ಬೆಂಗಳೂರು: ಲೋಕಸಭೆ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಷದ ಕಾರ್ಯಕರ್ತರಿಗೆ ಮಹತ್ವದ ಸಂದೇಶ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯ ಅಭೂತಪೂರ್ವ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸಿ ಅಭಿನಂದಿಸಿದ ಅವರು ವಿಧಾನಸಭಾ ಚುನಾವಣೆ ಬಳಿಕ ನಮ್ಮ ಕಾರ್ಯಕರ್ತರು ರಿಲ್ಯಾಕ್ಸ್ ಆಗಬಾರದು ಎಂದು ಕರೆ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ಹೈಕಮಾಂಡ್‌ಗೆ ಭರವಸೆ ನೀಡಿದ್ದೀನಿ. ಇದಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ. ಇದಕ್ಕಾಗಿ ಕಾರ್ಯಕರ್ತರ ಶ್ರಮ, ಸಹಕಾರ ಅಗತ್ಯವೆಂದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಡಿ ದೇಶದ ಜನರ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭರವಸೆಯನ್ನು ಹೆಚ್ಚಿಸಿ ಸಂಚಲನ ಮೂಡಿಸಿದೆ, ಲೋಕಸಭೆಯಲ್ಲೂ ಹೆಚ್ಚಿನ ಸ್ಥಾನ ಪಡೆಯಬೇಕೆಂದು ಹೇಳಿದರು.
ಒಂದು ಆರ್‌ಎಸ್ ಹಿಡನ್ ಅಜೆಂಡಾ ಜಾರಿಗೊಳಿಸುತ್ತಾ ಮತ್ತೊಂದು ಕಡೆ ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ, ದುರಾಡಳಿತದಿಂದ ನಾಡಿನ, ದೇಶದ ಜನತೆಯನ್ನು ವಿಪರೀತ ಸಂಕಷ್ಟಕ್ಕೆ ಸಿಲುಕಿಸಿದ್ದರು. ನಾಡಿನ ಜನ ಈ ಎಲ್ಲಾ ದುಷ್ಟಾಚಾರವನ್ನು ಸಮರ್ಥವಾಗಿ ಧಿಕ್ಕರಿಸಿ ಸೋಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನಮಗೆ ಶೇ.42.8 ಮತ ಬಿದ್ದಿದೆ. ಇದು ಐತಿಹಾಸಿಕ. ಕರ್ನಾಟಕದ ಜನತೆ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಬಹಳ ದೊಡ್ಡ ಹೆಜ್ಜೆ ಇಟ್ಟಿದ್ದಾರೆ ಎಂದ ಅವರು ನಾಡಿನ ಜನತೆ ಬಿಜೆಪಿಯ ಅಭಿವೃದ್ಧಿಹೀನ, ಬೆಲೆ ಏರಿಕೆ, ನಿರುದ್ಯೋಗ, ದುರಾಡಳಿತ ಮತ್ತು ಜನರನ್ನು ದ್ವೇಷದ ಆಧಾರದಲ್ಲಿ ವಿಭಜಿಸಿ ದರ್ಬಾರ್ ನಡೆಸುವ ಅನಾಹುತಕಾರಿ ಸಿದ್ಧಾಂತ ಮತ್ತು ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.