ಬೆಂಗಳೂರು: ಸ್ಥಿರಾಸ್ತಿಗಳ ದಾನ ಪತ್ರ ಯಾರಿಗೆ ಮಾಡಬಹುದು ಹಾಗೂ ವಿಭಾಗ ಪತ್ರದಲ್ಲಿ ಹಕ್ಕು ಹಂಚಿಕೆ ಯಾವ ಸಮಯದಲ್ಲಿ ಮಾಡಬಹುದು, ಅದಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವೆಷ್ಟು ಎಂಬುದು ನೋಂದಣಿ ಕಾಯ್ದೆಯಲ್ಲಿ ಉಲ್ಲೇಖವಾಗಿದೆ.
ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಆರ್ಟಿಕಲ್ 28ರ ಪ್ರಕಾರ, ದಾನಪತ್ರ ಬರೆದುಕೊಡುವವರಿಗೆ ಸಂಬಂಧಿಸಿದಂತೆ ಮಾಹಿತಿ ಉಲ್ಲೇಖವಾಗಿದೆ. ಇದರ ಪ್ರಕಾರ, ಕುಟುಂಬ ಎಂದರೆ ಸಂಬಂಧದಲ್ಲಿ ತಂದೆ-ತಾಯಿ, ಪತಿ-ಪತ್ನಿ, ಮಗ, ಮಗಳು, ಸೊಸೆ, ಸಹೋದರ, ಸಹೋದರಿ ಮತ್ತು ಮೊಮ್ಮಕ್ಕಳು ಆಗಿರುತ್ತಾರೆ. ಕುಟುಂಬದ ಒಳಗೆ ಗ್‌ಟಿ ಡೀಡ್ ನೋಂದಣಿ ಶುಲ್ಕ ಸಾವಿರ ರೂ. ನಿಗದಿ ಮಾಡಲಾಗಿದೆ. ಆಸ್ತಿಯು ಬೆಂಗಳೂರು ಪ್ರದೇಶಾಭಿವೃದ್ಧಿ ಪ್ರದೇಶದ ಅಥವಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದ್ದರೆ ಮುದ್ರಾಂಕ ಶುಲ್ಕ 5 ಸಾವಿರ ರೂ. ಆಗಲಿದೆ. ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯಿತಿ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಇದ್ದರೆ ಮುದ್ರಾಂಕ ಶುಲ್ಕ 3 ಸಾವಿರ ರೂ. ನಿಗದಿ ಮಾಡಲಾಗಿದೆ.
ಆಸ್ತಿಯು ಈ ಮೇಲೆ ಹೇಳಲಾದ ಪ್ರದೇಶಗಳನ್ನು ಹೊರತುಪಡಿಸಿ ಇತರ ಮಿತಿಗಳಲ್ಲಿದ್ದರೆ ಮುದ್ರಾಂಕ ಶುಲ್ಕ ಸಾವಿರ ರೂ. ಹಾಗೂ ಹೆಚ್ಚುವರಿ ಮುದ್ರಾಂಕ ಶುಲ್ಕ ಮತ್ತು ಸೆಸ್ ಒಳಗೊಂಡಿರುತ್ತದೆ.
