ಪಾರಿವಾಳಗಳು ಸಾವಿರಾರು ಕಿ.ಮೀ. ದೂರದಿಂದ ಮನೆಗೆ ಮರಳುವುದು ಹೇಗೆ?  
ನ್ಯೂಸ್

Homing Instinct: ಪಾರಿವಾಳಗಳಿಗೆ ದಾರಿ ತೋರಿಸೋರು ಯಾರು? ಸಾವಿರಾರು ಕಿ.ಮೀ. ದೂರ ಹೋದ್ರೂ ಮನೆಗೆ ಬರೋದು ಹೇಗೆ?

ಪಾರಿವಾಳಗಳು ದೂರದ ಊರುಗಳಿಂದಲೂ ತಮ್ಮ ಗೂಡಿಗೆ ವಾಪಸ್ ಬರೋದು ಹೇಗೆ? ಸೂರ್ಯನ ಸ್ಥಾನ, ಭೂಮಿಯ ಕಾಂತೀಯ ಕ್ಷೇತ್ರ, ವಾಸನೆ ಮತ್ತು ನೆನಪಿನ ಶಕ್ತಿ ಅವುಗಳಿಗೆ ದಾರಿ ತೋರಿಸೋದು ಹೇಗೆ ಅನ್ನೋದನ್ನ ತಿಳಿಯೋಣ.

Homing Instinct: ಇವತ್ತಿನ ಹಾಗೆ ಮೊಬೈಲ್, ಇಂಟರ್‌ನೆಟ್ ಇಲ್ಲದ ಕಾಲದಲ್ಲಿ ದೂರದ ಊರುಗಳಿಗೆ ಸಂದೇಶ ಮುಟ್ಟಿಸಲು ಪಾರಿವಾಳಗಳನ್ನ ಬಳಸುತ್ತಿದ್ದರು. ಅವುಗಳ ಕಾಲಿಗೆ ಚಿಕ್ಕ ಪತ್ರ ಕಟ್ಟಿ ಕಳುಹಿಸುತ್ತಿದ್ದರು. ಅಚ್ಚರಿ ಅಂದ್ರೆ, ನೂರಾರು ಕಿಲೋಮೀಟರ್ ದೂರ ಹೋದ್ರೂ ಪಾರಿವಾಳಗಳು ತಮ್ಮ ಗೂಡಿಗೆ ವಾಪಸ್ ಬರ್ತಿದ್ವು. ಹಾಗಾದ್ರೆ, ಅಷ್ಟು ದೂರ ಹೋದ್ರೂ ಅವುಗಳಿಗೆ ತಮ್ಮ ಗೂಡು ಎಲ್ಲಿದೆ ಅಂತ ಹೇಗೆ ಗೊತ್ತಾಗುತ್ತೆ? ದಾರಿ ತಪ್ಪದೆ ಮನೆಗೆ ವಾಪಸ್ ಬರೋದು ಹೇಗೆ? ಇದರ ಹಿಂದೆ ಕುತೂಹಲ ಮೂಡಿಸುವ ವಿಜ್ಞಾನವೇ ಇದೆ

ಪಾರಿವಾಳಗಳಿಗೆ ದಾರಿ ಹೇಗೆ ಗೊತ್ತಾಗುತ್ತೆ?

ಪಾರಿವಾಳಗಳು ದೂರದ ಊರುಗಳಿಗೆ ಹೋದ್ರೂ ತಮ್ಮ ಗೂಡಿಗೆ ವಾಪಸ್ ಬರೋ ವಿಶೇಷ ಸಾಮರ್ಥ್ಯವನ್ನ ‘ಹೋಮಿಂಗ್ ಇನ್‌ಸ್ಟಿಂಕ್ಟ್’ (Homing Instinct) ಅಂತ ಕರೆಯುತ್ತಾರೆ. ಇದಕ್ಕೆ ಅವುಗಳ ದಿಕ್ಕು ಗುರುತಿಸುವ ಶಕ್ತಿ, ನೆನಪಿನ ಸಾಮರ್ಥ್ಯ ಮತ್ತು ಪರಿಸರದ ಅರಿವು ಸಹಾಯ ಮಾಡುತ್ತವೆ.

ಪಾರಿವಾಳಗಳು ದಾರಿ ಹುಡುಕಲು ಪ್ರಮುಖವಾಗಿ ನಾಲ್ಕು ಅಂಶಗಳನ್ನು ಬಳಸಿಕೊಳ್ಳುತ್ತವೆ.

- ಭೂಮಿಯ ಕಾಂತೀಯ ಕ್ಷೇತ್ರ: ಭೂಮಿಯ ಕಾಂತೀಯ ಕ್ಷೇತ್ರವು ದಿಕ್ಕು ಗುರುತಿಸಲು ಸಹಾಯ ಮಾಡಬಹುದು ಎಂದು ಸಂಶೋಧನೆಗಳು ಸೂಚಿಸಿವೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ.

