ನ್ಯೂಸ್

17 ಬಾಲಕರು ಒತ್ತೆಯಾಳು! ಏನಿದು ಮುಂಬೈ ಯೂಟ್ಯೂಬರ್​ನ​ ಭಯಾನಕ ಕೃತ್ಯ? ಯಾರು ಈ ರೋಹಿತ್ ಆರ್ಯ? | Rohit Arya

ಮುಂಬೈ: ಮುಂಬೈನ ಪೊವೈನಲ್ಲಿರುವ ಆರ್​ಎ ಸ್ಟುಡಿಯೋದಲ್ಲಿ ಗುರುವಾರ (ಅ.30) ಯೂಟ್ಯೂಬರ್ ರೋಹಿತ್ ಆರ್ಯ (Rohit Arya) 17 ಮಕ್ಕಳು ಸೇರಿ 19 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಇದು ಎರಡು ಗಂಟೆಗಳ ಕಾಲ ತೀವ್ರ ಉದ್ವಿಗ್ನತೆಗೂ ಕಾರಣವಾಯಿತು. ವೆಬ್ ಸರಣಿ ಆಡಿಷನ್ ಹೆಸರಿನಲ್ಲಿ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದ ರೋಹಿತ್​ ಕಡೆಗೂ ಖಾಕಿಯ ಗುಂಡೇಟಿಗೆ ಉಸಿರು ಚೆಲ್ಲಿದ್ದು, ಮಕ್ಕಳನ್ನು ರಕ್ಷಿಸುವಲ್ಲಿ ಆರಕ್ಷಕರು ಮೇಲುಗೈ ಸಾಧಿಸಿದರು.

ಒತ್ತೆಯಾಳುಗಳನ್ನು ಸುರಕ್ಷಿತವಾಗಿ ವಾಪಾಸ್​ ಕರೆತರಲು ಪಣತೊಟ್ಟಿದ್ದ ಪೊಲೀಸ್​ ಮೇಲೆ ರೋಹಿತ್​ ಏಕಾಏಕಿ ಗುಂಡು ಹಾರಿಸಿದ. ತಕ್ಷಣವೇ ಯೂಟ್ಯೂಬರ್ ಮೇಲೆ ಖಾಕಿ ಪಡೆ ಗುಂಡು ಹೊಡೆಯಿತು. ಈ ವೇಳೆ ಗಂಭೀರವಾಗಿ ಗಾಯಗೊಂಡ ಆರ್ಯ​ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವಿಗೀಡಾದ. ಕಟ್ಟಡದಲ್ಲಿ ಸೆರೆಯಾಗಿದ್ದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಪಾರು ಮಾಡುವಲ್ಲಿ ಪೊಲೀಸರು ಯಶಸ್ವಿಯಾದರು.

ಏನಿದು ಘಟನೆ?

ಗುರುವಾರ ಮಧ್ಯಾಹ್ನ 1:45ಕ್ಕೆ, ನಗರದಲ್ಲಿ ಹಠಾತ್ ಗದ್ದಲ ಸೃಷ್ಟಿಯಾಯಿತು. ತಮ್ಮ ಮಕ್ಕಳು ಊಟಕ್ಕೆ ಹಿಂತಿರುಗದಿದ್ದಾಗ ಪೋಷಕರು ಗಾಬರಿಗೊಂಡಿದ್ದರು. ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಪೊವೈನಲ್ಲಿರುವ ಮಹಾವೀರ್ ಕ್ಲಾಸಿಕ್ ಸುತ್ತಮುತ್ತಲಿನ ಬೀದಿ ಬೀದಿಗಳಲ್ಲಿ ಪೊಲೀಸ್ ವ್ಯಾನ್‌, ಆಂಬ್ಯುಲೆನ್ಸ್‌ ಮತ್ತು ಗಸ್ತು ತಿರುಗುವಿಕೆ ವಾಹನಗಳು ಕಟ್ಟೆಚ್ಚರ ವಹಿಸಿತು. ನಂತರ 8 ಕಮಾಂಡೋಗಳನ್ನು ಒಳಗೊಂಡ ಕ್ವಿಕ್ ರಿಯಾಕ್ಷನ್ ತಂಡ (ಕ್ಯೂಆರ್‌ಟಿ) ಸ್ನಾನಗೃಹದ ಮೂಲಕ ಆಡಿಷನ್ ಕೋಣೆಗೆ ನುಗ್ಗಿ, ಅಷ್ಟೂ ಒತ್ತೆಯಾಳುಗಳನ್ನು ಕೇವಲ 35 ನಿಮಿಷಗಳಲ್ಲಿ ರಕ್ಷಿಸಿತು.

