ಬೆಂಗಳೂರು: ನೈಸ್ ರಸ್ತೆ ಯೋಜನೆಯ ಅವ್ಯವಹಾರಗಳ ದಾಖಲೆಗಳನ್ನು ಬಿಡುಗಡೆ ಮಾಡದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಡೆದವರು ಯಾರು ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಏನು ಬೇಕಾದರೂ ಬಿಡುಗಡೆ ಮಾಡಲು ಅವರು ಸ್ವತಂತ್ರರು. ನನ್ನ ಬಳಿ ಯಾವುದೇ ದಾಖಲೆಗಳಿಲ್ಲ, ನನಗೆ ಮಾಡಲು ಬೇರೆ ಕೆಲಸಗಳಿವೆ ಎಂದರು.
ಯಾರ‌್ಯಾರು ಏನೇನು ಬಿಚ್ಚಿಡಬೇಕೆಂದಿದ್ದಾರೆ ಬಿಚ್ಚಲಿ, ಬಿಡುಗಡೆ ಮಾಡುವವರು ಮಾಡಲಿ. ನಾನು ಎಷ್ಟು ಹೆದರಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿಯವರಿಗೆ ಚೆನ್ನಾಗಿ ಗೊತ್ತಿದೆ. ಆ ಬಗ್ಗೆ ಹೆಚ್ಚೇನೂ ಹೇಳುವುದಕ್ಕೆ ಬಯಸುವುದಿಲ್ಲ ಎಂದು ಹೇಳಿದರು.
ನೈಸ್ ಯೋಜನೆಯಡಿ ಹಗರಣಗಳಾಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡುವ ಜತೆಗೆ ಯಾವುದೇ ತನಿಖೆಗೆ ಬೇಕಾದರೂ ಒಪ್ಪಿಸಲು ಅವರಿಗೆ ಅವಕಾಶವಿದೆ. ಅಧಿಕಾರದಲ್ಲಿದ್ದಾಗ ಈ ಬಗ್ಗೆ ಗಮನಿಸಲು ಅವಕಾಶವಿತ್ತಲ್ಲ ಎಂದು ಕುಟುಕಿದರು.
ಕುಮಾರಸ್ವಾಮಿಯವರು ಏನಾದರೊಂದು ಹೇಳುತ್ತಿರುತ್ತಾರೆ. ಅವರು ಹೇಳಿಕೆಗೆ ನಾನೇಕೆ ಅಡ್ಡಿಪಡಿಸಲಿ, ಉತ್ತರ ನೀಡಲಿ. ಸದಾ ಸುದ್ದಿಯಲ್ಲಿ ಇರಲು ಬಯಸುವವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ಡಿ.ಕೆ.ಶಿವಕುಮಾರ್ ಕಾಲೆಳೆದರು.