ನ್ಯಾಯಾಧೀಶರು ತೀರ್ಪು ನೀಡಿದ ಬಳಿಕ ಪೆನ್​ ಅನ್ನು ಕಸದ ಬುಟ್ಟಿಗೆ ಎಸೆಯುವುದೇಕೆ..? WEB
ನ್ಯೂಸ್

ನ್ಯಾಯಾಧೀಶರು ತೀರ್ಪು ನೀಡಿದ ಬಳಿಕ ಪೆನ್​ ಅನ್ನು ಕಸದ ಬುಟ್ಟಿಗೆ ಎಸೆಯುವುದೇಕೆ..? ಹಲವು ದೇಶಗಳಲ್ಲಿದೆ ಈ ಸಂಪ್ರದಾಯ!

ದೇಶಾದ್ಯಂತ ತೀವ್ರ ತಲ್ಲಣ ಮೂಡಿಸಿದ ನೀಲಿ ಡ್ರಮ್​ ಪ್ರಕರಣದಲ್ಲಿ ನ್ಯಾಯಾಲಯ ಇತ್ತೀಚೆಗೆ ಆಪರಾಧಿಗಳಾದ ಮುಸ್ಕಾನ್​ ಮತ್ತು ಸಾಹಿಲ್​ಗೆ ಮರಣದಂಡನೆ ಘೋಷಿಸಿದೆ. ಮುಸ್ಕಾನ್​ ತನ್ನ ಪ್ರಿಯತಮ ಸಾಹಿಲ್​ ಜತೆ ಸೇರಿ ಪತಿ ಸೌರಭ್​ನನ್ನು ಭೀಕರವಾಗಿ ಹತ್ಯೆ ಮಾಡಿ, ದೇಹದ ತುಂಡುಗಳನ್ನು ನೀಲಿ ಡ್ರಮ್​ನಲ್ಲಿ ಹಾಕಿ ಪರಾರಿಯಾಗಿದ್ದಳು.

ದೇಶಾದ್ಯಂತ ತೀವ್ರ ತಲ್ಲಣ ಮೂಡಿಸಿದ ನೀಲಿ ಡ್ರಮ್​ ಪ್ರಕರಣದಲ್ಲಿ ನ್ಯಾಯಾಲಯ ಇತ್ತೀಚೆಗೆ ಆಪರಾಧಿಗಳಾದ ಮುಸ್ಕಾನ್​ ಮತ್ತು ಸಾಹಿಲ್​ಗೆ ಮರಣದಂಡನೆ ಘೋಷಿಸಿದೆ. ಮುಸ್ಕಾನ್​ ತನ್ನ ಪ್ರಿಯತಮ ಸಾಹಿಲ್​ ಜತೆ ಸೇರಿ ಪತಿ ಸೌರಭ್​ನನ್ನು ಭೀಕರವಾಗಿ ಹತ್ಯೆ ಮಾಡಿ, ದೇಹದ ತುಂಡುಗಳನ್ನು ನೀಲಿ ಡ್ರಮ್​ನಲ್ಲಿ ಹಾಕಿ ಪರಾರಿಯಾಗಿದ್ದಳು. ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಾಧೀಶರು ಪೆನ್​ ಅನ್ನು ಕಸದ ಬುಟ್ಟಿಗೆ ಹಾಕಿದರು. ಮರಣದಂಡನೆಯ ತೀರ್ಪಿಗೆ ಸಹಿ ಹಾಕಿದ ನಂತರ ಪೆನ್ನು ಎಸೆಯುವ ಅಥವಾ ನಿಬ್​ ಮುರಿಯುವ ಸಂಪ್ರದಾಯ ಮೊಘಲ್​ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮೊಘಲ್​ ಬಾದ್​ಶಾಹರು ಮರಣದಂಡನೆಯ ಆದೇಶವನ್ನು (ಫರ್ಮಾನ್​) ಬರೆದ ನಂತರ ಆ ಲೇಖನಿಯನ್ನು ಮುರಿದು ಹಾಕುತ್ತಿದ್ದರು. ಬ್ರಿಟಿಷ್​ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್​ ನ್ಯಾಯಾಧೀಶರು ಈ ಪದ್ಧತಿಯನ್ನು ಅಳವಡಿಸಿಕೊಂಡರು. ಸ್ವಾತಂತ್ರ್ಯದ ನಂತರವೂ ಭಾರತದಲ್ಲಿ ಈ ಸಂಪ್ರದಾಯ ಮುಂದುವರಿದಿದೆ.

