ಪುಣ್ಯಸ್ಯ ಫಲಮಿಚ್ಛಂತಿ /ಪುಣ್ಯಂ ನೇಚ್ಛಂತಿ ಮಾನವಾಃ |
ನ ಪಾಪಫಲಮಿಚ್ಛಂತಿ/ ಪಾಪಂ ಕುರ್ವಂತಿ ಯತ್ನತಃ ||
ಪುಣ್ಯದ ಫಲವನ್ನು ಎಲ್ಲರೂ ಬಯಸುತ್ತಾರೆ. ಆದರೆ ಒಳ್ಳೆಯ ಕರ್ಮಗಳನ್ನು ಮಾಡುವುದರಲ್ಲಿ ಆಸಕ್ತಿಯನ್ನು ಹೊಂದಿಲ್ಲ. ಪಾಪದ ಫಲವು ಯಾರಿಗೂ ಬೇಡ, ಆದರೆ ಎಲ್ಲರೂ ಪ್ರಯತ್ನಪಟ್ಟು ಪಾಪಗಳನ್ನು ಮಾಡುತ್ತಾರೆ. ಪಾಪ ಅಂದರೆ ಏನು? ಪುಣ್ಯ ಅಂದರೆ ಏನು, ಪಾಪವನ್ನು ಮಾಡಿದರೆ ಏನಾಗುತ್ತದೆ, ಪುಣ್ಯವನ್ನು ಮಾಡಿದರೆ ಏನಾಗುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ, ಅದನ್ನು ನಮಗೆ ಯಾರೂ ಹೇಳಿಕೊಡುವ ಆವಶ್ಯಕತೆ ಇಲ್ಲ. ಪಾಪವನ್ನು ಮಾಡಿದರೆ ಜೀವನದಲ್ಲಿ ದುಃಖ ಬರುತ್ತದೆ ಎಂದು ಗೊತ್ತಿದ್ದರೂ ಎಲ್ಲರೂ ಪ್ರಯತ್ನಪೂರ್ವಕವಾಗಿ ಪಾಪ ಕರ್ಮಗಳನ್ನೇ ಮಾಡುತ್ತಾರೆ. ಒಳ್ಳೆಯ ಕರ್ಮಗಳಿಂದ ಸುಖ ಖಂಡಿತವಾಗಿಯೂ ನಮಗೆ ಪ್ರಾಪ್ತಿಯಾಗುತ್ತದೆ ಎಂದೂ ಗೊತ್ತು, ಆದರೂ ಅದನ್ನು ನಾವು ಮಾಡುವುದಿಲ್ಲ. ಗೊತ್ತಿದ್ದೂ ಗೊತ್ತಿದ್ದು ನಾವು ಯಾಕೆ ಪಾಪವನ್ನೇ ಮಾಡುತ್ತೇವೆ? ಇದು ಬಹಳ ವಿಚಿತ್ರ.
ಈ ಪಾಪ ಮತ್ತು ಪುಣ್ಯದ ಈ ದಾರಿ ಕ್ಲಿಷ್ಟಕರವಾಗಿದೆಯೇ? ಹಾಗಾದರೆ ಯಾಕೆ ಮನುಷ್ಯ ಭ್ರಮಿತನಾಗುತ್ತಿದ್ದಾನೆ? ಮನುಷ್ಯ ಯಾಕೆ ದಾರಿ ತಪ್ಪುತ್ತಿದ್ದಾನೆ? ಇಲ್ಲಿ ಮೊದಲು ತಿಳಿದುಕೊಳ್ಳಬೇಕಾದ ಒಂದು ಅಂಶ ಏನೆಂದರೆ ಪಾಪವನ್ನು ನಾವು ಪಾಪ ಎಂದು ತಿಳಿದುಕೊಂಡು ಮಾಡುವುದಿಲ್ಲ. ಪಾಪವನ್ನು ಪಾಪ ಎಂದು ಅರಿತಲ್ಲಿ, ನಮ್ಮ ಕೈ ಮುಂದೆ ಹೋಗುವದಿಲ್ಲ, ನಮ್ಮ ಹೆಜ್ಜೆ ಮುಂದೆ ಹೋಗುವುದಿಲ್ಲ. ನಾವು ಒಂದು ಕ್ಷಣ ಹಿಂದೆ ಹೋಗುತ್ತೇವೆ. ಪಾಪವನ್ನೂ ಕೂಡ ಪುಣ್ಯ ಎಂದು ತಿಳಿದೇ ಮಾಡುತ್ತೇವೆ. ಯಾವುದೇ ಕೆಟ್ಟ ಕೆಲಸವನ್ನು ಮಾಡಲಿ, ಇದೂ ಕೂಡ ಒಳ್ಳೆಯ ಕೆಲಸವೇ, ಒಳ್ಳೆಯ ಉದ್ದೇಶಕ್ಕಾಗಿ ನಾನು ಇದನ್ನು ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಇಟ್ಟುಕೊಂಡು ಮಾಡುತ್ತೇವೆ. ಆದ್ದರಿಂದ ಪಾಪ ಎನ್ನುವುದು ನಮ್ಮಿಂದ ಸುಲಭವಾಗಿ ಘಟಿಸಲು ಸಾಧ್ಯವಾಗುತ್ತಿದೆ. ಕೆಟ್ಟದ್ದು ಕೂಡ ಒಳ್ಳೆಯದರ ಬೆನ್ನ ಮೇಲೆಯೇ ಓಡಾಡುತ್ತಿರುವುದು. ಕೆಟ್ಟದ್ದನ್ನು ಮಾಡಲು ಅದಕ್ಕೆ ಆಸರೆ ಒಳ್ಳೆಯದೇ ಆಗಿರುತ್ತದೆ.