ನ್ಯೂಸ್

ಯಾರ ವಿರುದ್ಧ ಪ್ರತಿಭಟನೆ?; ಪ್ರಕರಣ ಕೋರ್ಟ್​ನಲ್ಲಿ ಇರುವಾಗ ಹೋರಾಟವೇಕೆಂದ ಸುಪ್ರೀಂ..

Webdesk - Ravikanth

ನವದೆಹಲಿ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರು, ಬಿಜೆಪಿ ಕಾರ್ಯಕರ್ತರು ಸೇರಿ 8 ಜನರು ಮೃತಪಟ್ಟಿರುವ ಘಟನೆಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳಿಗೆ ತಡೆ ನೀಡಿದ್ದರೂ ನೀವು ಪ್ರತಿಭಟನೆ ಮುಂದುವರಿಸುತ್ತಿರುವ ಉದ್ದೇಶವೇನೆಂದು ರೈತ ಸಂಘಟನೆಗಳನ್ನು ಪ್ರಶ್ನಿಸಿದೆ. ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯ ಮೂರು ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆಯನ್ನು ಈಗಲೂ ಮುಂದುವರಿಸುತ್ತಿದ್ದಾರೆ. ಶಾಸನಗಳೇ ಚಾಲ್ತಿಯಲ್ಲಿಲ್ಲದಿದ್ದಾಗ ನೀವು ಯಾರ ವಿರುದ್ಧ ಪ್ರತಿಭಟಿಸುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿತು.

ಕೃಷಿ ಕಾನೂನುಗಳ ಜಾರಿಗೆ ತಾತ್ಕಾಲಿಕ ತಡೆ ನೀಡಿರುವುದಲ್ಲದೆ, ಪ್ರಕರಣದ ವಿಚಾರಣೆಯೂ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿದೆ. ನಮಗೆ ನ್ಯಾಯನೀಡಿ ಎಂದು ವಿರೋಧಿ ಗುಂಪು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವಾಗ ಪ್ರತ್ಯೇಕವಾಗಿ ಪ್ರತಿಭಟಿಸುವ ಹಕ್ಕೂ ನಮಗಿರಬೇಕು ಎನ್ನುವುದನ್ನು ಒಪ್ಪಲಾಗುತ್ತದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ನ್ಯಾ. ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾ. ಸಿ.ಟಿ. ರವಿಕುಮಾರ್ ಒಳಗೊಂಡ ದ್ವಿಸದಸ್ಯ ಪೀಠ ಮುಂದಿಟ್ಟಿದೆ. ನ್ಯಾಯಕ್ಕಾಗಿ ಕೋರ್ಟ್​ಗೆ ಬಂದ ಮೇಲೆ ಅದೇ ವಿಷಯಕ್ಕೆ ಸಂಬಂಧಿಸಿ ಪ್ರತಿಭಟಿಸುವುದು ಸರಿಯೇ? ಹೀಗಾಗಿ, ಪ್ರತಿಭಟಿಸುವ ಹಕ್ಕು ಸಂಪೂರ್ಣ ಹಕ್ಕೇ ಎಂದು ಪ್ರಶ್ನಿಸಿದೆ. ದೆಹಲಿಯ ಜಂತರ್ ಮಂತರ್​ನಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಸತ್ಯಾಗ್ರಹ ನಡೆಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕಿಸಾನ್ ಮಹಾಪಂಚಾಯತ್ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಮುಂದಿಟ್ಟ ಪ್ರಶ್ನೆಗೆ ಉತ್ತರಿಸಿದ ಕಿಸಾನ್ ಮಹಾಪಂಚಾಯತ್ ಪರ ವಕೀಲ ಅಜಯ್ ಚೌಧುರಿ, ದೆಹಲಿ ಗಡಿಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ನಮ್ಮ ಕಕ್ಷಿದಾರರು ಭಾಗಿಯಾಗಿಲ್ಲ. ಅದಲ್ಲದೆ, ಅವರು ವಾಹನ ಸಂಚಾರವನ್ನು ತಡೆಯುವ ಯತ್ನವನ್ನೂ ಮಾಡಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾನೂನಿನ ಸಿಂಧುತ್ವವನ್ನೇ ಪ್ರಶ್ನಿಸಿ ನೀವು ನ್ಯಾಯಾಂಗದ ಅಂಗಳಕ್ಕೆ ಬಂದ ನಂತರ ಪ್ರತಿಭಟನೆಯ ಪ್ರಶ್ನೆಯೇಕೆ ಇಲ್ಲಿ ಉದ್ಭವಿಸುತ್ತದೆ? ನ್ಯಾಯಾಲಯಕ್ಕೆ ಬಂದಿದ್ದೀರಿ ಎಂದರೆ ನೀವು ನಿಮ್ಮ ಮುಂದಿದ್ದ ಆಯ್ಕೆಯನ್ನು ಬಳಸಿದ್ದೀರಿ ಎಂದಲ್ಲವೇ? ನೀವು ರಾಜಸ್ಥಾನ ಹೈಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನೂ ನಾವು ಇಲ್ಲಿಗೆ ವರ್ಗಾಯಿಸಿಕೊಳ್ಳುತ್ತೇವೆ. ಕಾರ್ಯಾಂಗದ ನಡೆಯನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದ ಮೇಲೆ ಅದು ವಿಚಾರಣಾಧೀನ ಪ್ರಕರಣ ಎನಿಸಿಕೊಳ್ಳುತ್ತದೆ. ಹೀಗಿದ್ದಾಗ, ನೀವು ಪ್ರತಿಭಟನೆಯನ್ನೇಕೆ ನಡೆಸಬೇಕು ಎಂದು ವಕೀಲರನ್ನು ಪ್ರಶ್ನಿಸಿತು. ಕೋರ್ಟ್ ಅಭಿಪ್ರಾಯವನ್ನು ಅನುಮೋದಿಸಿದ ಕೇಂದ್ರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೃಷಿ ಕಾನೂನುಗಳ ಕುರಿತ ಪ್ರಕರಣ ತೀರ್ವನಗೊಳ್ಳುವವರೆಗೆ ಯಾವುದೇ ಪ್ರತಿಭಟನೆಗಳಿಗೆ ಅವಕಾಶವಿರಕೂಡದು ಎಂದು ಒತ್ತಿಹೇಳಿದರು.

