ನ್ಯೂಸ್

ಗಣಪನ ಹೊರುವವ ಇಲಿಯೇ ಏಕೆ?

ಈಗಷ್ಟೇ ಗೌರಿ-ಗಣೇಶ ಹಬ್ಬಗಳನ್ನು ಸಂಭ್ರಮಿಸಿದ್ದೇವೆ. ‘ಗಣಪನಿಲ್ಲದ ಗ್ರಾಮವಿಲ್ಲ’ ಎಂಬ ಗಾದೆಯೇನೋ ಕನ್ನಡದಲ್ಲಿದೆ. ಇತರ-ದೇವತೆಗಳ ಪೂಜೆಯಂತೆ ಗಣಪತಿ-ಪೂಜೆಯೂ ಮನೆಮನೆಗಳಲ್ಲಷ್ಟೆ ನಡೆಯುತ್ತಿದ್ದದ್ದು. ಅದನ್ನೊಂದು ರಾಷ್ಟ್ರೀಯ ಹಬ್ಬ ವನ್ನಾಗಿಸಿದವರು ಬಾಲಗಂಗಾಧರ ತಿಲಕರು.

ಆಗ ಹೇಗಿತ್ತು?: ಆಂಗ್ಲರ ದಬ್ಬಾಳಿಕೆ ಮಿತಿಮೀರಿತ್ತು. ಜನರಲ್ಲಿ ದೇಶಭಕ್ತಿ ಕ್ಷೀಣಿಸಿತ್ತು. ಸ್ವಸಂಸ್ಕೃತಿಯ ಅಭಿಮಾನ ನಷ್ಟವಾಗಿತ್ತು. ಆಗ ಗಣೇಶೋತ್ಸವವನ್ನೇ ಬಳಸಿಕೊಂಡು ಜನಜಾಗರಣವನ್ನುಂಟುಮಾಡಿ, ಸ್ವಾಂತ್ರ್ಯಾಂದೋಳನದ ಕೆಚ್ಚನ್ನು ಹೆಚ್ಚಿಸಿದವರೇ ಲೋಕಮಾನ್ಯರು. ಬ್ರಿಟಿಷರನ್ನು ಒದ್ದೋಡಿಸಿದ್ದೇನೋ ಆಯಿತು. ಆದರೆ ಪಾಶ್ಚಾತ್ಯ ರನ್ನು ನಾವು ಸಂಪೂರ್ಣವಾಗಿ ತೊಲಗಿಸಲಾಗಿಲ್ಲ. ಹೇಗೆ? ನಮ್ಮ ಪ್ರಾಚೀನ-ಸಾಹಿತ್ಯಗಳಿಗಾಗಲಿ, ಕಲೆ-ಶಿಲ್ಪಗಳಿಗಾಗಲಿ, ಅವರಿತ್ತ ವ್ಯಾಖ್ಯಾನಗಳೇ ಇನ್ನೂ ನಮ್ಮ ತಲೆ ತಿನ್ನುತ್ತಿವೆ. ಅಲ್ಲಿಗೆ, ಭೌತಿಕವಾಗಿ ಅವರನ್ನು ಓಡಿಸಿದ್ದಾಯಿತು, ಬೌದ್ಧಿಕವಾಗಿ ಓಡಿಸಲಾಗಿಲ್ಲ. ಪಾಶ್ಚಾತ್ಯರ ಮಾನಸ-ಪುತ್ರರೇ ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲೆಲ್ಲಾ ತುಂಬಿಹೋಗಿದ್ದಾರೆ!

ನಮ್ಮಲ್ಲಿಯ ಪಂಚಾಯತನ-ಪೂಜೆಯಲ್ಲಿ ಒಂದನ್ನು ಪ್ರಧಾನ ದೇವತೆಯನ್ನಾಗಿಯೂ ಉಳಿದವನ್ನು ಗೌಣದೇವತೆಗಳನ್ನಾಗಿಯೂ ಭಾವಿಸುವುದಿದೆ. ಅಲ್ಲಿಯ ಐದು ದೇವತೆಗಳೆಂದರೆ ಆದಿತ್ಯ, ಅಂಬಿಕೆ, ವಿಷ್ಣು, ಗಣನಾಥ, ಹಾಗೂ ಮಹೇಶ್ವರ. ಸ್ವ-ಸ್ವ-ಸಂಪ್ರದಾಯಾನು ಸಾರ ಗೌಣ-ಪ್ರಧಾನಗಳನ್ನು ಗುರುತಿಸಲಾಗುತ್ತದೆ. ಹೀಗೆ ಪೂಜಾಸಂಪ್ರದಾಯದಲ್ಲಿ ಗಣಾಧಿಪನಿಗೆ ಸ್ಥಾನವು ಸ್ಪಷ್ಟವಾಗಿದೆ.