- ಸೂರ್ಯನ ಸ್ಥಾನ: ಸೂರ್ಯನ ಸ್ಥಾನ ಮತ್ತು ತಮ್ಮ ದೇಹದ ಜೈವಿಕ ಗಡಿಯಾರದ ಸಹಾಯದಿಂದ ಪಾರಿವಾಳಗಳು ದಿಕ್ಕನ್ನು ಅಂದಾಜಿಸುತ್ತವೆ.

- ವಾಸನೆಯ ಅರಿವು: ಗಾಳಿಯಲ್ಲಿರುವ ವಿವಿಧ ವಾಸನೆಗಳನ್ನು ಗ್ರಹಿಸುವ ಮೂಲಕ ಪರಿಚಿತ ಪ್ರದೇಶಗಳನ್ನು ಗುರುತಿಸಲು ಅವುಗಳಿಗೆ ಸಾಧ್ಯವಾಗಬಹುದು.

- ಪರಿಚಿತ ಸ್ಥಳಗಳ ಗುರುತು: ನದಿಗಳು, ರಸ್ತೆಗಳು, ಬೆಟ್ಟಗಳು ಮತ್ತು ಕಟ್ಟಡಗಳಂತಹ ಗುರುತುಗಳು ಗೂಡಿನತ್ತ ಮರಳಲು ಸಹಾಯ ಮಾಡುತ್ತವೆ.

ಈ ಎಲ್ಲ ಸಾಮರ್ಥ್ಯಗಳು ಒಟ್ಟಾಗಿ ಪಾರಿವಾಳಗಳಿಗೆ ದಾರಿ ಹುಡುಕಲು ನೆರವಾಗುತ್ತವೆ. ಆದರೂ, ಎಲ್ಲ ಸಂದರ್ಭಗಳಲ್ಲೂ ಅವು ತಪ್ಪದೇ ಗೂಡಿಗೆ ಮರಳುತ್ತವೆ ಅನ್ನೋ ಖಾತರಿ ಇಲ್ಲ.

ಪಾರಿವಾಳಗಳಿಗೆ ಇದೆ ಗೂಡಿಗೆ ಮರಳುವ ಸಾಮರ್ಥ್ಯ

ಪಾರಿವಾಳಗಳ ಮೂಲಕ ಪತ್ರ ಕಳುಹಿಸುತ್ತಿದ್ದುದು ಹೇಗೆ?

ಪಾರಿವಾಳಗಳು ಪತ್ರದಲ್ಲಿರುವ ವಿಳಾಸ ಓದಿ ಹೋಗಿ ತಲುಪಿಸುತ್ತವೆ ಅಂದುಕೊಂಡ್ರೆ ಅದು ತಪ್ಪು. ಅವು ತಾವು ವಾಸಿಸುವ ಗೂಡಿಗೆ ವಾಪಸ್ ಬರೋ ಸಹಜ ಗುಣವನ್ನೇ ಸಂದೇಶ ಕಳುಹಿಸಲು ಬಳಸಲಾಗುತ್ತಿತ್ತು.

ಮೊದಲು ಪಾರಿವಾಳಗಳನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಸಾಕಿ, ಅದನ್ನೇ ತಮ್ಮ ನೆಲೆಯಾಗಿ ಗುರುತಿಸಿಕೊಳ್ಳುವಂತೆ ತರಬೇತಿ ನೀಡುತ್ತಿದ್ದರು. ನಂತರ ಅವುಗಳನ್ನು ಬೇರೆ ಊರಿಗೆ ಕೊಂಡೊಯ್ಯುತ್ತಿದ್ದರು. ಅಲ್ಲಿಂದ ಪತ್ರ ಕಳುಹಿಸಬೇಕಾದಾಗ ಪಾರಿವಾಳದ ಕಾಲಿಗೆ ಚಿಕ್ಕ ಪತ್ರ ಕಟ್ಟಿ ಹಾರಿಬಿಡುತ್ತಿದ್ದರು. ಅದು ತನ್ನ ಗೂಡಿಗೆ ವಾಪಸ್ ಬಂದಾಗ, ಅಲ್ಲಿದ್ದವರು ಪತ್ರ ತೆಗೆದು ಓದುತ್ತಿದ್ದರು.