ಉತ್ತರಪ್ರದೇಶದ ಮೀರತ್​ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್​ ಕುಮಾರ್​ ಮಿಶ್ರಾ ಅಕ್ಟೋಬರ್​ 14ರ ಸಂಜೆ 4.22ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್​ ಮೂಲಕ ಮುಸ್ಕಾನ್​ ರಸ್ತೋಗಿ ಮತ್ತು ಸಾಹಿಲ್​ ಶುಕ್ಲಾಗೆ ಹೀಗೆ ಹೇಳಿದರು, "ನೀವಿಬ್ಬರೂ ಸೇರಿ ಸೌರಭ್​ ರಜಪೂತ್​ನನ್ನು ಹತ್ಯೆ ಮಾಡಿದ್ದೀರಿ'. ಬಳಿಕ, ನ್ಯಾಯಾಧೀಶರು ಇಬ್ಬರಿಗೂ ಗಲ್ಲು ಶಿಕ್ಷೆಯನ್ನು ಘೋಷಿಸಿ ತೀರ್ಪು ನೀಡಿದರು ಮತ್ತು ಮಹಾಭಾರತದ ಶ್ಲೋಕವೊಂದರ ಅರ್ಥವನ್ನು ಉಲ್ಲೇಖಿಸುತ್ತ, "ಅಧರ್ಮ ಮಾಡುವವರಿಗೆ ಶಿಕ್ಷೆ ನೀಡುವುದು ಕೂಡ ಧರ್ಮವೇ ಆಗಿದೆ' ಎಂದು ಹೇಳಿದರು. ಇದರ ನಂತರ, ಅವರು ಮುಸ್ಕಾನ್​ ಮತ್ತು ಸಾಹಿಲ್​ಗೆ ಮರಣದಂಡನೆ ಆದೇಶ ಬರೆದ ಪೆನ್ನನ್ನು ತಕ್ಷಣವೇ ಕಸದ ಬುಟ್ಟಿಗೆ ಎಸೆದರು.

ಶತಮಾನಗಳ ಹಿಂದಿನಿಂದಲೂ ಯುರೋಪಿಯನ್​ ದೇಶಗಳಲ್ಲಿ ಈ ಪದ್ಧತಿ ಚಾಲ್ತಿಯಲ್ಲಿತ್ತು. ವಿಶೇಷವಾಗಿ ಜರ್ಮನಿ, ಫ್ರಾನ್ಸ್​ನಂತಹ ದೇಶಗಳಲ್ಲಿ ಮರಣದಂಡನೆ ವಿಧಿಸಿದ ನಂತರ ನ್ಯಾಯಾಧೀಶರು ಪೆನ್ನನ್ನು ಮುರಿಯುತ್ತಿದ್ದರು. ಹಂಗೇರಿಯಂತಹ ಕೆಲವು ದೇಶಗಳಲ್ಲಿ ನ್ಯಾಯಾಧೀಶರ ಬಳಿ ರಾಜದಂಡದಂತಹ ಒಂದು ಕೋಲು (ದಂಡ) ಇರುತ್ತಿತ್ತು. ಗಲ್ಲುಶಿಕ್ಷೆಯನ್ನು ಪ್ರಕಟಿಸಿದ ಬಳಿಕ ನ್ಯಾಯಾಧೀಶರು ಅದನ್ನು ಮುರಿದು ಹಾಕುತ್ತಿದ್ದರು. ಮುರಿದ ಪೆನ್ನನ್ನು ಮತ್ತೆ ಬಳಸಲು ಸಾಧ್ಯವಿಲ್ಲ. ಅದೇ ರೀತಿ, ಅದೇ ನ್ಯಾಯಾಲಯದಲ್ಲಿ ಮರಣದಂಡನೆಯ ತೀರ್ಪನ್ನು ಬದಲಾಯಿಸಲು ಅಥವಾ ಅದರ ಮೇಲೆ ಮರುಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ.

