ನ್ಯೂಸ್

ಬಡತನ ಯಾರಿಗೆ?

ಬಾಬುಪ್ರಸಾದ್​ ಮೋಡಿಸ್​
ಜಗತ್ತಿನಲ್ಲೆಲ್ಲ ಒಂದು ಕೂಗು ಕೇಳಿಬರುತ್ತದೆ. ಅದು ಯಾವುದು? ನಾ ಬಡವ ನಾ ಸಿರಿವಂತ ಎಂಬುದು. ಸಾಕಷ್ಟು ಬೆಳ್ಳಿ-ಬಂಗಾರ, ದೊಡ್ಡ ಮನೆ, ಬಹಳ ಹೊಲವಿದ್ದರೆ ಮಾತ್ರ ಆತ ಸಿರಿವಂತ. ಇದೆಲ್ಲ ಇಲ್ಲದವ ಬಡವನೆಂಬ ಭ್ರಮೆ ನಮ್ಮೆಲ್ಲರನ್ನು ಕಾಡುವುದು. ಈ ಬಗ್ಗೆ ಆಯ್ದಕ್ಕಿ ಲಕ್ಕಮ್ಮನ ಮಾತಿನಲ್ಲಿ ತಿಳಿಯೋಣ.

ಭಕ್ತಂಗೆ ಬಡತನವುಂಟೆ? ನಿತ್ಯಂಗೆ ಮರಣವುಂಟೆ?/ಭಕ್ತರು ಬಡವರೆಂದು ಮತ್ತೊಂದು ಕೊಟ್ಟಿಹೆನೆಂದಡೆ/ಮಾರಯ್ಯಪ್ರಿಯ ಅಮರೇಶ್ವರ/ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ||

ಭಕ್ತಿ ಇಲ್ಲದವರೇ ಬಡವರು. ಭಕ್ತಿ ಇದ್ದವರೇ ಸಿರಿವಂತರು. ಸಿರಿವಂತಿಕೆ ಶಿವಭಕ್ತರಿಗಿಲ್ಲೆಂದು ಅವರಿಗೆ ನಾವು ಉಪಕಾರ ಮಾಡಲು ಮುಂದಾಗುತ್ತೇವೆ. ಇಂತಹ ಜಗತ್ತಿನ ವಿಚಿತ್ರವ ಕಂಡು ಆಯ್ದಕ್ಕಿ ಲಕ್ಕಮ್ಮ ಸರ್ವರಿಗೂ ಜ್ಞಾನವಾಗುವಂತೆ ತಿಳಿಸಿದ್ದಾಳೆ. ಬಡತನ ಯಾರಿಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಶಿವಭಕ್ತರಿಗೆ ಬಡತನವಿದೆಯಾ? ನಿತ್ಯಂಗೆ ಅಂದರೆ ಶಿವನಿಗೆ ಮರಣವಿದೆಯಾ ಎಂದು ಕೇಳಿದ್ದಾಳೆ. ಭಕ್ತನು ದೇವರನ್ನು ನಂಬಿ ಬದುಕುವನು. ಶಿವನು ಮಹಾದಾನಿ. ಅವನು ಅಂತರಂಗ ಬಹಿರಂಗದಲ್ಲಿ ದೊಡ್ಡ ಸಿರಿವಂತನು. ಭಕ್ತಿ, ಜ್ಞಾನ, ಶಿವಯೋಗದಲ್ಲಿ ಸಿರಿವಂತ. ಶಿವಭಕ್ತರು ಯಾವತ್ತಿಗೂ ದೊಡ್ಡವರು. ಜಗತ್ತಿಗೂ ದೊಡ್ಡವರು.

ಅತ್ಯಂತ ಕೆಚ್ಚೆದೆಯ ನುಡಿಯಿಂದ ಲಕ್ಕಮ್ಮ ಹೇಳುತ್ತಾಳೆ - ಶಿವಭಕ್ತರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಶಿವಭಕ್ತರು ದುರಾಸೆ ಇಲ್ಲದವರು. ಭಕ್ತರಿಗೆ ಬಡತನ ಬರಬೇಕಾದರೆ ಅದು ಶಿವನು ಸತ್ತಾಗ ಮಾತ್ರ. ಶಿವನಿಗೆ ಸಾವಿಲ್ಲ. ಸಾವಿಲ್ಲದವನು ಸಾಯುತ್ತಾನೆ ಹೇಗೆ? ಅಮರೇಶ್ವರ ಲಿಂಗ ಎಲ್ಲಿವರೆಗೆ ಇರುವುದೋ ಅಲ್ಲಿವರೆಗೆ ಶಿವಭಕ್ತರು ಮಹಾಸುಖಿಗಳೆಂದು, ಅವರನ್ನು ಅರಿತು ಅವರ ಭಕ್ತಿಯನ್ನು ತಿಳಿಯಬೇಕು. ಶಿವನು ನಿತ್ಯ ಸತ್ಯ. ಶಿವಭಕ್ತರು ಸದಾ ನಿತ್ಯ ಸುಖಿ ಹಾಗೂ ಸಿರಿವಂತರು ಆಗಿರುತ್ತಾರೆ. ಇದನ್ನರಿತು ನಡೆದು ನಾವು ನಿತ್ಯ ಸುಖಿಗಳಾಗಿ ಬಾಳಿ ಬದುಕುವುದನ್ನು ಕಲಿಯಬೇಕು. ಆಯ್ದಕ್ಕಿ ಲಕ್ಕಮ್ಮ ಸಮಾಜಕ್ಕೆ ಹೇಳಿದ್ದನ್ನು ಆಚರಣೆಯಲ್ಲಿ ತಂದ ಶಿವಶರಣೆ. ಅಂತಹ ಶರಣೆ ನಮ್ಮ ಜನಕ್ಕೆ ಆದರ್ಶ ಕಾಯಕ ಮಾಡಲು ಸಹ ಕಲಿಸಿದ್ದಾಳೆ.