ಧೂಳಿನಿಂದ ಕಣ್ಣನ್ನು ರಕ್ಷಿಸುವ ಕಣ್ಣೀರಿನ ನೈಸರ್ಗಿಕ ವ್ಯವಸ್ಥೆ 
ನ್ಯೂಸ್

ಕಣ್ಣಿಗೆ ಧೂಳು ಬಿದ್ದಾಗ ತಕ್ಷಣ ಕಣ್ಣೀರು ಬರುತ್ತೆ ಯಾಕೆ? ಇದರ ಹಿಂದಿದೆ ಅಚ್ಚರಿಯ ನೈಸರ್ಗಿಕ ರಕ್ಷಣಾ ವ್ಯವಸ್ಥೆ! | Tear Facts

Tear Science: ಕಣ್ಣಿಗೆ ಸಣ್ಣ ಧೂಳಿನ ಕಣ ಬಿದ್ದರೂ ಸಾಕು, ತಕ್ಷಣ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಹೊಗೆ ಅಥವಾ ಗಾಳಿ ತಾಗಿದರೂ ಕಣ್ಣೀರು ಹರಿಯಲು ಶುರುವಾಗುತ್ತದೆ. ಇದು ಕೇವಲ ದೇಹದ ಸಹಜ ಪ್ರತಿಕ್ರಿಯೆಯಲ್ಲ. ಕಣ್ಣುಗಳನ್ನು ಧೂಳು, ಕಸ ಮತ್ತು ಸೂಕ್ಷ್ಮಾಣುಗಳಿಂದ ರಕ್ಷಿಸಲು ನಮ್ಮ ದೇಹ ಹೊಂದಿರುವ ಅದ್ಭುತ ನೈಸರ್ಗಿಕ ವ್ಯವಸ್ಥೆ.

ಹೌದು, ಕಣ್ಣೀರು ಕೇವಲ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಕಣ್ಣಿನ ಆರೋಗ್ಯ ಕಾಪಾಡುವುದರಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ಕಣ್ಣಿಗೆ ಧೂಳು ಬಿದ್ದಾಗ ಕಣ್ಣೀರು ಉತ್ಪತ್ತಿಯಾಗುವುದು ಹೇಗೆ? ಕಣ್ಣೀರಿನಲ್ಲಿ ಅಂಥದ್ದೇನಿದೆ? ಈ ಬಗ್ಗೆ ಒಂದಿಷ್ಟು ವಿಜ್ಞಾನ ತಿಳಿಯೋಣ.

ಕಣ್ಣಿಗೆ ಧೂಳು ಬಿದ್ದ ತಕ್ಷಣ ಏನಾಗುತ್ತೆ?

ಕಣ್ಣಿನ ಮೇಲ್ಮೈಗೆ ಧೂಳು, ಹೊಗೆ ಅಥವಾ ಬೇರೆ ಸಣ್ಣ ಕಣಗಳು ತಾಗಿದಾಗ ಅಲ್ಲಿರುವ ಸೂಕ್ಷ್ಮ ನರಗಳು ತಕ್ಷಣ ಪ್ರಚೋದನೆಗೊಳ್ಳುತ್ತವೆ. ಈ ನರಗಳು ಮೆದುಳಿಗೆ ಸಂದೇಶ ಕಳುಹಿಸುತ್ತವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಣ್ಣಿನ ಮೇಲ್ಭಾಗದಲ್ಲಿರುವ ಲ್ಯಾಕ್ರಿಮಲ್ ಗ್ರಂಥಿಗಳು ಹೆಚ್ಚು ಕಣ್ಣೀರನ್ನು ಉತ್ಪಾದಿಸುತ್ತವೆ.

ಹೀಗೆ ಉತ್ಪತ್ತಿಯಾಗುವ ಹೆಚ್ಚುವರಿ ಕಣ್ಣೀರು ಕಣ್ಣಿನ ಮೇಲ್ಮೈಯಲ್ಲಿ ಹರಿದು ಧೂಳು ಮತ್ತು ಇತರ ಕಣಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯನ್ನು ರಿಫ್ಲೆಕ್ಸ್ ಟಿಯರಿಂಗ್ ಎಂದು ಕರೆಯಲಾಗುತ್ತದೆ.

ಕಣ್ಣೀರು ಬರೀ ಉಪ್ಪು ನೀರಲ್ಲ

ಕಣ್ಣೀರು ನೋಡಲು ನೀರಿನಂತೆ ಕಂಡರೂ ಅದರಲ್ಲಿ ಹಲವು ರಕ್ಷಣಾತ್ಮಕ ಪ್ರೋಟೀನ್‌ಗಳು ಮತ್ತು ಕಿಣ್ವಗಳಿವೆ. ಇವು ಕಣ್ಣನ್ನು ಸೋಂಕು ಉಂಟುಮಾಡುವ ಸೂಕ್ಷ್ಮಾಣುಗಳಿಂದ ರಕ್ಷಿಸಲು ನೆರವಾಗುತ್ತವೆ.

  • ಲೈಸೋಜೈಮ್: ಕಣ್ಣೀರಿನಲ್ಲಿರುವ ಈ ಕಿಣ್ವ ಬ್ಯಾಕ್ಟೀರಿಯಾಗಳ ಜೀವಕೋಶದ ಗೋಡೆಯನ್ನು ಹಾನಿಗೊಳಿಸುವ ಮೂಲಕ ಅವುಗಳ ವಿರುದ್ಧ ರಕ್ಷಣೆ ನೀಡುತ್ತದೆ.