ಉದಾಹರಣೆಗೆ, ಮೈಸೂರಿನಿಂದ ಬೆಂಗಳೂರಿಗೆ ಪತ್ರ ಕಳುಹಿಸಬೇಕಿದ್ದರೆ, ಬೆಂಗಳೂರಿನಲ್ಲಿ ಸಾಕಿದ್ದ ಪಾರಿವಾಳವನ್ನು ಮೈಸೂರಿಗೆ ಕೊಂಡೊಯ್ಯುತ್ತಿದ್ದರು. ಅದರ ಕಾಲಿಗೆ ಪತ್ರ ಕಟ್ಟಿ ಹಾರಿಬಿಟ್ಟರೆ, ಅದು ತನ್ನ ಗೂಡಿರುವ ಬೆಂಗಳೂರಿಗೆ ವಾಪಸ್ ಬರುತ್ತಿತ್ತು. ಅಂದರೆ, ಪತ್ರ ತಲುಪಬೇಕಾದ ಊರಿನಲ್ಲಿ ನೆಲೆ ಹೊಂದಿರುವ ಪಾರಿವಾಳವನ್ನೇ ಬಳಸಬೇಕಾಗಿತ್ತು.

ಯುದ್ಧದ ಸಂದರ್ಭದಲ್ಲೂ ಪಾರಿವಾಳಗಳ ಬಳಕೆ

ಮೊಬೈಲ್, ಫೋನ್‌ಗಳಂತಹ ಸಂವಹನ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿ, ಯುದ್ಧದ ಸಮಯದಲ್ಲಿ ಪಾರಿವಾಳಗಳನ್ನೇ ಸಂದೇಶ ಕಳಿಸೋಕೆ ಬಳಸುತ್ತಿದ್ದರು. ದೂರದ ಪ್ರದೇಶಗಳಲ್ಲಿದ್ದ ಸೈನಿಕರಿಗೆ ಮಾಹಿತಿ ತಲುಪಿಸಲು, ಬೇರೆ ಸಂವಹನ ವ್ಯವಸ್ಥೆಗಳು ಕೈಕೊಟ್ಟಾಗಲೂ ಪಾರಿವಾಳಗಳ ಮೂಲಕ ಸಂದೇಶ ಕಳಿಸುತ್ತಿದ್ದರು.

ಪಾರಿವಾಳಗಳಿಗೆ ವಿಲಾಸ ಹೇಗೆ ಗೊತ್ತಾಗುತ್ತೆ?

ಯುದ್ಧದ ಸಂದರ್ಭಗಳಲ್ಲಿ ಪಾರಿವಾಳಗಳ ಮೂಲಕ ಪ್ರಮುಖ ಮಾಹಿತಿಗಳನ್ನು ಕಳುಹಿಸಲಾಗುತ್ತಿತ್ತು. ಅವುಗಳ ಹಾರಾಟದ ಸಾಮರ್ಥ್ಯ ಮತ್ತು ತಮ್ಮ ಗೂಡಿಗೆ ಮರಳುವ ಗುಣ ಇದಕ್ಕೆ ಸಹಾಯ ಮಾಡುತ್ತಿತ್ತು. ಆದ್ರೆ, ಕೆಟ್ಟ ಹವಾಮಾನ, ದೂರ ಮತ್ತು ಬೇರೆ ಪಕ್ಷಿಗಳ ದಾಳಿಯಿಂದಾಗಿ ಕೆಲವೊಮ್ಮೆ ಸಂದೇಶ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ.

ಇದನ್ನೂ ಓದಿ: ದಸರಾ ಮೇಳದಲ್ಲಿ ಸ್ಕಾರ್ಪಿಯೋ ಅಟ್ಟಹಾಸ; ಜನರ ಮೇಲೆ ಕಾರು ಹರಿಸಿದ ಚಾಲಕ | Scorpio Stunt

ತಂತ್ರಜ್ಞಾನವಿಲ್ಲದ ಕಾಲದ ಪ್ರಕೃತಿಯ ಅದ್ಭುತ

ಇವತ್ತು ಮೊಬೈಲ್‌ನಲ್ಲಿ ಕ್ಷಣಾರ್ಧದಲ್ಲಿ ಮೆಸೇಜ್ ಕಳಿಸಬಹುದು. ಆದ್ರೆ, ಹಿಂದಿನ ಕಾಲದಲ್ಲಿ ಪಾರಿವಾಳಗಳ ಸಹಜ ಸಾಮರ್ಥ್ಯವನ್ನೇ ಸಂದೇಶ ಕಳಿಸಲು ಬಳಸುತ್ತಿದ್ದರು. ಅವು ಪತ್ರದಲ್ಲಿರುವ ವಿಳಾಸ ಓದಿ ಹೋಗುತ್ತಿರಲಿಲ್ಲ; ತಮ್ಮ ಗೂಡನ್ನು ಗುರುತಿಸಿ ಅಲ್ಲಿಗೆ ವಾಪಸ್ ಬರುತ್ತಿದ್ದವು. ಪಾರಿವಾಳಗಳ ಈ ವಿಶೇಷ ಸಾಮರ್ಥ್ಯ ಇಂದಿಗೂ ವಿಜ್ಞಾನಿಗಳಿಗೆ ಕುತೂಹಲ ಮೂಡಿಸಿದೆ.