ನ್ಯೂಸ್

ಬಿಜೆಪಿಗೆ 400 ಸ್ಥಾನ ಸ್ಥಾನ ಬಂದ್ರೆ ಮಥುರಾ, ಕಾಶಿಯಲ್ಲಿ ಭವ್ಯ ಮಂದಿರ ನಿರ್ಮಾಣ: ಹಿಮಂತ್‌ ಬಿಸ್ವಾ ಶರ್ಮಾ!

ನವದೆಹಲಿ: ಬಿಜೆಪಿಗೆ 300 ಸ್ಥಾನಗಳನ್ನು ಪಡೆದಾಗ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದೆ. ಅದರಂತೆ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400 ಸ್ಥಾನಗಳನ್ನು ಪಡೆದರೆ ಬಳಿಕ ಮಥುರಾದ ಕೃಷ್ಣ ಜನ್ಮಭೂಮಿ ಸ್ಥಳದಲ್ಲಿ ಮತ್ತು ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುವುದು. ಅದಕ್ಕಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಸ್ಥಾನಗಳು ಬೇಕು ಎಂದು ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಹೇಳಿದ್ದಾರೆ.

ಚುನಾವಣಾ ಭಾಷಣವೊಂದರಲ್ಲಿ ಮಾತನಾಡಿದ ಅವರು, 400 ಕ್ಕೂ ಅಧಿಕ ಸ್ಥಾನಗಳು ಯಾಕೆ ಬೇಕು ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರ ನೀಡುವುದು ಸರಿ ಎಂದು ನನಗೂ ಅನಿಸಿತು. ಅದಕ್ಕಾಗಿ ಹೇಳುತ್ತಿದ್ದೇನೆ ಈ ಹಿಂದೆ ದೇಶದಲ್ಲಿ ಮೊಘಲರು ಮಾಡಿರುವುದನ್ನು ಸರಿಪಡಿಸಬೇಕಿದೆ, ಸಾಕಷ್ಟು ಕೆಲಸ ಬಾಕಿ ಇದೆ ಎಂದರು.

ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರವನ್ನು (ಪಿಒಜೆಕೆ) ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಸೇರಿಸಲಾಗುವುದು ಎಂದು ಹೇಳಿದ ಹಿಮಂತ್​ ಶರ್ಮ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಆಡಳಿತದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ. “ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಒಂದು ಕಾಶ್ಮೀರ ಭಾರತದಲ್ಲಿ ಮತ್ತು ಇನ್ನೊಂದು ಪಾಕಿಸ್ತಾನದಲ್ಲಿದೆ ಎಂದು ನಮಗೆ ಹೇಳಲಾಯಿತು ಎಂದರು.

ಪಾಕಿಸ್ತಾನ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂದು ನಮ್ಮ ಸಂಸತ್ತಿನಲ್ಲಿ ಎಂದಿಗೂ ಚರ್ಚಿಸಲಾಗಿಲ್ಲ. ಅದು ನಿಜವಾಗಿ ನಮ್ಮದು. ಇದೀಗ, ಪಿಒಕೆಯಲ್ಲಿ ಪ್ರತಿದಿನ ಆಂದೋಲನ ನಡೆಯುತ್ತಿದೆ. ಪಿಒಕೆಯಲ್ಲಿನ ಜನರು ಪ್ರತಿದಿನ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಪಾಕಿಸ್ತಾನದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮೋದಿ ಅವರ 400 ಸ್ಥಾನಗಳನ್ನು ಪಡೆದರೆ ಪಿಒಕೆ ಕೂಡ ಭಾರತದ ಪಾಲಾಗಲಿದೆ. ಇದು ಈಗಾಗಲೇ ಪ್ರಾರಂಭವಾಗಿದೆ ಎಂದು ಹಿಮಂತ್ ಬಿಸ್ವಾ ಶರ್ಮ ಹೇಳಿದರು.

ಬಿಜೆಪಿ ಸರ್ಕಾರವು ಮೀಸಲಾತಿಗೆ ಹೆಚ್ಚಿನ ಬಲವನ್ನು ನೀಡಲು ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರೇ ಒಬಿಸಿ ವರ್ಗದಿಂದ ಬಂದವರು. ಬಿಜೆಪಿ 10 ವರ್ಷ ಅಧಿಕಾರದಲ್ಲಿದೆ. ನಮ್ಮ ಸರ್ಕಾರ ಮೀಸಲಾತಿಗೆ ಹೆಚ್ಚಿನ ಬಲ ನೀಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್​ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಕೊನೆಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಬಯಸಿದೆ ಎಂದು ಶರ್ಮಾ ಅವರು ಹೇಳಿದರು.

ಪಿಒಕೆ ಭಾರತದ್ದು, ಯಾವಾಗಲೂ ಭಾರತದ್ದೇ ಆಗಿರುತ್ತದೆ : ಇದಕ್ಕೂ ಮೊದಲು, ಪಿಒಜೆಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, " ಪಿಒಕೆ ಭಾರತದ್ದು, ಯಾವಾಗಲೂ ಭಾರತದ್ದೇ ಆಗಿರುತ್ತದೆ ಎಂದು ಹೇಳಿದರು. ಪಿಒಕೆಯಲ್ಲಿರುವ ಜನರು ತಮ್ಮ ಪರಿಸ್ಥಿತಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಜನರೊಂದಿಗೆ ಹೋಲಿಕೆ ಮಾಡಿಕೊಳ್ಳಲೇಬೇಕು. ಜಮ್ಮು ಮತ್ತು ಕಾಶ್ಮೀರ ಪ್ರಗತಿ ಹೊಂದುತ್ತಿರುವುದನ್ನು ಅವರು ನೋಡಬೇಕು ಎಂದು ತಿಳಿಸಿದರು.