ಮುಂಬೈ; ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರ ಹಲವರಲ್ಲಿ ಅಚ್ಚರಿ ಮೂಡಿಸಿತ್ತು.
ಇದೀಗ ಸಿಂಗ್ ಅವರ ವರ್ಗಾವಣೆಗೆ ಕಾರಣ ನೀಡಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು, ಪರಮ್ ಬೀರ್ ಸಿಂಗ್ ಕ್ಷಮಿಸಲಾಗದ ತಪ್ಪುಗಳನ್ನು ಮಾಡಿರುವುದರಿಂದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರನ್ನು ವರ್ಗಾವಣೆ ಮಾಡುವ ನಿರ್ಧಾರ ತೆಗೆದುಕೊಂಡರು. ತನಿಖೆಯ ವರದಿ ಬಂದ ನಂತರ ಅವರು ಮಾಡಿರುವ ತಪ್ಪುಗಳು ಎಂತವು ಎಂಬುದು ಜನಕ್ಕೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಮನವೊಲಿಕೆಯಿಂದಾಗಿ ಪಟ್ಟು ಸಡಿಲಿಸಿದ ರೇವಣ್ಣ; ಯಡಿಯೂರಪ್ಪ ಮಾತಿಗೆ ಮೆತ್ತಗಾಗಿ ಧರಣಿ ಕೈಬಿಟ್ಟ ಜೆಡಿಎಸ್
ಲೋಕಮತ ಮರಾಠಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಅವರು, ಪರಮ್ ಬೀರ್ ಸಿಂಗ್ ಮಾಡಿರುವ ತಪ್ಪುಗಳು ಕ್ಷಮಿಸಲಾರದಂತವು ಎಂದು ಹೇಳಿದ್ದಾರೆ. ವರ್ಗಾವಣೆಗೊಂಡಿರುವ ಸಿಂಗ್ ಅವರಿಗೆ ಗೃಹ ರಕ್ಷಕ ದಳದ ಎಡಿಜಿಪಿ ಜಾಗ ತೋರಿಸಲಾಗಿದೆ.
ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಈಗಾಗಲೇ ಮನಸುಖ್ ಹಿರೇನ್ ಸಾವಿನಲ್ಲಿ ಕೈವಾಡ ಇದೆ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಮಹಾ ಸರ್ಕಾರ ಅಮಾನತು ಮಾಡಿದೆ. ಸ್ಪೋಟಕ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಸಚಿನ್ ವಾಜೆ ಅವರನ್ನು ಬಂಧಿಸಿದೆ.