ಶಿವಮೊಗ್ಗ: ಸೊರಬ ತಾಲೂಕಿನ ಹುರುಳಿ ಗ್ರಾಪಂನ ಕಂಪ್ಯೂಟರ್ ಆಪರೇಟರ್ ಎಚ್.ಎಸ್.ಗುರುನಾಥ ಅವರು ನರೇಗಾದಲ್ಲಿ ಅಕ್ರಮ ಎಸಗಿರುವುದು ಒಂಬುಡ್ಸ್‌ಮನ್ ತನಿಖೆಯಲ್ಲಿ ದೃಢಪಟ್ಟಿದೆ. ಆದರೆ 20 ತಿಂಗಳಿಂದ ಆರೋಪಿ ರಕ್ಷಣೆಗೆ ನಿಂತಿರುವ ಜಿಪಂ ಸಿಇಒ ಎನ್.ಹೇಮಂತ್ ಅವರನ್ನು ಶೀಘ್ರವೇ ಅವರ ಕಚೇರಿಯಲ್ಲಿ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ಮಂಜುನಾಥ ಹಿರೇಚೌಟಿ ಹೇಳಿದರು.
ಎಚ್.ಎಸ್.ಗುರುನಾಥ ಡೇಟಾ ಎಂಟ್ರಿ ಕಮ್ ಕಂಪ್ಯೂಟರ್ ಆಪರೇಟರ್ ಆಗಿದ್ದು, ಪತ್ನಿ ಹೇಮಾವತಿ ಹೆಸರಿನ ಉದ್ಯೋಗ ಖಾತ್ರಿ ಜಾಬ್ ಕಾರ್ಡ್‌ಗೆ 2019ರಿಂದ 2023ರವರೆಗೆ 357 ಮಾನವ ದಿನಗಳನ್ನು ಜಮೆ ಮಾಡಿ ಅಕ್ರಮ ಎಸಗಿದ್ದಾರೆ. ಅಡಕೆ ತೋಟದ ಫಲಾನುಭವಿಗಳಿಗೆ ಸೇರಬೇಕಾದ ಕೂಲಿಯನ್ನು ಗುರುನಾಥ ಅವರು ತಮ್ಮ ಪತ್ನಿ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ, ಲಂಚದ ಭಾಗವಾಗಿ ಆ ಮೊತ್ತ ಪಡೆದಿರುವುದು ಸಾಬೀತಾಗಿದೆ. ಅವರ ವಿರುದ್ಧ ಹತ್ತಾರು ಬಾರಿ ದೂರು ನೀಡಿದರೂ ಪ್ರಯೋಜನ ಆಗುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಂಚಾಯತ್‌ರಾಜ್ ನಿಯಮಾವಳಿ ವಿರುದ್ಧವಾಗಿ ಗುರುನಾಥ ಅವರು ಜಾಬ್ ಕಾರ್ಡ್ ಹೊಂದಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಸಲಹೆ ನೀಡಿದ್ದಾರೆ. ಆದರೂ ಸಿಇಒ ಹೇಮಂತ್ ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಹಿಂದಿನ ಸಿಇಒ ಸ್ನೇಹಲ್ ಲೋಖಂಡೆ ಅವರು ಗುರುನಾಥ ಅವರನ್ನು ಅಮಾನತುಗೊಳಿಸಿ ಹಣ ವಸೂಲಿ ಮಾಡಲು 2024ರ ಮಾ.18ರಂದು ಸೂಚಿಸಿದ್ದರು. ಆದರೆ ಸೊರಬ ಇಒ ಪ್ರದೀಪ್‌ಕುಮಾರ್ ಸಿಇಒ ಆದೇಶ ಪಾಲನೆ ಮಾಡದೆ ಆರೋಪಿಯನ್ನು ರಕ್ಷಿಸುತ್ತಿದ್ದಾರೆ. ಆರೋಪಿ ಕೋರಿಕೆ ಮೇರೆಗೆ ಸೊರಬ ತಾಲೂಕಿನ ಮೂಡಿದೊಡ್ಡಿಕೊಪ್ಪ ಪಂಚಾಯಿತಿಗೆ ವರ್ಗಾವಣೆ ಮಾಡಿ ರಕ್ಷಣೆ ಕೊಟ್ಟಿದ್ದಾರೆ. ಹಾಲಿ ಸಿಇಒ ಹೇಮಂತ್ ಅವರು ರಾಜಕೀಯ ಒತ್ತಡದ ಕಾರಣಕ್ಕೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬ ಶಂಕೆ ಇದೆ ಎಂದು ದೂರಿದರು. ಜಿಲ್ಲಾಧ್ಯಕ್ಷ ಪ್ರಭು ಕೊಮ್ಮನಾಳು, ಎಂ.ಡಿ.ರಫೀಕ್, ಆನಂದ್, ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.