ನ್ಯೂಸ್

ಅರವಿಂದ್​ ಕೇಜ್ರಿವಾಲ್​ ಈ ನೀರನ್ನು ಕುಡಿಯಲಿ; ಬಳಿಕ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗುವೆ ಎಂದಿದ್ದೇಕೆ ರಾಹುಲ್​ಗಾಂಧಿ | Rahul Gandhi

ನವದೆಹಲಿ: ರಾಷ್ಟ್ರರಾಜಧಾನಿ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ಅರವಿಂದ್​ ಕೇಜ್ರಿವಾ್​ ಅವರು, 5 ವರ್ಷಗಳಲ್ಲಿ ಯಮುನಾ ನೀರನ್ನು ಶುದ್ಧೀಕರಿಸುವುದಾಗಿ ಹಾಗೂ ಅದರಲ್ಲಿ ಸ್ನಾನ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಕೊಳಕಾಗಿದೆ. ಯಮುನಾ ನೀರು ಬಿಡಿ ನಾನು ಕೇಳುತ್ತೇನೆ ದೆಹಲಿಯಲ್ಲಿರುವ ನೀರನ್ನು ಕುಡಿದು ತೋರಿಸಿ ಎಂದಿದ್ದಾರೆ. ಒಂದು ವೇಳೆ ನೀವು ದೆಹಲಿ ಜನರಿಗೆ ನೀಡಲು ಸಿದ್ಧವಿರುವ ನೀರನ್ನು ನೀವು ಕುಡಿದರೆ ನಂತರ ನಾನು ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುತ್ತೇನೆ ಎಂದಿದ್ದಾರೆ. ಪ್ರಧಾನಿ ಮೋದಿಯಂತೆ ಕೇಜ್ರಿವಾಲ್ ಕೂಡ ಸುಳ್ಳು ಭರವಸೆಗಳನ್ನು ನೀಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಡುವೆ ಹೋರಾಟ ನಡೆಯುತ್ತಿದೆ. ಈ ಹೋರಾಟ ನಡೆಯುತ್ತಿರುವಾಗಲೇ ಅರವಿಂದ್‌ ಕೇಜ್ರಿವಾಲ್‌ ಬಂದು ವಿದ್ಯುತ್‌ ಕಂಬ ಹತ್ತಿ ಹೊಸ ರಾಜಕೀಯ ತರುತ್ತೇನೆ, ಭ್ರಷ್ಟಾಚಾರ ತೊಲಗಿಸುತ್ತೇನೆ, ಯಮುನಾ ನೀರು ಮತ್ತು ದೆಹಲಿ ಶುದ್ಧಿ ಮಾಡುತ್ತೇನೆ, ಭಾವೈಕ್ಯತೆಯನ್ನು ಸಾರುತ್ತೇನೆ ಎಂದು ಹೇಳಿದ್ದರು ಎಂದು ರಾಹುಲ್​ ಗಾಂಧಿ ತಿಳಿಸಿದರು.

ಒಂದು ಕಡೆ ದೆಹಲಿಯ ಜನರಿಗೆ ಕೊಳಕು ನೀರನ್ನು ಕುಡಿಯಲು ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ಕೇಜ್ರಿವಾಲ್ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಬಂದ ಕೂಡಲೇ ಅರಮನೆಯಲ್ಲಿ ಕುಳಿತರು. ತನ್ನ ತಂಡದೊಂದಿಗೆ ಸೇರಿ ಕೋಟಿಗಟ್ಟಲೆ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ರಾಹುಲ್​ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ.

ತಮ್ಮ ರಾಜಕೀಯ ಬಡವರಿಗಾಗಿ ಎಂದು ಅರವಿಂದ್​​ ಕೇಜ್ರಿವಾಲ್ ಹೇಳಿಕೊಂಡಿದ್ದಾರಾದರೂ, ಅವರ ತಂಡದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳು ಅಥವಾ ಅಲ್ಪಸಂಖ್ಯಾತ ಮುಸ್ಲಿಮರು, ಸಿಖ್ಖರು ಯಾರೂ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ಈ ವೇಳೆ ಕೇಜ್ರಿವಾಲ್ ತಂಡದ ಪಟ್ಟಿಯನ್ನು ತೋರಿಸುತ್ತಾ, ಇದರಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಅತಿಶಿ ಸಿಂಗ್, ಸಂಜಯ್ ಸಿಂಗ್, ಸತ್ಯೇಂದ್ರ ಜೈನ್, ರಾಘವ್ ಚಡ್ಡಾ, ಸಂದೀಪ್ ಪಾಠಕ್, ಸೌರಭ್ ಭಾರದ್ವಾಜ್ ಮತ್ತು ಅವಧ್ ಓಜಾ ಅವರ ಹೆಸರನ್ನು ಸೇರಿಸಲಾಗಿದೆ ಎಂದು ರಾಹುಲ್​ಗಾಂಧಿ ಹೇಳಿದರು. ಅವರು ತಮ್ಮದೇ ಆದ ತಂಡವನ್ನು ರಚಿಸುತ್ತಾರೆ ಆದರೆ ನಿಮ್ಮ ವಿರುದ್ಧ ಹಿಂಸಾಚಾರ ನಡೆದಾಗ ಕೇಜ್ರಿವಾಲ್ ಕಾಣಿಸುವುದಿಲ್ಲ ಎಂದು ಹೇಳಿದರು.(ಏಜೆನ್ಸೀಸ್​​​)