ಶಿಕ್ಷೆಯ ಗಂಭೀರತೆ

ಮುರಿದ ಪೆನ್ನು ನ್ಯಾಯಾಧೀಶರ ಇಚ್ಛೆಯನ್ನು ತೋರಿಸುತ್ತದೆ. ಯಾರದ್ದಾದರೂ ಮರಣವನ್ನು ಬರೆದ ಪೆನ್ನನ್ನು ಮತ್ತೆ ಬಳಸಲು ತಾವು ಬಯಸುವುದಿಲ್ಲ ಎಂಬುದನ್ನು ಅವರು ಈ ಮೂಲಕ ತೋರಿಸಲು ಬಯಸುತ್ತಾರೆ. ಅವರು ತಮ್ಮ ಕಾನೂನಾತ್ಮಕ ಕರ್ತವ್ಯವನ್ನೇನೋ ನಿರ್ವಹಿಸುತ್ತಿದ್ದಾರೆ, ಆದರೆ ಈ ಮೂಲಕ ತಮ್ಮ ಅಸಮ್ಮತಿಯನ್ನೂ ವ್ಯಕ್ತಪಡಿಸುತ್ತಾರೆ. ತಜ್ಞರು ವಿವರಿಸುವಂತೆ, "ಮುರಿದ ಪೆನ್ನು ಮನಸ್ಸನ್ನು ಹಗುರಗೊಳಿಸಿಕೊಳ್ಳುವ ಒಂದು ವಿಧಾನವಾಗಿದೆ. ಅಂದರೆ, ತಾನು ಕಾನೂನಿನ ಪ್ರಕಾರ ಕೆಲಸ ಮಾಡಿದ್ದೇನೆ. ಪೆನ್ನು ಮುರಿಯಿತು, ಈಗ ಕೆಲಸ ಮುಗಿಯಿತು ಎಂಬಂತೆ. ಈ ಆಚರಣೆಯು ನ್ಯಾಯಾಧೀಶರು ಮತ್ತು ಅವರ ತೀರ್ಪಿನ ಫಲಿತಾಂಶದ ನಡುವೆ ಭಾವನಾತ್ಮಕ ಅಂತರವನ್ನು ಸೃಷ್ಟಿಸುತ್ತದೆ.' ಗಲ್ಲು ಶಿಕ್ಷೆಯು ಅತ್ಯಂತ ಗಂಭೀರವಾದ ಶಿಕ್ಷೆಯಾಗಿದೆ. ಪೆನ್ನನ್ನು ಮುರಿಯುವ ಮೂಲಕ ನ್ಯಾಯಾಧೀಶರು ಈ ಗಂಭೀರತೆ ಮತ್ತು ಶಿಕ್ಷೆಗೊಳಗಾದ ವ್ಯಕ್ತಿಯ ಜೀವನದ ಅಂತ್ಯದ ಸಂದೇಶವನ್ನು ನೀಡುತ್ತಾರೆ.

ಏಳು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ 35 ವರ್ಷದ ನಿಕೋಲಸ್​ ಮಚಾರಿಯಾಗೆ ಕೀನ್ಯಾ ನ್ಯಾಯಾಲಯವೊಂದರ ನ್ಯಾಯಾಧೀಶರಾದ ಕಿಜಿಟೋ ಮಗಾರೆ ಅವರು 2026ರ ಫೆಬ್ರವರಿಯಲ್ಲಿ ಮರಣದಂಡನೆಯನ್ನು ವಿಧಿಸಿ ಪೆನ್ನು ಮುರಿದರು.

