ನ್ಯೂಸ್

ಭಾರತದಲ್ಲಿ 4ವರ್ಷದ ಪುಟಾಣಿಗೆ ಹಕ್ಕಿ ಜ್ವರ! ಡಬ್ಲ್ಯೂಎಚ್​ಓ ಹೇಳೋದೇನು?

ದೆಹಲಿ: ಭಾರತದಲ್ಲಿ ನಾಲ್ಕು ವರ್ಷದ ಮಗುವಿಗೆ ಹಕ್ಕಿ ಜ್ವರ (ಎಚ್​9ಎನ್​2) ಸೋಂಕು ತಗುಲಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಓ) ಬಹಿರಂಗಪಡಿಸಿದೆ.

ಸಾಮಾನ್ಯವಾಗಿ ಹಕ್ಕಿಗಳಿಗೆ ಸೋಂಕು ತಗಲುವ ಬರ್ಡ್ ಫ್ಲೂ ಸಾಂದರ್ಭಿಕವಾಗಿ ಮನುಷ್ಯರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಫೆಬ್ರವರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಚೇತರಿಸಿಕೊಂಡ ಬಳಿಕ ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿತ್ತು.

ಮಗುವಿನ ಮನೆಯ ಬಳಿ ಸಾಕಷ್ಟು ಕೋಳಿಗಳಿವೆ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ, ಕುಟುಂಬದಲ್ಲಿ ಬೇರೆ ಯಾರಿಗೂ ವೈರಸ್ ತಗುಲಿರುವುದು ಪತ್ತೆಯಾಗಿಲ್ಲ. ಭಾರತದಲ್ಲಿ ಮಾನವರಲ್ಲಿ ಎಚ್​9ಎನ್​2 ಹಕ್ಕಿ ಜ್ವರ ಪತ್ತೆಯಾಗಿದ್ದು ಇದು ಎರಡನೇ ಬಾರಿ. 2019 ರಲ್ಲಿ ಒಬ್ಬ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾನೆ ಎಂದು ಡಬ್ಲ್ಯೂ ಎಚ್​ಓ ಹೇಳಿದೆ.

ಈ ರೀತಿಯ ವೈರಸ್‌ನೊಂದಿಗೆ ರೋಗದ ಲಕ್ಷಣಗಳು ಸೌಮ್ಯವಾಗಿರುತ್ತವೆ ಎಂದು ಅದು ತಿಳಿಸಿದೆ. ಇದರ ನಡುವೆ ಮೆಕ್ಸಿಕೊದಲ್ಲಿ ಬರ್ಡ್​ಫ್ಲೂ ಎಚ್5ಎನ್2 ರೂಪಾಂತರದೊಂದಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ವೈರಸ್‌ನಿಂದ ವಿಶ್ವದಲ್ಲಿ ದಾಖಲಾದ ಮೊದಲ ಸಾವು ಇದು ಎಂದು ತಿಳಿದುಬಂದಿದೆ.

ಆದಾಗ್ಯೂ.. ಸೋಂಕಿತರು ಕೋಳಿ ಅಥವಾ ಇತರ ಪಕ್ಷಿಗಳ ಸಂಪರ್ಕಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅದು ಹೇಳಿದೆ.

ಮೃತ ವ್ಯಕ್ತಿಗೆ ಮೊದಲಿನಿಂದಲೂ ಕೆಲವು ಆರೋಗ್ಯ ಸಮಸ್ಯೆಗಳು ಇದ್ದವು ಎನ್ನಲಾಗಿದೆ.