ಭಾರತದ 3.9 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಕೊಡುಗೆ ಶೇ. 16ರಷ್ಟು ಮಾತ್ರ. ಆದರೂ ದೇಶದ 140 ಕೋಟಿ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರಿಗೆ ಕೃಷಿಯೇ ಜೀವನಾಧಾರ. ರೈತ ಸಮುದಾಯ ಭಾರತದಲ್ಲಿ ರಾಜಕೀಯ ವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಶಕ್ತಿಶಾಲಿ. ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಜಾರಿಗೊಳಿಸಲು ಯತ್ನಿಸಿ ದಾಗ, ರೈತರ ತೀವ್ರ ಪ್ರತಿಭಟನೆಯಿಂದಾಗಿ ಅವುಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ಈಗ ಅಮೆರಿಕ ಪ್ರಸ್ತಾಪಿಸುತ್ತಿರುವ ಕಡಿಮೆ ಬೆಲೆಯ ಕೃಷಿ ಉತ್ಪನ್ನಗಳ ಆಮದಿನಿಂದ ಭಾರತದಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗುವ ಭೀತಿ ಇದೆ. ಸರ್ಕಾರವನ್ನು ಟೀಕಿಸಲು ವಿರೋಧ ಪಕ್ಷಗಳಿಗೆ ಹೊಸ ವಿಷಯ ಸಿಕ್ಕಂತಾಗುತ್ತದೆ. ಇದೇ ಕಾರಣಕ್ಕೆ ಈವರೆಗಿನ ಯಾವ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿಯೂ ಭಾರತ ಕೃಷಿಯ ವಿಷಯದಲ್ಲಿ ರಾಜಿಯಾಗಿಲ್ಲ. ಅಮೆರಿಕದ ಉತ್ಪನ್ನಗಳಿಗೆ ಈಗ ಪ್ರವೇಶ ನೀಡಿದರೆ, ಬೇರೆ ದೇಶಗಳಿಗೂ ಇದೇ ರೀತಿಯ ರಿಯಾಯಿತಿಗಳನ್ನು ವಿಸ್ತರಿಸಬೇಕಾಗಬಹುದು.
ಭಾರತದ ಮಾರುಕಟ್ಟೆಯನ್ನು ತನ್ನ ವಿವಿಧ ಉತ್ಪನ್ನಗಳಿಗೆ ಮುಕ್ತಗೊಳಿಸುವಂತೆ ಅಮೆರಿಕ ಒತ್ತಾಯಿಸುತ್ತಿದೆ, ಇದರಲ್ಲಿ ಹೈನುಗಾರಿಕೆ, ಕೋಳಿಸಾಕಣೆಯೂ ಸೇರಿವೆ. ಮೆಕ್ಕೆಜೋಳ, ಸೋಯಾಬೀನ್, ಭತ್ತ, ಗೋಧಿ, ಎಥನಾಲ್, ಸಿಟ್ರಸ್ ಹಣ್ಣುಗಳು, ಬಾದಾಮಿ, ಸೇಬು, ದ್ರಾಕ್ಷಿ, ಆಲೂಗಡ್ಡೆ, ಚಾಕೊಲೇಟ್, ಕುಕೀಸ್ ಮತ್ತು ಫೋ›ಜನ್ ಫ್ರೆಂಚ್ ಫ್ರೖೆಸ್ ಕೂಡ ಸೇರಿವೆ. ಭಾರತ ಅಮೆರಿಕದ ಡ್ರೖೆಫ್ರೂಟ್ಸ್ ಮತ್ತು ಸೇಬುಗಳಿಗೆ ಮುಕ್ತ ಪ್ರವೇಶ ನೀಡಲು ಒಪ್ಪಿದೆಯಾದರೂ, ಮೆಕ್ಕೆಜೋಳ, ಸೋಯಾಬೀನ್, ಗೋಧಿ ಮತ್ತು ಹೈನು ಉತ್ಪನ್ನಗಳ ಆಮದಿಗೆ ವಿರೋಧಿಸುತ್ತಿದೆ.
