ಕೆನಡಾ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನ್ ಪರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ವಿಚಾರದಲ್ಲಿ ಭಾರತವನ್ನು ಆರೋಪಿಸಿದಾಗಿನಿಂದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರಿಂದ ವಿರೋಧ ಎದುರಿಸುತ್ತಿದ್ದಾರೆ. ಟ್ರುಡೊ ಆರೋಪಕ್ಕೆ ಭಾರತ ಸೆಡ್ಡು ಹೊಡೆದಿದ್ದಲ್ಲದೆ ಇದೀಗ ಕೆನಡಾ ನಾಯಕರೂ ಅವರನ್ನು ಮೂಲೆಗುಂಪು ಮಾಡಲು ಆರಂಭಿಸಿದ್ದಾರೆ.
ಟ್ರುಡೊ ಪ್ರಶ್ನೆ ಮಾಡಿದ ಬಲೋಚ್ ಮಾನವ ಹಕ್ಕುಗಳ ಮಂಡಳಿ
ನಿಜ್ಜರ್ ಹತ್ಯೆಯ ಬಗ್ಗೆ ಭಾರತವನ್ನು (ಕೆನಡಾ ಇಂಡಿಯಾ ರೋ) ಪ್ರಶ್ನಿಸಿದ ಟ್ರೂಡೊಗೆ ಈಗ ಪ್ರಶ್ನೆಗಳು ಕೇಳಿಬರುತ್ತಿವೆ. ಕೆನಡಾದ ಬಲೋಚ್ ಹ್ಯೂಮನ್ ರೈಟ್ಸ್ ಕೌನ್ಸಿಲ್ (ಬಿಎಚ್‌ಆರ್‌ಸಿ) ಕೆನಡಾದ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ನಿಜ್ಜರ್ ಹತ್ಯೆಯ ಬಗ್ಗೆ ನೋವು ವ್ಯಕ್ತಪಡಿಸುತ್ತಿದ್ದೀರಿ...ಆದರೆ ಕೆನಡಾದಲ್ಲಿ ನೆಲೆಸಿದ್ದ ಬಲೋಚ್ ಮಾನವ ಹಕ್ಕುಗಳ ಕಾರ್ಯಕರ್ತೆ ಕರಿಮಾ ಬಲೋಚ್ ಅವರ ಹತ್ಯೆಯ ಬಗ್ಗೆ ಇಲ್ಲಿಯವರೆಗೆ ಒಂದು ಮಾತನ್ನೂ ಹೇಳಿಲ್ಲ ಎಂದು ದೂರಿದೆ. ಸದ್ಯ ಕೌನ್ಸಿಲ್ ಕರಿಮಾ ಅವರ ವಿಚಾರದಲ್ಲಿ ಟ್ರುಡೊ ಮೌನವಹಿಸಿದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಕರೀಮಾ ಅವರ ಅಪಹರಣ ಮತ್ತು ಆಪಾದಿತ ಕೊಲೆಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದ ಬಗ್ಗೆಯೂ ಮಾತನಾಡಿದೆ.
ಕರೀಮಾ ಬಲೋಚ್ ಯಾರು?
ಕರೀಮಾ ಬಲೋಚ್ ಹಲವು ಬಾರಿ ಪಾಕಿಸ್ತಾನ ಸರ್ಕಾರವನ್ನು ಬಯಲಿಗೆಳೆಯುವ ಕೆಲಸ ಮಾಡಿದರು. ಕರೀಮಾ ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಬಯಸಿದ್ದರು ಮತ್ತು ಬಲೂಚ್ ಚಳವಳಿಯ ಪ್ರಮುಖ ಮುಖವಾಗಿದ್ದರು. ಕರೀಮಾ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ವಿರುದ್ಧವಿದ್ದರು. ಇದರಿಂದಾಗಿ ಅವರು ಅದಕ್ಕೆ ಗುರಿಯಾಗಿದ್ದರು. ಕರೀಮಾ ಐಎಸ್‌ಐನಿಂದ ತಪ್ಪಿಸಿಕೊಂಡು ಕೆನಡಾಕ್ಕೆ ಬಂದಿದ್ದರು. ಆದರೆ ಇಲ್ಲಿ ಆಕೆ ಕೊಲ್ಲಲ್ಪಟ್ಟರು.
ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ ಕರೀಮಾ
ಕರೀಮಾಗೆ ಐಎಸ್‌ಐನಿಂದ ಬೆದರಿಕೆಗಳು ಬರುತ್ತಿದ್ದವು. ಏತನ್ಮಧ್ಯೆ, ಅವರು 2020 ರಲ್ಲಿ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಕುಟುಂಬಸ್ಥರು ಹೇಳಿದರೂ ಕೆನಡಾ ಸರ್ಕಾರ ಕಿವಿಗೊಡದ ಕಾರಣ ಪೊಲೀಸರು ಆತ್ಮಹತ್ಯೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ.
ಟ್ರುಡೊಗೆ BHRC ಪತ್ರ
ಕರೀಮಾ ಪ್ರಕರಣದಲ್ಲಿ ಪಾಕಿಸ್ತಾನದ ಏಜೆನ್ಸಿಗಳು ಭಾಗಿಯಾಗಿರುವುದು ಸ್ಪಷ್ಟವಾದಾಗ ಏಕೆ ಕ್ರಮ ಕೈಗೊಂಡಿಲ್ಲ ಎಂದು ಬಿಎಚ್‌ಆರ್‌ಸಿ ಈಗ ಟ್ರುಡೊಗೆ ಪತ್ರ ಬರೆದಿದೆ. ನಿಜ್ಜರ್ ಪ್ರಕರಣದಲ್ಲಿ ನೇರ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ. ಆದರೇಕೆ ಕರಿಮಾ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಎಂದು ಬಿಎಚ್‌ಆರ್‌ಸಿ ಕೇಳಿದೆ.