ನ್ಯೂಸ್

ಭಾರತದಲ್ಲಿ ಸೇನೆ ಮತ್ತು ಸರ್ಕಾರದ ನಡುವೆ ಎಂದಿಗೂ ಸಂಘರ್ಷ ಏಕೆ ನಡೆದಿಲ್ಲ? ರಕ್ಷಣಾ ಸಚಿವ Rajnath Singh ಹೇಳಿದ್ದೇನು..?

ನವದೆಹಲಿ: ಭಾರತದಲ್ಲಿ ನಾಗರಿಕ ಆಡಳಿತ ಮತ್ತು ಮಿಲಿಟರಿ ನಡುವೆ ಎಂದಿಗೂ ಸಂಘರ್ಷ ನಡೆದಿಲ್ಲ. ಏಕೆಂದರೆ ಎರಡೂ ಪಡೆಗಳ ಉದ್ದೇಶ ಯಾವಾಗಲೂ ರಾಷ್ಟ್ರವನ್ನು ರಕ್ಷಿಸುವುದು ಮತ್ತು ಜನರಿಗೆ ಸೇವೆ ಸಲ್ಲಿಸುವುದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಮಂಗಳವಾರ (ಅಕ್ಟೋಬರ್​​,21) ಹೇಳಿದರು.

ಸಿವಿಲ್-ಮಿಲಿಟರಿ ಫ್ಯೂಷನ್ ಆಸ್ ಎ ಮೆಟ್ರಿಕ್ ಆಫ್ ನ್ಯಾಷನಲ್ ಪವರ್ ಅಂಡ್ ಕಾಂಪ್ರಹೆನ್ಸಿವ್ ಸೆಕ್ಯುರಿಟಿ ಮತ್ತು ಪೋರ್ಟ್ರೇಟ್ಸ್ ಆಫ್ ಶೌರ್ಯ: ಟೈಮ್‌ಲೆಸ್ ಮಿಲಿಟರಿ ಆರ್ಟ್ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ಪಾಶ್ಚಿಮಾತ್ಯ ದೇಶಗಳಲ್ಲಿ, ಅಧಿಕಾರವು ಹೆಚ್ಚಾಗಿ ಅನುಮಾನದೊಂದಿಗೆ ಸಂಬಂಧ ಹೊಂದಿದೆ. ಅದರೆ, ಭಾರತದಲ್ಲಿ, ಅಧಿಕಾರವು ಯಾವಾಗಲೂ ತ್ಯಾಗವನ್ನು ಅರ್ಥೈಸುತ್ತದೆ.

ಭಾರತದಲ್ಲಿ ಮಿಲಿಟರೀಕರಣದ ಭಯವು ಪಾಶ್ಚಿಮಾತ್ಯ ಚಿಂತನೆಯ ಉತ್ಪನ್ನವಾಗಿದೆ. ಭಾರತೀಯ ಸಂಪ್ರದಾಯದಲ್ಲಿ, ಅಧಿಕಾರವನ್ನು ರಕ್ಷಣೆ ಮತ್ತು ಸೇವೆಗಾಗಿ ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ, ಅಧಿಕಾರವು ತ್ಯಾಗದೊಂದಿಗೆ ಇದೆ- ರಾಜನಾಥ್ ಸಿಂಗ್

ಭಾರತದಲ್ಲಿ ಅಧಿಕಾರದ ಉದ್ದೇಶ ಯಾವಾಗಲೂ ಜನರನ್ನು ರಕ್ಷಿಸುವುದು ಮತ್ತು ಸೇವೆ ಮಾಡುವುದು. ಇದಕ್ಕಾಗಿಯೇ ಭಾರತದಲ್ಲಿ ನಾಗರಿಕ ಆಡಳಿತ ಮತ್ತು ಮಿಲಿಟರಿಯ ನಡುವೆ ಎಂದಿಗೂ ಸಂಘರ್ಷ ಉಂಟಾಗಿಲ್ಲ ಎಂದು ಸಿಂಗ್​ ಹೇಳಿದ್ದಾರೆ. ಅಲ್ಲದೆ, ನಾಗರಿಕ ಮತ್ತು ಮಿಲಿಟರಿ ಆಡಳಿತದ ನಡುವಿನ ವ್ಯತ್ಯಾಸವು ಸೈದ್ಧಾಂತಿಕವಲ್ಲ. ಆದರೆ ಕೆಲಸದ ವೈಜ್ಞಾನಿಕ ವಿತರಣೆಯ ಫಲಿತಾಂಶವಾಗಿದೆ ಎಂದು ಸಿಂಗ್​ ಹೇಳಿದ್ದಾರೆ.

ಏಕೀಕರಣ ಅತ್ಯಂತ ಮುಖ್ಯ

ದೇಶವನ್ನು ರಕ್ಷಿಸುವ ಈ ಜವಾಬ್ದಾರಿಯನ್ನು ತಮಗೆ ನೀಡಿದಾಗ, ಮೂರು ಸೇವೆಗಳ ನಡುವೆ ಏಕತೆ ಮತ್ತು ಏಕೀಕರಣವನ್ನು ತರುವುದು ಪ್ರಾಥಮಿಕ ಕಾರ್ಯವಾಗಿತ್ತು. ಇದು ಕಷ್ಟ, ಆದರೆ ಅಗತ್ಯ. ನಾಗರಿಕ-ಮಿಲಿಟರಿ ಸಮ್ಮಿಲನವು ಈ ಏಕೀಕರಣದತ್ತ ಒಂದು ಹೆಜ್ಜೆಯಾಗಿದೆ. ಇತ್ತೀಚಿನ ಜಂಟಿ ಕಮಾಂಡರ್‌ಗಳ ಸಮ್ಮೇಳನದಲ್ಲಿ, ಸರ್ಕಾರವು ಏಕೀಕರಣವನ್ನು ಹೆಚ್ಚಿಸಲು ಸೈನ್ಯಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಒದಗಿಸಿದೆ ಎಂದು ಸಿಡಿಎಸ್​ ಅನಿಲ್​ ಚೌಹಾಣ್​ ವಿವರಿಸಿದ್ದಾರೆ. (ಏಜೆನ್ಸೀಸ್)