ಭಾರತದಲ್ಲಿ ಗಲ್ಲು ಶಿಕ್ಷೆಯ ಕುರಿತಾದ ಚಿಂತನೆ ಹಾಗೂ ಕಾನೂನುಗಳು

ಭಾರತದ ಸುಪ್ರೀಂ ಕೋರ್ಟ್​ ಪ್ರಕಾರ, ದಂಡಶಾಸ್ತ್ರದ ತತ್ವಗಳ ಹಿಂದೆ ಮಾನವ ಜೀವವನ್ನು ಉಳಿಸುವ ತತ್ವಚಿಂತನೆ ಅಡಗಿದೆ. ಶಿಕ್ಷೆಯು ಅಪರಾಧಗಳನ್ನು ಕಡಿಮೆ ಮಾಡಲು ಮತ್ತು ಅಪರಾಧಿಗಳ ಸಕಾರಾತ್ಮಕ ಪರಿವರ್ತನೆಗಾಗಿ ಇದೆ. ಮರಣದಂಡನೆಯು ಅಪರಾಧವನ್ನು ನಿಯಂತ್ರಿಸುವ ಪರಿಣಾಮಕಾರಿ ಸಾಧನವಾಗಿದೆ ಮತ್ತು ಸೂಕ್ತ ಪ್ರಕರಣಗಳಲ್ಲಿ ಸೂಕ್ತ ಶಿಕ್ಷೆಯನ್ನು ನೀಡಬೇಕೆಂಬ ಸಮಾಜದ ಬೇಡಿಕೆಗೆ ತಕ್ಕ ಪ್ರತಿಕ್ರಿಯೆಯಾಗಿದೆ. ಭಾರತದಲ್ಲಿ ಕೊಲೆ, ಅತ್ಯಾಚಾರ ಮತ್ತು ದೇಶದ್ರೋಹದಂತಹ ಗಂಭೀರ ಅಪರಾಧಗಳಿಗೆ ಗಲ್ಲು ಶಿಕ್ಷೆ ವಿಧಿಸಬಹುದು. ಸ್ವಾತಂತ್ರ್ಯದ ನಂತರ ಈ ವಿಷಯದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ.

1955ರ ಮೊದಲು: ಭಾರತದಲ್ಲಿ ಗಂಭೀರ ಅಪರಾಧಗಳಿಗೆ ಗಲ್ಲು ಶಿಕ್ಷೆಯೇ ನಿಯಮವಾಗಿತ್ತು, ಜೀವಾವಧಿ ಶಿಕ್ಷೆಯು ಕೇವಲ ಅಪವಾದವಾಗಿತ್ತು (ವಿನಾಯಿತಿಯಾಗಿತ್ತು). ಒಂದು ವೇಳೆ ನ್ಯಾಯಾಲಯ ಜೀವಾವಧಿ ಶಿೆಯನ್ನು ನೀಡಿದರೆ, ಅದಕ್ಕೆ ಕಾರಣವನ್ನು ಸ್ಪಷ್ಟಪಡಿಸಬೇಕಾಗಿತ್ತು.

1955: ಕ್ರಿಮಿನಲ್​ ಪ್ರೊಸೀಜರ್​ ಅಮೆಂಡ್​ಮೆಂಟ್​ ಆ್ಯಕ್ಟ್​ ಜಾರಿಯಾದ ನಂತರ, ನ್ಯಾಯಾಲಯಗಳು ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗಳಲ್ಲಿ ಒಂದನ್ನು ಆಯ್ಕೆ ಮಾಡುವ ಅಧಿಕಾರ ಪಡೆದವು.

