ನವದೆಹಲಿ: ಓಲಾ ಎಲೆಕ್ಟ್ರಿಕ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ- ಇನಿಷಿಯಲ್ ಪಬ್ಲಿಕ್ ಆಫರ್), ಅಂದರೆ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ಮುಂಚಿತವಾಗಿ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಮುಂಬರುವ ವಾರಗಳಲ್ಲಿ 400-500 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ.
ವಜಾಗೊಳಿಸಬೇಕಾದ ನೌಕರರ ನಿಖರ ಸಂಖ್ಯೆಯನ್ನು ಇನ್ನೂ ಅಂತಿಮಗೊಳಿಸಲಾಗುತ್ತಿದೆ. ಕಂಪನಿಯ ನಾಯಕತ್ವವು ಪ್ರಸ್ತುತ ಸಂಸ್ಥೆಯಾದ್ಯಂತ ನಿರೀಕ್ಷಿತ ವಜಾಗಳ ಪ್ರಮಾಣವನ್ನು ನಿರ್ಧರಿಸುತ್ತಿದೆ.
ಕೆಲವು ಉದ್ಯೋಗಿಗಳನ್ನು ಕಡಿಮೆ ಸಂಬಳದಲ್ಲಿ ಹೊಸ ನೇಮಕಗಳೊಂದಿಗೆ ಬದಲಾಯಿಸಬಹುದು. ಆದರೂ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ವರದಿಯಾಗಿದೆ. ಕೆಲವು ತಂಡಗಳು ಈಗಾಗಲೇ ಉದ್ಯೋಗಿ ಕಡಿತಗಳ ಸಂಖ್ಯೆಯನ್ನು ಅಂತಿಮಗೊಳಿಸಿವೆ ಎನ್ನಲಾಗಿದೆ.
ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರು ಎಲ್ಲ ವಿಭಾಗಗಳಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್ ತನ್ನ ಐಪಿಒ ಕರಡನ್ನು ಸಲ್ಲಿಸಿದಾಗ, ಅಕ್ಟೋಬರ್ 2023 ರ ಹೊತ್ತಿಗೆ 3,733 ಉದ್ಯೋಗಿಗಳನ್ನು ಈ ಸಂಸ್ಥೆ ಹೊಂದಿತ್ತು. ಏಪ್ರಿಲ್‌ನಲ್ಲಿ ಓಲಾ ಕ್ಯಾಬ್ಸ್ ಅಂದಾಜು 200 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದಲ್ಲದೆ, ಓಲಾ ಕ್ಯಾಬ್ಸ್‌ನ ಸಿಇಒ ಹೇಮಂತ್ ಬಕ್ಷಿ ಮತ್ತು ಸಿಎಫ್‌ಒ ಕಾರ್ತಿಕ್ ಗುಪ್ತಾ ಕೂಡ ಕಂಪನಿಯನ್ನು ತೊರೆದಿದ್ದಾರೆ.
2023-24ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಓಲಾ ಎಲೆಕ್ಟ್ರಿಕ್ ರೂ 1,243 ಕೋಟಿಗಳ ನಿರ್ವಹಣಾ ಆದಾಯದ ಮೇಲೆ ರೂ. 267 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. 2022-23ನೇ ಹಣಕಾಸು ವರ್ಷದಲ್ಲಿ, ಓಲಾ ಎಲೆಕ್ಟ್ರಿಕ್ ರೂ. 2,631 ಕೋಟಿಗಳ ನಿರ್ವಹಣಾ ಆದಾಯದ ಮೇಲೆ ರೂ 1,472 ಕೋಟಿ ನಿವ್ವಳ ನಷ್ಟವನ್ನು ದಾಖಲಿಸಿದೆ.