ನ್ಯೂಸ್

ಆ.11 ರಂದು ರಿಲೀಸ್​ ಆಗಬೇಕಿದ್ದ ರಣಬೀರ್​ ನಟನೆಯ 'ಅನಿಮಲ್'​ ಚಿತ್ರವನ್ನು ದಿಢೀರ್​ ಮುಂದೂಡಲು ಕಾರಣವೇನು?

ಮುಂಬೈ: ಬಾಲಿವುಡ್​ನ ಸ್ಟಾರ್ ನಟ ರಣಬೀರ್ ಕಪೂರ್ ಈ ವರ್ಷದ ಆರಂಭದಲ್ಲಿ ಉತ್ತಮ ಯಶಸ್ಸನ್ನು ಹೊಂದಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ರೋಮ್ಯಾಂಟಿಕ್-ಕಾಮಿಡಿ ಜಾನರ್​ನ 'ತು ಜೂತಿ ಮೈನ್ ಮಕ್ಕರ್' ಚಿತ್ರದ ಗೆಲುವಿನ ಮೂಲಕ ಮತ್ತಷ್ಟು ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ.

ಇದೀಗ ಅವರ ಮುಂದಿನ 'ಅನಿಮಲ್'​ ಸಿನಿಮಾವು ಈ ಹಿಂದೆ ಹೇಳಿದಂತೆ ಆಗಸ್ಟ್​ 11ಕ್ಕೆ ರಿಲೀಸ್​ ಆಗಬೇಕಿತ್ತು. ಆದ್ರೆ, ಚಿತ್ರತಂಡ ಈಗ ದಿಢೀರ್​ ಎಂಬಂತೆ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಇದಕ್ಕೆ ಅಸಲಿ ಕಾರಣವೇನು ಎಂಬ ಹಲವು ಪ್ರಶ್ನೆಗಳು ಸಿನಿರಸಿಕರಲ್ಲಿ ಚರ್ಚೆಯಾಗುತ್ತಿದೆ.

ನಿಗದಿಪಡಿಸಿದಂತೆ ಚಿತ್ರತಂಡವು 'ಅನಿಮಲ್' ಸಿನಿಮಾವನ್ನು ಆಗಸ್ಟ್ 11 ರಂದು ತೆರೆಗೆ ತರಬೇಕಿತ್ತು. ಆದರೆ ಇದೀಗ ಬಿಡುಗಡೆಯನ್ನು ಡಿಸೆಂಬರ್ 1ಕ್ಕೆ ಮುಂದೂಡಿದೆ. ಈ ದಿನಾಂಕ ಕೂಡ ತಾತ್ಕಾಲಿಕ ಎಂದು ಹೇಳಲಾಗಿದೆ. ಈ ನಿರ್ಧಾರವನ್ನು ನಿರ್ಮಾಪಕರು ಮಾಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾ ಮುಂದೂಡಲು ಕಾರಣ ಆಗಸ್ಟ್​ 10 ರಂದು ಜೈಲರ್​, 11 ರಂದು ಚಿರಂಜೀವಿ ಅವರ ಭೋಲಾ ಶಂಕರ್​ ಇದರೊಟ್ಟಿಗೆ ಗದರ್ 2 ಮತ್ತು ಓ ಮೈ ಗಾಡ್ 2 ಚಿತ್ರಗಳು ಸಾಲು ಸಾಲಾಗಿ ಬಿಡುಗಡೆಗೊಂಡು ಬಾಕ್ಸ್​ ಆಫೀಸ್​​ನಲ್ಲಿ ಭಾರೀ ಪೈಪೋಟಿ ನೀಡುತ್ತಿವೆ.

ಈ ಸಿನಿಮಾಗಳ ಮಧ್ಯೆ ಅನಿಮಲ್ ಚಿತ್ರವನ್ನು ಈ ಹಿಂದೆ ನಿಗದಿಪಡಿಸಿದ ದಿನದಂದೇ ಬಿಡುಗಡೆಗೊಳಿಸಿದ್ದರೇ, ಬಾಕ್ಸ್​ ಆಫೀಸ್​ನಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗಿತ್ತು ಎಂಬ ಮುನ್ನೆಚ್ಚರಿಕೆಯಿಂದ ಚಿತ್ರತಂಡ ರಿಲೀಸ್​ ಡೇಟ್​​ ಅನ್ನು ರದ್ದುಗೊಳಿಸಿ, ಇದೀಗ ಡಿಸೆಂಬರ್​ 01ಕ್ಕೆ ಮುಂದೂಡಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ತಿಳಿದ ಸಿನಿಪ್ರೇಕ್ಷಕರು ಮತ್ತು ನೆಟ್ಟಿಗರು ಚಿತ್ರ ತಯಾರಕರು ಉತ್ತಮ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.

ಅನಿಮಲ್​ ಚಿತ್ರದಲ್ಲಿ ರಣಬೀರ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡರೆ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್, ಪರಿಣಿತಿ ಚೋಪ್ರಾ, ಅನಿಲ್ ಕಪೂರ್​, ಸೌರಬ್​ ಶುಕ್ಲಾ ಸೇರಿದಂತೆ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).