ಸಾಗರ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 400 ಸೀಟ್‌ಗಳನ್ನು ಗೆಲ್ಲುತ್ತೇವೆ ಎಂದು ಪ್ರಚಾರ ಸಭೆಗಳಲ್ಲಿ ಹೇಳುತ್ತಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾಕೆ? ಬಿಜೆಪಿಯವರಿಗೆ ಸೋಲಿನ ಭೀತಿ ಇರುವುದರಿಂದಲೇ ಜೆಡಿಎಸ್‌ನೊಂದಿಗೆ ಕೈಜೋಡಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದರು.
ಮೊದಲ ಮತ್ತು ಎರಡನೇ ಹಂತದ ಚುನಾವಣೆ ನಂತರ ಮೋದಿ ಅವರಿಗೆ ಸೋಲಿನ ಭೀತಿ ಹೆಚ್ಚಾಗಿದೆ. ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಹತ್ತು ವರ್ಷಗಳ ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ಇರಿಸಿ ಮತ ಕೇಳಬೇಕಾದ ಪ್ರಧಾನಿ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ತೆಗಳುವುದನ್ನೇ ಭಾಷಣವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ರಾಜ್ಯದಲ್ಲಿ ಸದ್ಯ ಇರುವುದು ಕಾಂಗ್ರೆಸ್ ಅಲೆ ಮಾತ್ರ. ಶಿವಮೊಗ್ಗ ಲೋಕಸಭಾ ಕ್ಷೇತ್ರವೂ ಸೇರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಜಾತಿ-ಜಾತಿಗಳ ನಡುವೆ ಜಗಳ ಹಚ್ಚಿ ಅದರ ಲಾಭ ಪಡೆಯುವ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಈ ಬಾರಿ ಅವರ ಯಾವ ಕುತಂತ್ರಗಳೂ ನಡೆಯುವುದಿಲ್ಲ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.43ರಷ್ಟು ಮತದ ಮೂಲಕ 135 ಸ್ಥಾನವನ್ನು ಕಾಂಗ್ರೆಸ್ ಪಕ್ಷ ಗೆದ್ದುಕೊಂಡಿತ್ತು. ಗ್ಯಾರಂಟಿ ಯೋಜನೆಗಳಿಂದ ಮತದಾರರು ಇನ್ನಷ್ಟು ಪ್ರಭಾವಿತರಾಗಿದ್ದು 24 ಕ್ಷೇತ್ರಗಳಲ್ಲಿ ನಿಚ್ಚಳ ಬಹುಮತ ಬರುತ್ತದೆ. ಉಳಿದ ನಾಲ್ಕು ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರದಲ್ಲಿ ಈ ಬಾರಿ ಇಂಡಿ ಒಕ್ಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾನೂರು, ಉರುಳುಗಲ್ಲು, ಮೆಗ್ಗಾನೆ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಿ ಎಂದು ನಾನು ಪತ್ರ ಬರೆದಿಲ್ಲ. ಅವರಿಗೆ ಅಲ್ಲಿಯೇ ಬದುಕಲು ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಇಂಧನ ಸಚಿವರು, ಅರಣ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಕುಟುಂಬಗಳು ತಾವು ಹೊರಗೆ ಹೋಗುತ್ತೇವೆ ಎಂದು ನನ್ನ ಬಳಿ ಮನವಿ ಮಾಡಿದಾಗಲೂ ನಾನು ಇಲ್ಲಿಯೇ ನೆಲೆಸಲು ಬೇಕಾದ ಸೌಲಭ್ಯ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದೇನೆ. ಬಿಜೆಪಿಯವರು ಇದನ್ನು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ. ನಾನು ಯಾರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ಅವರದು ಎನ್ನಲಾದ ಪೆನ್‌ಡ್ರೈವ್ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲಾಗಿದೆ. ಕುಂದಾಪುರದಲ್ಲಿ ನೇಹಾ ಹಿರೇಮಠ ಹತ್ಯೆ ತಕ್ಷಣ ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಸಿಬಿಐಗೆ ಒಪ್ಪಿಸಿ ಎಂದು ಕೂಗಿದ್ದ ಬಿಜೆಪಿಯವರು ಈಗ ಮೌನವಾಗಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಎಚ್.ಎಂ.ರವಿಕುಮಾರ್, ಐ.ಎನ್.ಸುರೇಶಬಾಬು, ಕೆ.ಹೊಳೆಯಪ್ಪ ಹಾಜರಿದ್ದರು.