1973: ಸಿಆರ್​ಪಿಸಿ ಸೆಕ್ಷನ್​ 354(3) ಅಡಿಯಲ್ಲಿ, ಜೀವಾವಧಿ ಶಿಕ್ಷೆಯೇ ಸಾಮಾನ್ಯ ನಿಯಮ ಮತ್ತು ಗಲ್ಲು ಶಿಕ್ಷೆಯು ಕೇವಲ ಅಪವಾದ ಎಂದು ನಿರ್ಧರಿಸಲಾಯಿತು. ನ್ಯಾಯಾಲಯಗಳು ಗಲ್ಲು ಶಿಕ್ಷೆ ವಿಧಿಸಲು ನಿರ್ದಿಷ್ಟ ಕಾರಣಗಳನ್ನು ಲಿಖಿತವಾಗಿ ದಾಖಲಿಸುವುದು ಕಡ್ಡಾಯವಾಯಿತು.

1973ರ ನಂತರ: ಒಬ್ಬ ಅಪರಾಧಿಯ ಕೊಲೆ ಕೃತ್ಯವು ಪೂರ್ವಯೋಜಿತವಾಗಿದ್ದು ಅಪಾಯಕಾರಿ ರೀತಿಯಲ್ಲಿ ಸಮಾಜದ ಸುರತೆಗೆ ಧಕ್ಕೆ ತಂದರೆ, ಕಾನೂನು ಪ್ರಕ್ರಿಯೆಯ ಮೂಲಕ ಸಂವಿಧಾನದ 21ನೇ ವಿಧಿಯು ನೀಡಿದ ಜೀವಿಸುವ ಹಕ್ಕನ್ನು ಅಂತ್ಯಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್​ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿತು.

1980: ಸುಪ್ರೀಂ ಕೋರ್ಟ್​ 1980ರಲ್ಲಿ ರೂಪಿಸಿದ "ಅಪರೂಪದಲ್ಲೇ ಅಪರೂಪ' (Rarest of Rare) ತತ್ವದ ಪ್ರಕಾರ, ಬೇರೆ ಯಾವುದೇ ಪರ್ಯಾಯ ಆಯ್ಕೆಗಳಿಲ್ಲದ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಬಹುದು. ಅಪರೂಪದಲ್ಲೇ ಅಪರೂಪದ ಪ್ರಕರಣವೆಂದರೆ "ಒಂದು ಕೊಲೆಯನ್ನು ಅತ್ಯಂತ ಕ್ರೂರ, ಅಸಹ್ಯಕರ ಮತ್ತು ಖಂಡನೀಯ ರೀತಿಯಲ್ಲಿ ಮಾಡಲಾಗಿದ್ದು, ಅದು ಸಮಾಜದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದಾಗ ಹಾಗೂ ಆ ಕೊಲೆಯ ಹಿಂದೆ ದ್ವೇಷ ಮತ್ತು ಕ್ರೂರ ಭಾವನೆಗಳೇ ಮುಖ್ಯ ಉದ್ದೇಶವಾಗಿದ್ದಾಗ.'

ಸಾಹಿಲ್​ ಮತ್ತು ಮುಸ್ಕಾನ್​ ಪ್ರಕರಣ!