ಈ ವಿಘ್ನರಾಜನ ಸ್ವರೂಪ-ಉಪಾಸನಾಕ್ರಮಫಲಗಳನ್ನು ಪುರಾಣಗಳಲ್ಲಿ ಹೇಳಿದೆ. ಉಪನಿಷತ್ತುಗಳಲ್ಲಿ ಗಜಾನನನ ಗರಿಮೆಯ ಚಿತ್ರಣವಿದೆ. ವೇದಗಳಲ್ಲಿ ಗಣಪತಿಯೆಂಬು ದನ್ನು ವಿಶೇಷಣವಾಗಿಯೂ ನಾಮವಾಗಿಯೂ ಬಳಸಿದೆ ಗೃಹ್ಯಸೂತ್ರ- ಧರ್ಮ ಸೂತ್ರಗಳಲ್ಲೂ ಗಣೇಶ್ವರನ ವಿಘ್ನಕಾರಿತ್ವವನ್ನೋ ವಿಘ್ನಹಾರಿತ್ವವನ್ನೋ ಹೇಳಿದೆ. ಜೈನ-ಬೌದ್ಧ-ಸಾಹಿತ್ಯಗಳಲ್ಲೂ ವಿನಾಯಕ-ಪೂಜಾ-ಸಂಪ್ರದಾಯದ ಚಿತ್ರಣವಿದೆ. ಹೀಗಿದ್ದರೂ, ನಮ್ಮ ಲಂಬೋದರನು ಒಬ್ಬ ದ್ರಾವಿಡದೇವತೆಯೆಂದೂ, ಮುಂದೆ ಆರ್ಯಜನಾಂಗದಿಂದ ಸ್ವೀಕೃತನಾದನೆಂದೂ ಪಾಶ್ಚಾತ್ಯರವಾದವಾಗಿದೆ. ಗಣೇಶನು ಗಣಗಳಿಗೊಡೆಯ. ಗಣಗಳು ವಿಘ್ನಕಾರಿಗಳೋ ವಿಘ್ನಹಾರಿಗಳೋ? - ಎಂಬ ಪ್ರಶ್ನೆಗೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಉತ್ತರವು ಸಮಂಜಸವಾಗಿದೆ. ರುದ್ರನು ಸಂಹಾರಕ್ಕೆ ಅಧಿದೇವತೆ. ಬೇರೆ ಬೇರೆ ಸಮಯಗಳಲ್ಲಿ ಪ್ರಾಣಿಗಳನ್ನು ರಕ್ಷಿಸುವ ಸಾಮರ್ಥ್ಯವೂ ಭಕ್ಷಿಸುವ ಸಾಮರ್ಥ್ಯವೂ ಗಣಗಳಿಗುಂಟು.

ಗಣೇಶನಿಗೆ ಆನೆಯ ತಲೆಯೇ ಏಕೆ? ಮೂಷಕವೇ ವಾಹನ ವೇಕೆ? ಎಂಬ ಪ್ರಶ್ನೆಗಳ ಉತ್ತರವು ಲೌಕಿಕವಾದ ಊಹೆ ಗಳಿಂದ ದಕ್ಕುವುದಲ್ಲ. ಇಲಿಯು ದವಸ- ಧಾನ್ಯಗಳನ್ನು ತಿಂದುಬಿಡುವುದು. ಆನೆಗಳು ಹೊಲ-ಗದ್ದೆಗಳಿಗೆ ನುಗ್ಗಿ ಸಸ್ಯರಾಶಿಯನ್ನು ಹಾಳು ಮಾಡುವುವು. ಈ ತೊಂದರೆಗಳನ್ನು ಕೊನೆಗಾಣಿಸಲೆಂದೇ ಗಜಮುಖವನ್ನೂ ಮೂಷಕವಾಹನವನ್ನೂ ಉಳ್ಳ ದೇವರನ್ನು ರೈತರು ಸೃಷ್ಟಿಸಿಕೊಂಡರು - ಎಂದು ವಿವರಿಸುವವರುಂಟು. ಹಾಗೆಯೇ, ಆನೆಯು ಬೃಹತ್ತಾದ ಪ್ರಾಣಿ, ಇಲಿಯು ಕಿರಿ ದಾದದ್ದು - ಎರಡು ಬಗೆಗಳಿಂದಲೂ ನುಗ್ಗಲೋ ನುಸುಳಲೋ ಆಗುವಿಕೆಯನ್ನು ಮೇಲೂ ಕೆಳಗೂ ಇರುವ ಈ ಪ್ರಾಣ್ಯಂಗಗಳು ಸೂಚಿಸುತ್ತವೆ - ಎಂದೂ ವಿವರಿಸಲು ಯತ್ನಿಸುವವರುಂಟು.