ಪೊಲೀಸರ ಪ್ರಕಾರ, ಕಿಡಿಗೇಡಿ ಮಕ್ಕಳನ್ನು ನಟನಾ ಆಡಿಷನ್‌ ನೆಪದಲ್ಲಿ ತನ್ನ ಸ್ಥಳಕ್ಕೆ ಕರೆಸಿಕೊಂಡಿದ್ದ. ಬಾಲಕರು ಒಳಗೆ ಹೋದ ಬೆನ್ನಲ್ಲೇ ಕೊಠಡಿಯ ಬಾಗಿಲನ್ನು ಲಾಕ್ ಮಾಡಿದ ಆರ್ಯ​, ಯಾರನ್ನೂ ಹೊರಗೆ ಹೋಗಲು ಬಿಡಲಿಲ್ಲ. ಪೋಷಕರು ಕೂಡ ತಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ಪೊಲೀಸರಿಗೆ ಘಟನೆ ವಿವರಿಸಿದರು. ಸುಮಾರು 2 ಗಂಟೆಗಳ ಕಾಲ ಆರ್ಯ ಜತೆ ಮಾತುಕತೆ ನಡೆಸಿದ ಖಾಕಿ, ಒತ್ತೆಯಳಾಗಿ ಇರಿಸಿಕೊಂಡಿದ್ದ ಮಕ್ಕಳನ್ನು ಬಿಡುಗಡೆ ಮಾಡುವಂತೆ ಕೋರಿದರು. ಈ ವೇಳೆ ತನ್ನ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಬಿಡ್ತೀನಿ. ಇಲ್ಲವಾದ್ರೆ, ಅವರನ್ನೆಲ್ಲ ಜೀವಂತವಾಗಿ ಸುಡುವುದಾಗಿ ಬೆದರಿಕೆ ಹಾಕಿದ್ದ.

ಯಾರು ಈ ರೋಹಿತ್ ಆರ್ಯ?

ಸ್ವಯಂ ಘೋಷಿತ ನಟನಾ ತರಬೇತುದಾರ ಮತ್ತು ಮೋಟಿವೇಷನಲ್ ಸ್ಪೀಕರ್​ ಎಂದು ಗುರುತಿಸಿಕೊಂಡಿದ್ದ ರೋಹಿತ್ ಆರ್ಯ, ಆರ್​ಎ ಸ್ಟುಡಿಯೋಸ್‌ನೊಂದಿಗೆ ಸಂಪರ್ಕ ಹೊಂದಿದ್ದ. ಘಟನೆಗೆ ಕೆಲವು ದಿನಗಳ ಮೊದಲು ಆತ ಕಿರುಚಿತ್ರ ಆಡಿಷನ್‌ಗಳನ್ನು ನಡೆಸುತ್ತಿದ್ದ. ಈ ನೆಪದಲ್ಲಿ ಮಕ್ಕಳನ್ನು ಆಹ್ವಾನಿಸಿದ್ದ. ಆರ್ಯ ಮುಂಬೈನಲ್ಲಿ ವಾಸಿಸುತ್ತಿದ್ದ. ಆತನ ಕುಟುಂಬ ಪುಣೆಯಲ್ಲಿದೆ. ಮೂಲತಃ ಈತ ಒಬ್ಬ ಯೂಟ್ಯೂಬರ್​ ಎನ್ನಲಾಗಿದೆ.

ರೋಹಿತ್​ ಮುಂದಿಟ್ಟ ಬೇಡಿಕೆಗಳೇನು?

ರೋಹಿತ್ ಆರ್ಯ, ಒಂದಷ್ಟು ಸಾಲಗಳು ತನ್ನ ಮೇಲಿವೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಾಲವನ್ನು ಮರುಪಾವತಿಸದ ಕಾರಣ ಕೆಲವು ವರ್ಷಗಳ ಕಾಲ ನಾನು ತೀವ್ರ ಖಿನ್ನತೆಯಲ್ಲಿದ್ದೆ. ನಾನಿಲ್ಲಿ ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಕೈಗೊಳ್ಳಲ್ಲ. ಬದಲಿಗೆ ಒಂದು ಸರಳ ಬೇಡಿಕೆಯನ್ನು ಮುಂದಿಡುವೆ ಅಷ್ಟೇ. ನನಗೆ ಕೆಲವು ಪ್ರಶ್ನೆಗಳಿವೆ. ನಾನು ಕೆಲವು ಜನರೊಂದಿಗೆ ಮಾತನಾಡಲು ಬಯಸುತ್ತೇನೆ. ದಯವಿಟ್ಟು ಯಾರಿಗೂ ಹಾನಿ ಮಾಡೋ ರೀತಿ ನನ್ನನ್ನು ಕೆಣಕಬೇಡಿ ಎಂದು ಸ್ಟುಡಿಯೋ ಒಳಗಿನಿಂದ ಮಾಡಿದ ವಿಡಿಯೋದಲ್ಲಿ ಹೇಳಿಕೊಂಡಿದ್ದ.

ಸಂಜೆ 5 ಗಂಟೆಯವರೆಗೆ ಆರ್ಯ ಜತೆ ಮಾತುಕತೆಗಿಳಿದ ಪೊಲೀಸರು, ಈತ ಬಗ್ಗುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಹಿಂಬದಿಯಿಂದ ಒಳ ನುಸುಳಿದರು. ಈ ವೇಳೆ ಆರೋಪಿಗೆ ಗುಂಡು ಹಾರಿಸಿ, 19 ಒತ್ತೆಯಾಳುಗಳನ್ನು ಪೊಲೀಸರು ರಕ್ಷಿಸಿದರು. ಫೋರೆನ್ಸಿಕ್ ತಂಡಗಳು ಸ್ಥಳದಿಂದ ಏರ್ ಗನ್, ಕೆಮಿಕಲ್​​ಗಳು ಮತ್ತು ಲೈಟರ್ ಅನ್ನು ವಶಪಡಿಸಿಕೊಂಡಿದೆ,(ಏಜೆನ್ಸೀಸ್).