ಸಾಹಿಲ್​ ಮತ್ತು ಮುಸ್ಕಾನ್​ ಅಪರಾಧವನ್ನು ನ್ಯಾಯಾಲಯವು ರೇರೆಸ್ಟ್​ ಆಫ್​ ರೇರ್​ ಎಂದು ಪರಿಗಣಿಸಿದೆ. ಏಕೆಂದರೆ, 29 ವರ್ಷದ ಮರ್ಚೆಂಟ್​ ನೇವಿ ಅಧಿಕಾರಿಯಾಗಿದ್ದ ಸೌರಭ್​ ರಜಪೂತ್​ ಅವರಿಗೆ ಮಾದಕ ಪದಾರ್ಥವನ್ನು ನೀಡಿ ಚಾಕುವಿನಿಂದ ಇರಿದು ಕೊಲ್ಲಲಾಯಿತು. ಸೌರಭ್​ ಮೃತದೇಹವನ್ನು ಸಾಹಿಲ್​ ಮತ್ತು ಮುಸ್ಕಾನ್​ ತುಂಡುಗಳಾಗಿ ಕತ್ತರಿಸಿ, ಸಿಮೆಂಟ್​ ಜೊತೆಗೆ ನೀಲಿ ಬಣ್ಣದ ಡ್ರಮ್​ನಲ್ಲಿ ತುಂಬಿ ಗಟ್ಟಿಯಾಗುವಂತೆ ಮಾಡಿದ್ದರು. 13 ತಿಂಗಳ ಅವಧಿಯಲ್ಲಿ 126 ವಿಚಾರಣೆಗಳು ನಡೆದವು ಮತ್ತು 22 ಸಾಕ್ಷಿಗಳನ್ನು ಹಾಜರುಪಡಿಸಲಾಯಿತು. ಪ್ರಾಸಿಕ್ಯೂಷನ್​ ಪರ ಸರ್ಕಾರಿ ವಕೀಲರಾದ ಕೆ.ಕೆ.ಚೌಬೆ ಅವರು, "ಇದು ಸಂಪೂರ್ಣ ಯೋಜಿತ ಮತ್ತು ಸಂಚಿನ ಮೂಲಕ ಎಸಗಲಾದ ಅಪರಾಧವಾಗಿದೆ. ನ್ಯಾಯಾಲಯವು ಅಪರಾಧದ ಕ್ರೌರ್ಯವನ್ನು ಪರಿಗಣಿಸಬೇಕೇ ಹೊರತು ಕೇವಲ ಕಡಿಮೆ ವಯಸ್ಸು ಅಥವಾ ಮೊದಲ ಅಪರಾಧ ಎಂಬ ಕಾರಣಕ್ಕೆ ಶಿಕ್ಷೆಯನ್ನು ಕಡಿಮೆ ಮಾಡಬಾರದು. ಈ ಪ್ರಕರಣದಿಂದಾಗಿ ಪತಿ ಮತ್ತು ಪತ್ನಿಯರ ಪವಿತ್ರ ಸಂಬಂಧದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ' ಎಂದು ವಾದಿಸಿದರು. ನ್ಯಾಯಾಧೀಶರು ತೀರ್ಪಿನಲ್ಲಿ ಈ ಅಪರಾಧವನ್ನು "ಅತ್ಯಂತ ಕ್ರೂರ ಮತ್ತು ಗಂಭೀರ' ಎಂದು ಪರಿಗಣಿಸಿದರು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇದನ್ನು "ಅಪರೂಪದಲ್ಲಿ ಅಪರೂಪ' ವರ್ಗದಲ್ಲಿ ಇರಿಸಲಾಯಿತು. ಆದರೆ, ಸಾಹಿಲ್​ ಮತ್ತು ಮುಸ್ಕಾನ್​ಗೆ ಶಿಕ್ಷೆಯ ವಿರುದ್ಧ ಹೈಕೋರ್ಟ್​ನಿಂದ ಸುಪ್ರೀಂ ಕೋರ್ಟ್​ವರೆಗೆ ಮೇಲ್ಮನವಿ ಸಲ್ಲಿಸುವ ಅವಕಾಶಗಳು ಇನ್ನೂ ಇವೆ.

ಚರ್ಚೆಗೆ ಗ್ರಾಸವಾದ ವಿಷಯ

ಮೇಲ್ಮನವಿ ಸಲ್ಲಿಸಿದ ನಂತರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಬಹುದು ಅಥವಾ ಶಿಕ್ಷೆಯನ್ನು ರದ್ದುಗೊಳಿಸಬಹುದು. 2016ರಿಂದ 2025ರವರೆಗೆ ಸೆಷನ್ಸ್​ ನ್ಯಾಯಾಲಯಗಳು 1,279 ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿದ್ದವು, ಆದರೆ ಹೈಕೋರ್ಟ್​ಗಳು 70 ಜನರ ಶಿಕ್ಷೆಯನ್ನು ಮಾತ್ರ ಎತ್ತಿಹಿಡಿದವು.

