ಅಪ್ಪಂದಿರಿಗೆ ಹೆಣ್ಣು ಮಕ್ಕಳೇ ಹೆಚ್ಚು ಮುದ್ದು ಯಾಕೆ? 
ನ್ಯೂಸ್

ಮಗಳಂದ್ರೆ ಅಪ್ಪನಿಗೆ ಅಷ್ಟೊಂದು ಪ್ರೀತಿ ಯಾಕೆ? ಇದರ ಹಿಂದಿನ ಕಾರಣಗಳೇನು? | Father Daughter Bond

Father Daughter Bond: ‘ಅಪ್ಪಾ ಐ ಲವ್ ಯು ಪಾ’ ಹಾಡು ಕೇಳಿರುತ್ತೀರಾ ಅಲ್ಲವೇ? ಈ ಹಾಡು ತಂದೆ-ಮಗಳ ನಡುವಿನ ಮಧುರ ಬಾಂಧವ್ಯವನ್ನು ನೆನಪಿಸುತ್ತದೆ. ಅಪ್ಪನ ಜತೆ ಮುಕ್ತವಾಗಿ ಮಾತಾಡೋದು, ಮುದ್ದು ಮಾಡಿಸಿಕೊಳ್ಳೋದು, ಸಣ್ಣಪುಟ್ಟ ವಿಷಯಕ್ಕೂ ಅಪ್ಪನನ್ನೇ ಹುಡುಕೋದು ಮಗಳಿಗೆ ಸಾಮಾನ್ಯ. ಹಾಗಾದ್ರೆ ಅಪ್ಪಂದಿರು ಹೆಣ್ಣು ಮಕ್ಕಳ ಮೇಲೆ ಸ್ವಲ್ಪ ಹೆಚ್ಚಾಗಿ ಮಮತೆ ತೋರಿಸೋದು ಯಾಕೆ? ಇದರ ಹಿಂದೆ ಇರೋ ಭಾವನಾತ್ಮಕ ಹಾಗೂ ಮನೋವೈಜ್ಞಾನಿಕ ಕಾರಣಗಳೇನು?

ಹೆಣ್ಣು ಮಕ್ಕಳು ತಮ್ಮ ಭಾವನೆಗಳನ್ನು ಅಪ್ಪನ ಜತೆ ಸುಲಭವಾಗಿ ಹಂಚಿಕೊಳ್ಳುತ್ತಾರೆ. ಪ್ರೀತಿ, ಬೇಸರ, ಖುಷಿ ಸೇರಿದಂತೆ ಮನಸ್ಸಿನಲ್ಲಿರೋ ವಿಚಾರಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದರಿಂದ ತಂದೆ-ಮಗಳ ನಡುವೆ ಆತ್ಮೀಯತೆ ಹೆಚ್ಚಾಗಬಹುದು. ಈ ಭಾವನಾತ್ಮಕ ಒಡನಾಟ ಅಪ್ಪನಲ್ಲೂ ಮಗಳ ಬಗ್ಗೆ ಹೆಚ್ಚಿನ ಮಮತೆ ಮೂಡಿಸಬಹುದು.

ಮದುವೆಯಾಗಿ ದೂರ ಹೋಗ್ತಾಳೆ ಅನ್ನೋ ಭಾವನೆ

ಮಗಳು ದೊಡ್ಡವಳಾಗಿ ಮದುವೆಯ ನಂತರ ಬೇರೆ ಮನೆಗೆ ಹೋಗಬಹುದು ಅನ್ನೋ ಭಾವನೆ ಕೆಲವು ಅಪ್ಪಂದಿರಲ್ಲಿ ಇರುತ್ತೆ. ಮಗಳು ತಮ್ಮ ಜತೆ ಇರೋ ಸಮಯದಲ್ಲಿ ಅವಳಿಗೆ ಯಾವುದೇ ಕೊರತೆಯಾಗಬಾರದು, ಖುಷಿಯಾಗಿರಬೇಕು ಅನ್ನೋ ಆಸೆ ಅವರ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಬಹುದು.

ಮಗಳ ಸುರಕ್ಷತೆ ಬಗ್ಗೆ ಅಪ್ಪನಿಗೆ ಹೆಚ್ಚಿನ ಕಾಳಜಿ

ಸಮಾಜದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ, ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ತಂದೆಯರಿಗೆ ಹೆಚ್ಚಿನ ಕಾಳಜಿ ಇರಬಹುದು. ಮಗಳ ಮೇಲೆ ತೋರುವ ಪ್ರೀತಿ, ಮುದ್ದು, ರಕ್ಷಣಾ ಮನೋಭಾವದ ಹಿಂದೆ ಈ ಕಾಳಜಿಯೂ ಪ್ರಮುಖ ಕಾರಣವಾಗಿರುತ್ತದೆ.

ಮಗನಿಗೆ ಶಿಸ್ತು, ಮಗಳಿಗೆ ಮಮತೆನಾ?