  • ಲ್ಯಾಕ್ಟೋಫೆರಿನ್: ಇದು ಕಬ್ಬಿಣಾಂಶವನ್ನು ಬಂಧಿಸುವ ಪ್ರೋಟೀನ್. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅಗತ್ಯವಾದ ಕಬ್ಬಿಣದ ಲಭ್ಯತೆಯನ್ನು ಕಡಿಮೆ ಮಾಡುವ ಮೂಲಕ ಅವುಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಣ್ಣೀರಿಗೂ ಇವೆ ಮೂರು ಪದರಗಳು

ಕಣ್ಣಿನ ಮೇಲ್ಮೈಯನ್ನು ಸದಾ ತೇವವಾಗಿಡಲು ಮತ್ತು ರಕ್ಷಿಸಲು ಕಣ್ಣೀರಿನ ಪದರ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಸಾಮಾನ್ಯವಾಗಿ ಮೂರು ಪದರಗಳಾಗಿ ವಿವರಿಸಲಾಗುತ್ತದೆ.

  • ಹೊರಗಿನ ಎಣ್ಣೆಯ ಪದರ: ಕಣ್ಣೀರಿನ ನೀರಿನ ಅಂಶ ಬೇಗನೆ ಆವಿಯಾಗದಂತೆ ತಡೆಯುತ್ತದೆ.

  • ಮಧ್ಯದ ನೀರಿನ ಪದರ: ಇದು ಕಣ್ಣಿಗೆ ಅಗತ್ಯವಾದ ತೇವಾಂಶ ಒದಗಿಸುತ್ತದೆ. ಲೈಸೋಜೈಮ್ ಮತ್ತು ಲ್ಯಾಕ್ಟೋಫೆರಿನ್‌ನಂತಹ ರಕ್ಷಣಾತ್ಮಕ ಅಂಶಗಳನ್ನೂ ಒಳಗೊಂಡಿರುತ್ತದೆ.

  • ಒಳಗಿನ ಲೋಳೆಯ ಪದರ: ಕಣ್ಣೀರಿನ ಪದರವು ಕಣ್ಣಿನ ಮೇಲ್ಮೈಯಲ್ಲಿ ಸಮಾನವಾಗಿ ಹರಡಲು ನೆರವಾಗುತ್ತದೆ.

ಕಣ್ಣೀರಿನ ವಿಧಗಳು

ಕಣ್ಣೀರಿನ ಉತ್ಪತ್ತಿಗೆ ಕಾರಣವಾಗುವ ಸಂದರ್ಭಗಳ ಆಧಾರದ ಮೇಲೆ ಇದನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ.

  • ಬೇಸಲ್ ಕಣ್ಣೀರು: ಕಣ್ಣುಗಳನ್ನು ಸದಾ ತೇವವಾಗಿಡಲು ಮತ್ತು ನಯವಾಗಿಡಲು ನಿರಂತರವಾಗಿ ಉತ್ಪತ್ತಿಯಾಗುವ ಕಣ್ಣೀರು.

  • ರಿಫ್ಲೆಕ್ಸ್ ಕಣ್ಣೀರು: ಧೂಳು, ಹೊಗೆ, ಗಾಳಿ ಅಥವಾ ಈರುಳ್ಳಿ ಕತ್ತರಿಸುವಾಗ ಕಣ್ಣಿಗೆ ಉಂಟಾಗುವ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಹಠಾತ್ತನೆ ಉತ್ಪತ್ತಿಯಾಗುವ ಕಣ್ಣೀರು.

  • ಭಾವನಾತ್ಮಕ ಕಣ್ಣೀರು: ಅತಿಯಾದ ದುಃಖ, ಸಂತೋಷ ಅಥವಾ ಭಾವನಾತ್ಮಕ ಒತ್ತಡದ ಸಂದರ್ಭಗಳಲ್ಲಿ ಹರಿಯುವ ಕಣ್ಣೀರು.

ಇದನ್ನೂ ಓದಿ: ಯಶ್ ಜತೆಗಿನ ಇಂಟಿಮೇಟ್ ಸೀನ್ಸ್‌: ಪತಿ ಸಿದ್ದಾರ್ಥ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ಮೌನ ಮುರಿದ ಟಾಕ್ಸಿಕ್ ಚೆಲುವೆ! | Kiara Toxic movie

ಒಟ್ಟಿನಲ್ಲಿ, ಕಣ್ಣೀರು ಕೇವಲ ಅಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಕಣ್ಣಿನ ತೇವಾಂಶ ಕಾಪಾಡುವುದು, ಧೂಳು ಮತ್ತು ಕಸವನ್ನು ಹೊರಹಾಕುವುದು ಹಾಗೂ ಸೂಕ್ಷ್ಮಾಣುಗಳ ವಿರುದ್ಧ ರಕ್ಷಣೆ ನೀಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತದೆ. ನಾವು ಗಮನಿಸದೆಯೇ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡುವಲ್ಲಿ ಕಣ್ಣೀರು ಪ್ರಮುಖ ಪಾತ್ರ ವಹಿಸುತ್ತದೆ.