ಭಾರತ ಯಾವತ್ತೂ ಕುಲಾಂತರಿ ಆಹಾರ ಬೆಳೆಗಳಿಗೆ ಅನುಮತಿ ನೀಡುವುದಿಲ್ಲ. ಆದರೆ ಅಮೆರಿಕದ ಮೆಕ್ಕೆಜೋಳ ಮತ್ತು ಸೋಯಾಬೀನ್ ಉತ್ಪಾದನೆಯ ಬಹುಪಾಲು ಕುಲಾಂತರಿ ಆಧಾರಿತವಾಗಿದೆ. ಹೈನುಗಾರಿಕೆಯೂ ಭಾರತದಲ್ಲಿ ಸೂಕ್ಷ್ಮ ವಿಷಯ. ಏಕೆಂದರೆ ಸಾಂಸ್ಕೃತಿಕ ವಿರೋಧಾಭಾಸಗಳಿಗೆ ಎಡೆಮಾಡಿಕೊಡುತ್ತದೆ. ಅಮೆರಿಕದಲ್ಲಿ ಹಸುಗಳಿಗೆ ಆಗಾಗ ಪ್ರಾಣಿ ಜನ್ಯ ಉಪಉತ್ಪನ್ನಗಳನ್ನು ಆಹಾರವಾಗಿ ನೀಡಲಾಗುತ್ತದೆ. ಇದು ಭಾರತದ ಆಹಾರ ಪದ್ಧತಿಗೆ ವಿರುದ್ಧವಾಗಿದೆ.
ಅಮೆರಿಕ ಮತ್ತು ಭಾರತದ ಮಧ್ಯೆ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ವ್ಯಾಪಾರ ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದರೂ ಅಂತಿಮಗೊಂಡಿಲ್ಲ. ಜುಲೈ 9ರ ಗಡುವಿಗೆ ಇನ್ನು ಎರಡೇ ದಿನ ಬಾಕಿ ಇದೆ. ಉಳಿದೆಲ್ಲ ವಲಯಗಳ ವಿಷಯದಲ್ಲಿ ಮಾತುಕತೆ ಫಲಪ್ರದವಾಗಿದ್ದರೂ ಕೃಷಿ ವಿಷಯ ತಡೆಗೋಡೆಯಾಗಿ ಪರಿಣಮಿಸಿದೆ. ಇದೊಂದು ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಎರಡೂ ದೇಶಗಳು ಸಿದ್ಧವಿಲ್ಲ. ಏನಿದು ಸಮಸ್ಯೆ, ಏಕೆ ಹೀಗಾಗಿದೆ ಎಂಬುದರ ವಿವರ ಇಲ್ಲಿದೆ.
ಭಾರತದಲ್ಲಿ ಒಬ್ಬ ರೈತನ ಸರಾಸರಿ ಕೃಷಿ ಭೂಮಿ ಕೇವಲ 1.08 ಹೆಕ್ಟೇರ್ ಅಷ್ಟೇ. ಅಮೆರಿಕದಲ್ಲಿ ಇದು 187 ಹೆಕ್ಟೇರ್. ಹೈನುಗಾರಿಕೆಯಲ್ಲಿಯೂ ಅಷ್ಟೇ. ಭಾರತದಲ್ಲಿ ಒಬ್ಬ ರೈತನ ಬಳಿ ಸರಾಸರಿ 2-3 ಜಾನುವಾರುಗಳಿದ್ದರೆ ಅಮೆರಿಕದ ರೈತನ ಬಳಿ ಸರಾಸರಿ ನೂರಾರು ಜಾನುವಾರುಗಳಿರುತ್ತವೆ. ಹೀಗಾಗಿ ಭಾರತದ ಸಣ್ಣ ರೈತರು ಅಮೆರಿಕದ ರೈತರೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಕೃಷಿ ಬಹುತೇಕ ಯಾಂತ್ರೀಕರಣವಾಗದೆ ಉಳಿದಿದೆ. ಏಕೆಂದರೆ ಸಣ್ಣ ಭೂ ಹಿಡುವಳಿಯಲ್ಲಿ ದೊಡ್ಡ ಯಂತ್ರಗಳಿಗೆ ಅವಕಾಶ ಇರುವುದಿಲ್ಲ. ಅನೇಕ ಪ್ರದೇಶಗಳಲ್ಲಿ ರೈತರು ತಮ್ಮ ತಾತ ಮುತ್ತಾತ ತೋರಿಸಿಕೊಟ್ಟ ಕೃಷಿ ಪದ್ಧತಿಗಳನ್ನು ಈಗಲೂ ಅನುಸರಿಸುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ಕೃಷಿಕ್ಷೇತ್ರದಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳು ವ್ಯಾಪಕವಾಗಿವೆ. ಅದರಿಂದ ಉತ್ಪಾದಕತೆ ಹೆಚ್ಚಿದೆ.