ಕೆಲವು ಕುಟುಂಬಗಳಲ್ಲಿ ಗಂಡು ಮಕ್ಕಳನ್ನು ಭವಿಷ್ಯದ ಜವಾಬ್ದಾರಿ ಹೊರುವವರಂತೆ ಬೆಳೆಸಲಾಗುತ್ತದೆ. ಹೀಗಾಗಿ ಮಗನಿಗೆ ಶಿಸ್ತು, ಸಾಧನೆ, ಜವಾಬ್ದಾರಿ ಬಗ್ಗೆ ಹೆಚ್ಚು ಹೇಳುವ ಅಪ್ಪಂದಿರು, ಮಗಳ ಜತೆ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಹೆಚ್ಚು ಮುಕ್ತವಾಗಿರಬಹುದು. ಆದರೆ ಇದು ಎಲ್ಲ ತಂದೆಯರಲ್ಲೂ ಒಂದೇ ರೀತಿ ಇರಲ್ಲ.

ಮನೋವಿಜ್ಞಾನ ಏನು ಹೇಳುತ್ತೆ?

ಕೆಲವು ಅಧ್ಯಯನಗಳು ತಂದೆಯರು ಹೆಣ್ಣು ಮಕ್ಕಳ ಭಾವನೆಗಳಿಗೆ ಹೆಚ್ಚು ಸೂಕ್ಷ್ಮವಾಗಿ ಸ್ಪಂದಿಸುವ ಸಾಧ್ಯತೆಯನ್ನು ಸೂಚಿಸಿವೆ. ಮಗಳ ನಗು, ಅಳು ಅಥವಾ ಬೇಸರ ಕಂಡಾಗ ತಂದೆಯ ಭಾವನಾತ್ಮಕ ಪ್ರತಿಕ್ರಿಯೆ ಹೆಚ್ಚಾಗಬಹುದು. ಮಕ್ಕಳ ಜತೆ ಮಾತನಾಡುವ ರೀತಿ, ಪ್ರೀತಿ ತೋರಿಸುವ ವಿಧಾನ ಹಾಗೂ ತಬ್ಬಿಕೊಳ್ಳುವುದು, ಮುದ್ದು ಮಾಡುವಂತಹ ವಾತ್ಸಲ್ಯವೂ ಸಂಬಂಧವನ್ನು ಗಟ್ಟಿಗೊಳಿಸಬಹುದು.

ಸಾಮಾನ್ಯವಾಗಿ ತಂದೆ-ಮಗನ ಸಂಬಂಧದಲ್ಲಿ ಶಿಸ್ತು, ಸಾಧನೆ ಅಥವಾ ಅಭಿಪ್ರಾಯಗಳ ವಿಚಾರದಲ್ಲಿ ಭಿನ್ನತೆ ಕಾಣಿಸಿಕೊಳ್ಳಬಹುದು. ತಂದೆ-ಮಗಳ ಸಂಬಂಧದಲ್ಲಿ ಭಾವನೆಗಳನ್ನು ಹಂಚಿಕೊಳ್ಳುವಿಕೆ ಮತ್ತು ಆತ್ಮೀಯತೆ ಹೆಚ್ಚಿರಬಹುದು ಎಂಬ ಅಭಿಪ್ರಾಯವೂ ಇದೆ. ಆದರೂ ಇವೆಲ್ಲವೂ ಕುಟುಂಬದಿಂದ ಕುಟುಂಬಕ್ಕೆ ಬದಲಾಗುತ್ತವೆ.

ಮಗನ ಮೇಲೂ ಅಷ್ಟೇ ಪ್ರೀತಿ, ಆದ್ರೆ ಬೇರೆ ರೀತಿ!

ಅಪ್ಪಂದಿರಿಗೆ ಗಂಡು ಮಕ್ಕಳ ಮೇಲೂ ಅಷ್ಟೇ ಪ್ರೀತಿ ಇರುತ್ತೆ. ಆದರೆ ಆ ಪ್ರೀತಿಯನ್ನು ತೋರಿಸುವ ರೀತಿ ಮಾತ್ರ ಬೇರೆ ಆಗಿರಬಹುದು. ಮಗನಿಗೆ ಜವಾಬ್ದಾರಿ ಹೇಳಿಕೊಡುವುದು, ಬೆನ್ನಿಗೆ ನಿಲ್ಲುವುದು, ಕಷ್ಟದ ಸಮಯದಲ್ಲಿ ಧೈರ್ಯ ತುಂಬುವುದು ಕೂಡ ಪ್ರೀತಿಯ ಮತ್ತೊಂದು ರೂಪವೇ.

ಇದನ್ನೂ ಓದಿ: ಕೆಲಸ ಬಿಟ್ಟು ಹೋಗುವ ವಿಚಾರಕ್ಕೆ ಗಲಾಟೆ; ಕಾರ್ಮಿಕರ ಮೇಲೆ ಹಲ್ಲೆ, ಗನ್ ತೋರಿಸಿ ಧಮ್ಕಿ? | Coffee Estate Assault

ಒಟ್ಟಿನಲ್ಲಿ, ತಂದೆ-ಮಗಳ ಬಾಂಧವ್ಯಕ್ಕೆ ಭಾವನಾತ್ಮಕ ಆತ್ಮೀಯತೆ ಪ್ರಮುಖ ಕಾರಣವಾಗಿರಬಹುದು. ಆದರೆ ಪ್ರೀತಿ ಅನ್ನೋದು ಲಿಂಗದ ಮೇಲೆ ನಿರ್ಧಾರವಾಗುವುದಿಲ್ಲ; ಪ್ರತಿಯೊಬ್ಬ ತಂದೆಯೂ ತಮ್ಮ ಮಕ್ಕಳನ್ನು ಪ್ರೀತಿಸುವ ರೀತಿ ವಿಭಿನ್ನವಾಗಿರುತ್ತದೆ.