ: ಈ ಔಷಧಕ್ಕೆ ‘ಸ್ಪುಟ್ನಿಕ್ 5’ ಎಂದು ರಷ್ಯಾ ಹೆಸರಿಸಿದೆ. ಇದು ಸೋವಿಯತ್​ನ ಮೊದಲ ಉಪಗ್ರಹದ ಹೆಸರಾಗಿದೆ. ಈ ಲಸಿಕೆಯನ್ನು ಸೆಪ್ಟೆಂಬರ್ ವೇಳೆಗೆ ಮಾರುಕಟ್ಟೆಗೆ ತರುವುದಾಗಿ ರಷ್ಯಾ ಉಪಪ್ರಧಾನಿ ತತ್ಯಾನ ಗೋಲಿಕೋವಾ ತಿಳಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಶಿಕ್ಷಕರಿಗೆ ಈ ತಿಂಗಳಲ್ಲೇ ಔಷಧ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈಗಾಗಲೇ 20 ದೇಶಗಳಿಂದ ಔಷಧ ಪೂರೈಕೆಗೆ ಬೇಡಿಕೆ ಬಂದಿದೆ ಎಂದಿದ್ದಾರೆ.

ಸುರಕ್ಷತೆ ಖಾತ್ರಿ ಮುಖ್ಯ: ಅಭಿವೃದ್ಧಿ ಪಡಿಸಿರುವ ಔಷಧದ ಬಗ್ಗೆ ಗರಿಷ್ಠಮಟ್ಟದ ಸುರಕ್ಷತೆಯನ್ನು ರಷ್ಯಾ ಖಾತರಿಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಟಿಒ) ಸೂಚಿಸಿದೆ. ಲಸಿಕೆಯ ಟ್ರಯಲ್​ನ ಪ್ರತಿಯೊಂದು ಮಾಹಿತಿಯನ್ನು ಸಲ್ಲಿಸಬೇಕು. ಇದನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ.

ರಷ್ಯಾ ಔಷಧದ ಬಗ್ಗೆ ಶಂಕೆ

ರಷ್ಯಾ ಅಭಿವೃದ್ಧಿ ಪಡಿಸಿರುವ ಔಷಧದ ಕ್ಲಿನಿಕಲ್ ಟ್ರಯಲ್​ನ ವರದಿ ಬಹಿರಂಗವಾಗಿಲ್ಲ ಎಂದು ಅಮೆರಿಕ, ಬ್ರಿಟನ್ ಸೇರಿ ಹಲವು ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿವೆ. ಗಮಾಲೆಯಾ ಇನ್​ಸ್ಟಿಟ್ಯೂಟ್​ನ ವಿಜ್ಞಾನಿಗಳು ಖಂಖಖ-ಅಠಗಿ-2 ನ ಡಿಎನ್​ಎ ಬಳಸಿಕೊಂಡು ಔಷಧ ತಯಾರಿಸಿದ್ದಾರೆ. ಜೂನ್ 17ರಂದು ಈ ಔಷಧದ ಮೊದಲ ಹಂತದ ಕ್ಲಿನಿಕಲ್ ಟ್ರಯಲ್​ನ್ನು ಆರಂಭಿಸಲಾಗಿತ್ತು. ಈ ಹಂತದಲ್ಲಿ 76 ಸ್ವಯಂಸೇವಕರ ಮೇಲೆ ಔಷಧ ಪ್ರಯೋಗಿಸಲಾಗಿತ್ತು. ಜುಲೈ ಮಧ್ಯದ ವೇಳೆಗೆ ಇವರೆಲ್ಲರ ಮೇಲೂ ಔಷಧ ಪರಿಣಾಮ ಬೀರಿದ್ದು, ರೋಗನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿತ್ತು. ಅದಾದ ನಂತರ ಜುಲೈ 13ರಿಂದ ಎರಡನೇ ಹಂತದ ಪ್ರಯೋಗ ಆರಂಭಿಸಿದ್ದಾಗಿ ತಿಳಿಸಲಾಗಿತ್ತು. ನಂತರ ಆಗಸ್ಟ್ 3ಕ್ಕೆ ಎಲ್ಲ ಪ್ರಯೋಗವೂ ಮುಗಿದಿರುವುದಾಗಿ ದೇಶ ಹೇಳಿಕೊಂಡಿತ್ತು. ಆದರೆ ಎರಡನೇ ಹಂತದ ಫಲಿತಾಂಶ ಅಥವಾ ಮೂರನೇ ಹಂತದ ಪ್ರಯೋಗದ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ. ಸಾಮಾನ್ಯವಾಗಿ ಎರಡನೇ ಹಂತದ ಪರೀಕ್ಷೆಗೆ ಹಲವು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಕೇವಲ ಎರಡು ತಿಂಗಳಲ್ಲಿ ಮೂರೂ ಹಂತದ ಪರೀಕ್ಷೆ ಮುಗಿಸಲಾಗಿದೆಯೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಅಮೆರಿಕ ಸೇರಿದಂತೆ ಅನೇಕ ದೇಶಗಳು ಈ ಕುರಿತಾಗಿ ಪ್ರಶ್ನೆ ತೆಗೆದಿವೆ.