ಕೊಲೆಯ ಹೊರತಾಗಿಯೂ ಯಾರ ಜೀವವೂ ಹೋಗದ ಹಲವು ಪ್ರಕರಣಗಳಲ್ಲಿ ಸಹ ಮರಣದಂಡನೆ ವಿಧಿಸಲಾಗುತ್ತದೆ; ಉದಾಹರಣೆಗೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳು, ಭಯೋತ್ಪಾದನೆಯ ಆರೋಪ, ದೇಶದ ವಿರುದ್ಧ ಯುದ್ಧ ಸಾರುವುದು. 2015ರಲ್ಲಿ ಕಾನೂನು ಆಯೋಗವು ಭಯೋತ್ಪಾದನೆ ಮತ್ತು ದೇಶದ ವಿರುದ್ಧ ಯುದ್ಧ ಸಾರುವ ಅಪರಾಧಗಳನ್ನು ಹೊರತುಪಡಿಸಿ, ಉಳಿದ ಪ್ರಕರಣಗಳಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲು ಶಿಫಾರಸು ಮಾಡಿತ್ತು, ಆದರೆ ಇವುಗಳನ್ನು ಜಾರಿಗೆ ತಂದಿಲ್ಲ.

2025ರಲ್ಲಿ 17 ದೇಶಗಳಲ್ಲಿ ಕನಿಷ್ಠ 2,707 ಜನರಿಗೆ ಮರಣದಂಡನೆ ನೀಡಲಾಯಿತು. ಇದು 2024ಕ್ಕೆ ಹೋಲಿಸಿದರೆ 78%ರಷ್ಟು ಹೆಚ್ಚಾಗಿದೆ ಮತ್ತು 1981ರ ನಂತರದ ಅತಿ ದೊಡ್ಡ ಅಂಕಿಅಂಶವಾಗಿದೆ.

"ಅಪರಾಧಿಗಳು ಮಾಡಿದ ಅಪರಾಧದ ತೀವ್ರತೆಗೆ ಅನುಗುಣವಾಗಿ ಅವರು ಅರ್ಹವಾದ ಶಿಕ್ಷೆಯನ್ನು ಪಡೆಯಬೇಕು. ಮರಣದಂಡನೆಯು ಸಂತ್ರಸ್ತರ ಕುಟುಂಬಗಳಿಗೆ ಅಂತಿಮ ಮತ್ತು ನ್ಯಾಯಸಮ್ಮತ ಸಮಾಧಾನವಾಗಿದೆ. ಗಲ್ಲು ಶಿಕ್ಷೆ ವಿಧಿಸುವುದರಿಂದ ಭವಿಷ್ಯದಲ್ಲಿ ಅಪರಾಧಿಯು ಇನ್ನಷ್ಟು ಕ್ರೂರ ಅಪರಾಧಗಳು ಅಥವಾ ಹತ್ಯೆಗಳನ್ನು ಮಾಡದಂತೆ ತಡೆಯಬಹುದು' ಎಂಬುದು ಮರಣದಂಡನೆ ಸಮರ್ಥಿಸುವವರ ವಾದ.

ಮರಣದಂಡನೆಯ ವಿರುದ್ಧವಿರುವ ಅತಿ ದೊಡ್ಡ ನೈತಿಕ ವಾದವೇನೆಂದರೆ, "ನೀವು ಯಾರಿಗೂ ಜೀವ ನೀಡಲು ಸಾಧ್ಯವಿಲ್ಲವೆಂದ ಮೇಲೆ, ನೈತಿಕವಾಗಿ ನಿಮಗೆ ಯಾರ ಜೀವವನ್ನೂ ಕಸಿಯುವ ಹಕ್ಕಿಲ್ಲ' ಎಂಬುದು.