ಬೆಂಗಳೂರು: ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲಿ ನೈಸ್ ಆಸ್ತಿ ಇಲ್ಲ. ಒಂದು ವೇಳೆ ಇದ್ದರೆ ನಮ್ಮ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ತಮ್ಮ ವಿರುದ್ಧ ಸಂಸದ ಡಿ.ಕೆ.ಸುರೇಶ್ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡಿದರು.
ನೈಸ್ ಯೋಜನೆಗಳ ಅಕ್ರಮಗಳಿಗೆ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನೇರ ಕಾರಣ. ಈ ವಿಷಯ ಇಡೀ ರಾಜ್ಯಕ್ಕೆ ಗೊತ್ತಿದೆ. ನೈಸ್ ಅಕ್ಕಪಕ್ಕ ಜಮೀನುಗಳನ್ನು ಯಾರು ಕೊಳ್ಳೆ ಹೊಡೆದಿದ್ದಾರೆ ಎನ್ನುವುದೂ ತಿಳಿದಿದೆ ಎಂದು ನೇರ ಆರೋಪ ಮಾಡಿದರು.
ರಸ್ತೆ ಮಾಡಲು ನೈಸ್ ಯೋಜನೆಗೆ ಅಂದಿನ ಮುಖ್ಯಮಂತ್ರಿ ದೇವೇಗೌಡರು ಸಹಿ ಹಾಕಿದ್ದರು. ಅಲ್ಲಿನ ಭೂಮಿ ಲಪಟಾಯಿಸುವುದಕ್ಕೆ ಅಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು. ನೈಸ್ ಭೂಮಿ ವಿಚಾರದಲ್ಲಿ ನಮ್ಮ ಕುಟುಂಬದ ವಿರುದ್ಧ ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ, ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದು ಕಿಡಿಕಾರಿದರು.
ಮೂಲ ಒಪ್ಪಂದ ತಿರುಚಿ ಚೌಕಟ್ಟಿನ ಒಪ್ಪಂದಕ್ಕೆ (ಫ್ರೇಮ್ ವರ್ಕ್ ಅಗ್ರಿಮೆಂಟ್) ಸಹಿ ಯಾರು ಹಾಕಿದ್ದು ಯಾರೆಂದು ಗೊತ್ತಿದೆಯಾ ಅವನಿಗೆ? ಆವತ್ತಿನ ನಗರಾಭಿವೃದ್ಧಿ ಸಚಿವರಾಗಿ ಇದ್ದಿದ್ದು ಯಾರು? ಇವನ ಅಣ್ಣನೇ ಅಲ್ವಾ? ಆತನೇ ತಾನೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದು. ಲೂಟಿ ಹೊಡೆದ ಭೂಮಿಯನ್ನು ಯಾರ ಹೆಸರಿಗೆ ಮಾಡಲು ಹೊರಟಿದ್ದಾರೆ ಅವರು? 2,000 ಎಕರೆ ಭೂಮಿಯನ್ನು ಯಾರ ಹೆಸರಿಗೆ ಮಾಡಿಕೊಳ್ಳೊಕೆ ಹೊರಟಿದ್ದಾರೆ? ಅವರ ಕುಟುಂಬವೇ ನುಂಗಲು ಹೊರಟಿದೆ. ಇಂಥವರು ನಮ್ಮ ಕುಟುಂಬದ ಬಗ್ಗೆ ಮತಾಡ್ತಾರೆ ಎಂದು ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.