ನ್ಯೂಸ್

20 ರೂ. ನೀರಿನ ಬಾಟಲ್​ಗೆ 100 ರೂ. ಏಕೆ?

ನವದೆಹಲಿ: ಉತ್ತಮ ಅನುಭವದ ಹೆಸರಿನಲ್ಲಿ 20 ರೂ. ನೀರಿನ ಬಾಟಲ್​ಗೆ 100 ರೂ. ವಸೂಲಿ ಮಾಡುತ್ತಿದ್ದೀರಿ. ಇದರ ಹೊರತಾಗಿಯೂ ಸೇವಾ ಶುಲ್ಕವನ್ನು ಏಕೆ ವಿಧಿಸುತ್ತಿದ್ದೀರಿ ಎಂದು ದೆಹಲಿ ಹೈಕೋರ್ಟ್ ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳ ಸಂಘಗಳಿಗೆ (ಎಫ್​ಎಚ್​ಆರ್​ಎಐ) ಪ್ರಶ್ನಿಸಿದೆ. ಹೋಟೆಲ್​ಗಳಲ್ಲಿ ಸೇವಾ ಶುಲ್ಕವನ್ನು ಕಡ್ಡಾಯವಾಗಿ ವಿಧಿಸುವಂತಿಲ್ಲ ಎಂದು ಕಳೆದ ಮಾರ್ಚ್​ನಲ್ಲಿ ದೆಹಲಿ ಹೈಕೋರ್ಟ್​ನ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಎಫ್​ಎಚ್​ಆರ್​ಎಐ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ. ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾ. ತುಷಾರ್ ರಾವ್ ಗೆಡೆಲಾ ಅವರ ಪೀಠ ‘ನಿಮ್ಮ ರೆಸ್ಟೋರೆಂಟ್​ಗಳಿಗೆ ಭೇಟಿ ನೀಡುವ ವ್ಯಕ್ತಿ ಅಲ್ಲಿ ಪಡೆಯುವ ಅನುಭವಕ್ಕಾಗಿ ಹಲವು ಪದಾರ್ಥಗಳ ಮೇಲೆ ಎಂಆರ್​ಪಿಗಿಂತ ಹೆಚ್ಚಿನ ಶುಲ್ಕ ವಿಧಿಸುತ್ತೀರಿ ಮತ್ತು ನೀವು ನೀಡುವ ಸೇವೆಗೆ ಸೇವಾ ಶುಲ್ಕವನ್ನೂ ಪಡೆಯುತ್ತಿದ್ದೀರಿ. ನಿರ್ದಿಷ್ಟ ರೀತಿಯ ಅನುಭವಕ್ಕಾಗಿ ವಾತಾವರಣವನ್ನು ಒದಗಿಸುವುದು ನೀವು ನೀಡುತ್ತಿರುವ ಸೇವೆಯಲ್ಲಿ ಒಳಗೊಂಡಿರುವುದಿಲ್ಲವೇ? 20 ರೂ. ನೀರಿನ ಬಾಟಲ್​ಗೆ 100 ರೂ. ಪಡೆಯುತ್ತಿದ್ದೀರಿ. ಹೆಚ್ಚುವರಿಯಾಗಿ 80 ರೂ.ಗಳನ್ನು ಯಾವ ಲೆಕ್ಕದಲ್ಲಿ ಪಡೆಯುತ್ತೀದ್ದೀರಿ ಎಂದು ಪ್ರಶ್ನಿಸಿದೆ.