ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಲವರು ಬಹಿರಂಗವಾಗಿ ಹೇಳಿಕೆ ನೀಡಿ, ಅಪಮಾನಿಸುತ್ತಿದ್ದರೂ ತಟಸ್ಥರು, ಹಿರಿಯರು ಬಾಯ್ಮುಚ್ಚಿಕೊಂಡಿರುವುದೇಕೆ ? ತಡೆಯಲು ಪ್ರಯತ್ನಿಸುತ್ತಿಲ್ಲವೇಕೆ ? ಯಡಿಯೂರಪ್ಪ ಮಗನಾಗಿ ಅಲ್ಲ, ಪಕ್ಷದ ರಾಜ್ಯಾಧ್ಯಕ್ಷನಾಗಿ ಕೇಳುತ್ತಿರುವೆ ಎಂದು ಬಿ.ವೈ.ವಿಜಯೇಂದ್ರ ತಮ್ಮಲ್ಲೇ ಹಿಡಿದಿಟ್ಟುಕೊಂಡಿದ್ದ ಅಸಹನೆ ಹೊರ ಹಾಕಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪಕ್ಷದ ಹಿತ, ಸಂಘಟನೆಗೆ ಧಕ್ಕೆ ತರುವ ರೀತಿಯಲ್ಲಿ ಕೆಲವು ನಾಯಕರ ಮಾತು, ವರ್ತನೆಯಿದೆ. ಆದರೆ ರಾಜ್ಯದಲ್ಲಿ ಪಕ್ಷದ ಸಂಘಟನೆ ಬಲಪಡಿಸಿ ಅಧಿಕಾರಕ್ಕೆ ತರಲು ಯಡಿಯೂರಪ್ಪ ಹಗಲಿರುಳು ಶ್ರಮಿಸಿದ್ದಾರೆ. ಜನಪರ ಧ್ವನಿಯಾಗಿ ನಿರಂತರ ಹೋರಾಟ ಮಾಡಿದ್ದಾರೆ.
ಅನೇಕರು ರಾಜಕೀಯವಾಗಿ ಬೆಳೆಯಲು, ಅಧಿಕಾರ ಅನುಭವಿಸಲು ಕಾರಣರಾಗಿದ್ದಾರೆ. ಆದರೂ ಬಿಎಸ್ ವೈ ವಿರುದ್ಧ ಮನಬಂದಂತೆ ಮಾತನಾಡುತ್ತಿರುವುದನ್ನು ಹಿರಿಯರು, ತಟಸ್ಥರು ತಡೆಯಲು ಪ್ರಯತ್ನಿಸುತ್ತಿಲ್ಲ. ಈ ಕೆಲಸ ಮಾಡುವುದಕ್ಕೂ ವರಿಷ್ಢರು ಹೇಳಬೇಕೆ ? ಬರಬೇಕೆ ? ಕಾರ್ಯಕರ್ತರಿಗೆ ಅಗುತ್ತಿರುವ ನೋವಿಗೆ ಸ್ಪಂದಿಸುವ ಜವಾಬ್ದಾರಿ ನಿಭಾಯಿಸುವ ನಿರೀಕ್ಷೆಯಿದೆ ಎಂದ ವಿಜಯೇಂದ್ರ, ಪರೋಕ್ಷವಾಗಿ ಹಿರಿಯರಿಗೆ ಟಾಸ್ಕ್ ನೀಡಿದರು.
ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ಹಿರಿಯರಿಗೆ ಗೌರವ ನೀಡುವುದಿಲ್ಲ. ಹೊಂದಾಣಿಕೆ ರಾಜಕಾರಣ ಎಂದು ಕೆಲವರು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ವಸ್ತುಸ್ಥಿತಿ ಏನೆಂಬುದು ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವೆ. ಕಳೆದ ಒಂದು ವರ್ಷದಿಂದ ನಾನು ಮಾಡುತ್ತಿರುವ ಪ್ರಯತ್ನ, ಸರ್ಕಾರದ ವಿರುದ್ಧ ಹೋರಾಟ, ಸಂಘಟನೆ ಬಲವರ್ಧನೆ ವಿಚಾರದಲ್ಲಿ ಕಾರ್ಯಕರ್ತರಿಗೆ ತೃಪ್ತಿಯಿದೆ. ಪ್ರವಾಸ ಕೈಗೊಂಡ ಜಿಲ್ಲೆಗಳಲ್ಲಿ ಪ್ರೀತಿ, ವಿಶ್ವಾಸದಿಂದ ಸ್ವಾಗತಿಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ನನ್ನನ್ನು ಸ್ವೀಕರಿಸುತ್ತಿದ್ದಾರೆ.
ಈಗ ಬಹಿರಂಗವಾಗಿ ಟೀಕೆ-ಟಿಪ್ಪಣೆ, ಆರೋಪ ಮಾಡುತ್ತಿರುವವರಿಗೆ ಪಕ್ಷದ ನಾಲ್ಕು ಗೋಡೆಯ ಮಧ್ಯೆ ಚರ್ಚಿಸುವ ಅವಕಾಶ ಬಳಸಿಕೊಳ್ಳಬಹುದಿತ್ತು. ಇಲ್ಲವೇ ವರಿಷ್ಠರಿಗೆ ಹೇಳಬಹುದಿತ್ತು. ಆದರೆ ಬಹಿರಂಗವಾಗಿ ಹೇಳಿಕೆ ನೀಡಿ ಗೊಂದಲ ಹುಟ್ಟಿ ಹಾಕಿದ್ದಾರೆ. ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತಾ ಹೋದರೆ ಅವರಿಗೂ ನನಗೂ ವ್ಯತ್ಯಾಸವಿರುವುದಿಲ್ಲ. ಚುನಾವಣೆ ಮುಗಿದ ಬಳಿಕ ಎಲ್ಲದಕ್ಕೂ ಎಲ್ಲರಿಗೂ ಉತ್ತರ ನೀಡುವೆ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಚುನಾವಣೆಗೆ ದಿನಗಳು ಹತ್ತಿರವಾಗಿದ್ದು, ಫೆ.20ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ಸೂಚನೆಗಳು ಸಿಕ್ಕಿವೆ. ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ವೇಳೆ ಮುಖಂಡರಿಗಿಂತ ಕಾರ್ಯಕರ್ತರಿಗೆ ವರಿಷ್ಠರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.