ಇವುಗಳೆಲ್ಲವೂ ಸ್ವಕಪೋಲಕಲ್ಪಿತಗಳೇ - ಎಂದರೆ ಬರೀ ಊಹೆಗಳೇ. ಹಾಗಾದರೆ ಸೊಳ್ಳೆ-ತಿಗಣೆಗಳ ಕಾಟಕ್ಕೋ ಜಿಂಕೆ- ಜಿರಲೆಗಳ ಕಾಟಕ್ಕೋ ಒಂದೊಂದು ದೇವರನ್ನೋ ದೇವರ ಆಯುಧ/ವಾಹನಗಳನ್ನೋ ಕಲ್ಪಿಸಬಹುದಿತ್ತಲ್ಲ? ಅವೇಕಿಲ್ಲ? ಪ್ರಕೃತ, ಗಣೇಶನು ಮೂಷಿಕವನ್ನು ವಾಹನವನ್ನಾಗಿಸಿಕೊಂಡಿ ರುವುದರ ತತ್ತ್ವವನ್ನು ಮಾತ್ರ ಇಲ್ಲಿ ಪರಿಶೀಲಿಸಿದೆ. ಇಲಿಗೆ ಮೂಷಕ/ಮೂಷಿಕ ಎಂಬ ಹೆಸರಿದೆಯಷ್ಟೆ? ಇದು ಬಂದಿರುವುದು ಸಂಸ್ಕೃತದ ಮುಷ್ ಎಂಬ ಧಾತುವಿನಿಂದ. ಅದಕ್ಕೆ ಕದಿಯುವುದೆಂಬ ಅರ್ಥ. ಇಂಗ್ಲೀಷಿನ ಮೌಸ್ ಎಂಬ ಪದವು ಸಂಸ್ಕೃತಪ ದಕ್ಕೆ ಜ್ಞಾತಿಪದವೇ ಆಗಿದೆ. ಮೂಷಕನೊಬ್ಬ ಅಸುರ; ವಿಘ್ನೕಶ್ವರನ ಮೇಲೇ ಯುದ್ಧಮಾಡಿದ. ಸೋತು ಶರಣಾದ.

ವಾಹನರೂಪ ವಾಗಿದ್ದುಕೊಂಡು ನನಗೆ ಸೇವೆಯನ್ನು ಸಲ್ಲಿಸು - ಎಂಬುದಾಗಿ ಅನುಗ್ರಹವನ್ನಾತನಿಗೆ ಗಣೇಶನು ಮಾಡಿದ - ಎಂಬುದಾಗಿ ಪುರಾಣ-ಕಥೆಯಿದೆ. ನಟರಾಜನು ಅಪಸ್ಮಾರನನ್ನು ಮೆಟ್ಟಿರುವಂತೆಯೇ ಇದೂ. ಇದರ ವಿವರಣೆಯನ್ನು ಮಹಾಯೋಗಿಗಳಾದ ಶ್ರೀರಂಗ ಮಹಾ ಗುರುಗಳು ಹೀಗೆ ಕೊಟ್ಟಿರುವರು: ‘ಯಜ್ಞ- ಯಾಗಾದಿಗಳನ್ನು ಆಚರಿಸುವಾಗ ಆಸುರೀಶಕ್ತಿಗಳು ಅಡ್ಡಿ ಮಾಡಿ ದೇವತೆಗಳಿಗೆ ಸಲ್ಲಬೇಕಾದದ್ದು ಸಲ್ಲದಂತೆ ಮಾಡುವುದುಂಟು. ಯೋಗಮಾರ್ಗದಲ್ಲಿ ಸಾಗುವಾಗ ಚಿತ್ತಚಾಂಚಲ್ಯವೇ ಮುಂತಾದ ಯೋಗವಿಘ್ನಗಳು ಬರುವುದುಂಟು. ಹೀಗೆ ಧ್ಯಾನೋಪಾಸನೆಗಳಲ್ಲಿ ಅಡ್ಡಿಯೊಡ್ಡುವ ದುಷ್ಟಶಕ್ತಿಗಳ ಮೂಲ ಮೂರ್ತಿಯೇ ಗಣೇಶ-ವಾಹನವಾದ ಈ ಮೂಷಕವೆಂಬುದು.

ಅದನ್ನೇ ದಮನ ಮಾಡಿ ತನ್ನನ್ನು ಹೊರುವ ಸೇವೆಗದನ್ನು ನೇಮಿಸಿ ಕೊಂಡಿರುವವನೇ ಗಣೇಶ. ಆರಂಭದಲ್ಲಿಯೇ ಆತನ ಅನುಗ್ರಹವು ಸಂಪಾದ್ಯ. ಅದಿಲ್ಲದೆ ಯೋಗವಿಘ್ನಗಳನ್ನು ಹತ್ತಿಕ್ಕುವುದು ಮಹಾಕಷ್ಟವೇ ಸರಿ’. ಎಂದೇ ‘ನೌಮಿ ಮೂಷಕವಾಹನಮ್ (ಮೂಷಕ ವಾಹನ ನನ್ನು ಸ್ತುತಿಸುವೆ) ಎಂಬ ನುಡಿಯಿರುವುದು. ಹೀಗೆ, ಉಪಾಸನೆಗೆ ಸಂಬಂಧಪಟ್ಟ ಯೋಗಗಮ್ಯ-ವಿಷಯಗಳ ನೆಲೆಯನ್ನು ತತ್ತ್ವದರ್ಶಿಗಳಾದ ಜ್ಞಾನಿಗಳಿಂದ ಪಡೆಯತಕ್ಕದ್ದೇ ವಿನಾ, ಪೊಳ್ಳಾದ ಟೊಳ್ಳಾದ ಊಹಾಪೋಹಗಳಲ್ಲಿ ನಿರತರಾದವರಿಂದ ಅಲ್ಲ.