ನ್ಯೂಸ್

ಕಂಸ ಯಾರು?

ಬಾಬುಪ್ರಸಾದ್​ ಮೋಡಿಸ್​
ಶ್ರೀಕೃಷ್ಣಕಥಾಮೃತ-158

ದ್ರುಮಿಳ ಎಂಬ ಗಂಧರ್ವ ಉಗ್ರಸೇನನ ವೇಷದಲ್ಲಿ ಬಂದು ಕಂಸನ ತಾಯಿಯನ್ನು ಸಂಪರ್ಕ ಮಾಡಿದಾಗ ಹುಟ್ಟಿದವನು ಕಂಸ.

ಕಂಸನ ತಾಯಿ ದ್ರುಮಿಳನಿಗೆ ಶಾಪ ಕೊಡುತ್ತಾಳೆ. ನೀನು ನನಗೆ ಗೊತ್ತಾಗದೇ ವೇಷ ಬದಲಾಯಿಸಿ ನನ್ನನ್ನು ವಂಚಿಸಿ ಅನ್ಯಾಯದಿಂದ ಸಂಬಂಧ ಮಾಡಿರುವೆ. ನಿನಗೆ ಅಪಕೀರ್ತಿ, ಕಲಂಕ, ಪಾಪ ಬರಬೇಕು, ಆಗಲೇ ನನಗೆ ತೃಪ್ತಿ. ನೀನು ಮಾಡಿದ ಅನ್ಯಾಯಕ್ಕೆ ಏನು ಆಗಬೇಕು ಎಂದರೆ ನಿನ್ನಿಂದ ನನ್ನಲ್ಲಿ ಹುಟ್ಟುವ ಮಗ ಎಲ್ಲ ವಿಧವಾದ ಧರ್ಮಗಳನ್ನು ಧಿಕ್ಕರಿಸಿ ಮಹಾ ಉನ್ಮತ್ತನಾಗಿ ಮಹಾಪಾಪಿಷ್ಠನಾಗಿ ಸಜ್ಜನರಿಗೆ ದ್ರೋಹ ಮಾಡುವ, ಒಬ್ಬ ಕ್ರೂರನಾದ ವ್ಯಕ್ತಿ ಯಾಗಲಿ ಎಂದು ಕಂಸನ ತಾಯಿ ದ್ರುಮಿಳನಿಗೆ ಶಾಪ ಕೊಡುತ್ತಾಳೆ.

ಅವನಿಗೆ ಅವಳ ಶಾಪದಿಂದ ಹೆದರಿಕೆಯಾಗಿ ಮತ್ತೆ ಏನಾದರೂ ಶಾಪ ಕೊಡುತ್ತಾಳೆ ಎಂದು ಹೆದರಿ ಕೊನೆಗೆ ಒಂದು ಮಾತನ್ನು ಜೋಡಿಸಿ ಅಲ್ಲಿಂದ ಹೊರಡುತ್ತಾನೆ. ಮಹಾದುಷ್ಟನಾಗಲಿ, ಮಹಾಪಾಪಿಷ್ಠನಾಗಲಿ ಮಹಾಕ್ರೂರನಾಗಲಿ, ಲೋಕಕಂಠಕನಾಗಲಿ, ಹಿಂಸ್ರಕನಾಗಲಿ ಎಂದು ಶಾಪಕೊಟ್ಟಿದ್ದೀಯೆ, ಅದರ ಜತೆಗೆ ನನ್ನ ಶಾಪವೂ ಒಂದು ಸೇರಿಕೊಳ್ಳಲಿ. ಅವನು ಯಾರಿಗೋ ಶತ್ರುವೋ ಕ್ರೂರಿಯೋ ಆಗುವುದು ಬೇಡ. ನಿಮ್ಮವರಿಗೇ ಶತ್ರುವಾಗಲಿ, ಕ್ರೂರಿಯಾಗಿರಲಿ ಎಂದು ಶಪಿಸುತ್ತ ಭಯದಿಂದ ಗಂಧರ್ವ ಅದೃಶ್ಯನಾಗುತ್ತಾನೆ.

ಹೀಗೆ ಜನ್ಮ ಕೊಟ್ಟ ತಂದೆ ತಾಯಿಗಳು ಮಗನಿಗೆ ಶಾಪಕೊಟ್ಟಿದ್ದಾರೆ. ಇದೆಲ್ಲ ಕಂಸನಿಗೆ ಗೊತ್ತಿದೆ. ಕಂಸ ಹೇಳುತ್ತಾನೆ: ನನಗೆ ತಂದೆ ತಾಯಿಗಳೇ ಹೀಗೆ ಶಾಪಕೊಟ್ಟ ಮೇಲೆ ನಾನೇನು ಮಾಡಲಿ. ನಾನು ಮಹಾಪಾಪಿಷ್ಠನಾಗಿ, ಉನ್ಮತ್ತನಾಗಿ, ಕ್ರೂರನಾಗಿ, ನನ್ನವರಿಗೆ ಶತ್ರುವಾಗಿ ಹಿಂಸ್ರಕನಾಗಿ ಇರಬೇಕಾದದ್ದೇ. ನಾನು ಇಂತಹ ಅಧರ್ಮವನ್ನು ಮಾಡಬಾರದೇನೋ ನಿಜ. ಶಾಪ ಇದೆ, ಅನಿವಾರ್ಯವಾಗಿ ಮಾಡುತ್ತೇನೆ ಎಂಬುದೂ ಅಲ್ಲ. ಶಾಪ ಸಹಾಯಕ ಅಷ್ಟೇ. ನನಗೆ ಸ್ವಾಭಾವಿಕವಾಗಿಯೇ ಅಧರ್ಮದಲ್ಲಿ ರುಚಿ ಇದೆ. ಆದ್ದರಿಂದ ನನ್ನವರನ್ನು ನಾನು ಕೊಲ್ಲುತ್ತೇನೆ. ಹಿಂಸಿಸುತ್ತೇನೆ ಎಂದು ಕಂಸ ತನ್ನ ನಿರ್ಧಾರವನ್ನು ತಿಳಿಸುತ್ತಾನೆ.