ಮುಂದಿನ ವಿಚಾರಣೆಯನ್ನು ಅ. 21ಕ್ಕೆ ನಿಗದಿಪಡಿಸಿರುವ ನ್ಯಾಯಪೀಠ, ಕೃಷಿ ಕಾನೂನುಗಳಿಗೆ ಸಂಬಂಧಿಸಿ ರಾಜಸ್ಥಾನ ಹೈಕೋರ್ಟ್​ನಲ್ಲಿ ದಾಖಲಾಗಿರುವ ಪ್ರಕರಣವನ್ನು ಇಲ್ಲಿಗೆ ವರ್ಗಾಯಿಸಿಕೊಳ್ಳುವಂತೆ ಸುಪ್ರೀಂಕೋರ್ಟ್​ನ ರಿಜಿಸ್ಟ್ರಿಗೆ ಸೂಚನೆ ನೀಡಿದ್ದು, ಸಂಬಂಧಪಟ್ಟ ಪ್ರತಿವಾದಿಗಳು ಮುಂದಿನ ವಿಚಾರಣೆಗೆ ಇಲ್ಲೇ ವಾದ ಮಂಡಿಸುವಂತೆ ನಿರ್ದೇಶನ ನೀಡಿದೆ.

43 ಪ್ರತಿಭಟನಾಕಾರರಿಗೆ ನೋಟಿಸ್: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳನ್ನು ಪ್ರತಿನಿಧಿಸುತ್ತಿರುವ 43 ಕೃಷಿ ಹೋರಾಟಗಾರರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ರೈತರ ಹೆದ್ದಾರಿ ತಡೆ ಪ್ರಶ್ನಿಸಿ ನೋಯ್ಡಾದ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಭಟನಾಕಾರರನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಹರ್ಯಾಣ ಸರ್ಕಾರ ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ.ಎಂ.ಎಂ. ಸುಂದರೇಶ್ ದ್ವಿಸದಸ್ಯ ಪೀಠಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 43 ಮಂದಿಗೆ ನೋಟಿಸ್ ಜಾರಿಮಾಡಲಾಗಿದೆ. ಹರ್ಯಾಣ ಸರ್ಕಾರ ಪರ ವಾದಿಸಿದ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರೈತ ಮುಖಂಡರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಹರಿಯಾಣ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಆದರೆ, ಮುಖಂಡರು ಮಾತುಕತೆಗೆ ಬಂದೇ ಇಲ್ಲ ಎಂದು ಅತೃಪ್ತಿ ಹೊರಹಾಕಿದರು.

ಸುಪ್ರೀಂ ಹೇಳಿದ್ದು

  • ಕಾಯ್ದೆಗಳ ಸಿಂಧುತ್ವ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋದ ಬಳಿಕ ಪ್ರತಿಭಟಿಸುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ? ಪ್ರತಿಭಟನೆಯ ಉದ್ದೇಶವಾದರೂ ಏನು?
  • ನ್ಯಾಯಾಲಯದಲ್ಲಿ ದಾವೆ ಹೂಡಿ, ರಸ್ತೆಯಲ್ಲಿ ಧರಣಿ ಕುಳಿತುಕೊಳ್ಳಲು ಅವಕಾಶ ಇಲ್ಲ. ಇದು ಸಬ್-ಜ್ಯೂಡಿಸ್ ಆಗುತ್ತದೆ.

ಎರಡನೇ ಬಾರಿ ತರಾಟೆ: ರೈತರು ದೆಹಲಿಯನ್ನು ಸುತ್ತುವರಿದಿರುವುದರಿಂದ ನಗರದ ಜನರಿಗೆ ಉಸಿರುಗಟ್ಟಿದಂತಾಗಿದೆ. ರಸ್ತೆ ತಡೆಯಿಂದ ನಾಗರಿಕರ ಸಂಚಾರಕ್ಕೆ ಅಡಚಣೆ ಆಗಿದೆ ಎಂದು ಹಿಂದಿನ ವಿಚಾರಣೆ ಸಂದರ್ಭದಲ್ಲೂ ನ್ಯಾಯಪೀಠ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಂಗದ ವೇದಿಕೆ, ಸಂಸದೀಯ ಚರ್ಚೆ-ಸಂವಾದಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆ ವಿನಃ ಸಾರ್ವಜನಿಕ ಜೀವನಕ್ಕೆ ತೊಂದರೆ ಕೊಟ್ಟು ಅಲ್ಲ ಎಂದು ತಿಳಿಸಿತ್ತು.

ಸರ್ಕಾರದ ವಾದವೇನು?: ಪ್ರತಿಭಟನೆಗೆ ಅವಕಾಶ ನೀಡಿದರೆ ಲಖಿಂಪುರ್ ಖೇರಿಯಂತಹ ಘಟನೆಗಳು ನಡೆಯುತ್ತವೆ. ಹೀಗಾಗಿ ಕೃಷಿ ಕಾಯ್ದೆ ವಿಷಯದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮನವಿ ಮಾಡಿದರು.