ವಿಭಾಗ ಪತ್ರಕ್ಕೆ ಯಾರು ಅರ್ಹರು?:
ವಿಭಾಗ ಪತ್ರ ಎಂದರೆ ಸ್ಥಿರಾಸ್ತಿ ಸ್ವತ್ತುಗಳ ಮೇಲಿನ ಮಾಲೀಕತ್ವ ಮತ್ತು ಹಕ್ಕುಗಳ ಭಾಗ ಅಥವಾ ವಿಭಾಗಿಸುವ ಕಾನೂನು ದಾಖಲೆಯಾಗಿದೆ. ವಿಭಾಗ ಪತ್ರವನ್ನು ಮಾಡಿದ ನಂತರ ಭಾಗಸ್ಥ ತನ್ನ ಪಾಲಿಗೆ ಬಂದ ಆಸ್ತಿಯನ್ನು ಯಾವುದೇ ವ್ಯಕ್ತಿಗೆ ಮಾರಾಟ ಮಾಡಲು ಉಡುಗೊರೆಯಾಗಿ ನೀಡಲು ಅಥವಾ ವರ್ಗಾಯಿಸಲು ಅರ್ಹರಾಗಿದ್ದಾರೆ. ವಿಭಾಗ ಪತ್ರವನ್ನು ಆಸ್ತಿ ಹಂಚಿಕೆ ಪ್ರಕ್ರಿಯೆಯಲ್ಲಿ ಇದ್ದಾಗ ಮತ್ತು ಜಂಟಿಯಾಗಿ ಇದ್ದಾಗ ವಿಭಾಗ ಪತ್ರ ನೋಂದಣಿ ಮಾಡಬಹುದಾಗಿದೆ. ಆಸ್ತಿಯು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಮುನ್ಸಿಪಲ್, ಪಪಂ ವ್ಯಾಪ್ತಿಯಲ್ಲಿದ್ದರೆ ಮುದ್ರಾಂಕ ಶುಲ್ಕ ಪ್ರತಿ ಷೇರಿಗೆ ಸಾವಿರ ರೂ. ಹಾಗೂ ನೋಂದಣಿ ಶುಲ್ಕ ಪ್ರತಿ ಷೇರಿಗೆ ಸಾವಿರ ರೂ. ಪಾವತಿ ಮಾಡಬೇಕಾಗಿದೆ.
ಆಸ್ತಿಯು ಮೇಲೆ ಹೇಳಿದ ವ್ಯಾಪ್ತಿಯಲ್ಲಿ ಹೊರತುಪಡಿಸಿ ಇತರ ಪ್ರದೇಶಗಳ ವ್ಯಾಪ್ತಿಯಲ್ಲಿ ಇದ್ದರೆ ಮುದ್ರಾಂಕ ಶುಲ್ಕ ಪ್ರತಿ ಷೇರಿಗೆ 500 ರೂ. ಹಾಗೂ ನೋಂದಣಿ ಶುಲ್ಕವೂ 500 ರೂ. ನಿಗದಿ ಮಾಡಲಾಗಿದೆ. ಆಸ್ತಿಯು ಕೃಷಿ ಭೂಮಿ ಆಗಿದ್ದರೆ, ಮುದ್ರಾಂಕ ಶುಲ್ಕ ಪ್ರತಿ ಷೇರಿಗೆ 250 ರೂ. ಮತ್ತು ನೋಂದಣಿ ಶುಲ್ಕ ಪ್ರತಿ ಷೇರಿಗೆ 200 ರೂ. ಪಾವತಿಸಬೇಕು. ಭೂಮಿ ಅಲ್ಲದೆ, ಚರಾಸ್ತಿ ಅಥವಾ ಹಣ ಆಗಿದ್ದರೆ ಮುದ್ರಾಂಕ ಶುಲ್ಕ ಪ್ರತಿ ಷೇರಿಗೆ 250 ರೂ. ಹಾಗೂ ನೋಂದಣಿ ಶುಲ್ಕ 300 ರೂ. ಪ್ರತಿ ಷೇರಿಗೆ ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೋಂದಣಿ ಮಾಡಿಸಿದರೆ ಒಳಿತು
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಾನ ಪತ್ರ ಮತ್ತು ವಿಭಾಗ ಪತ್ರಗಳನ್ನು ನಿಗದಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ ನೋಂದಣಿ ಮಾಡಿದರೇ ಭವಿಷ್ಯದಲ್ಲಿ ಒಳಿತು. ಭಾರತೀಯ ನೋಂದಣಿ ಕಾಯ್ದೆಯಡಿ ಕೋರ್ಟ್‌ಗಳಲ್ಲಿ ನೋಂದಣಿಯಾದ ದಾಖಲೆಗಳಿಗೆ ಹೆಚ್ಚಿನ ಮೌಲ್ಯ ಇರಲಿದೆ. ಅಲ್ಲದೆ, ಆಸ್ತಿ ಬರೆದುಕೊಡುವರ ಮತ್ತು ಬರೆಸಿಕೊಳ್ಳವರ ಬೆರಳಚ್ಚು ಮತ್ತು ೆಟೋ ಎಲ್ಲವನ್ನೂ ಸಂಗ್ರಹಿಸಿ ನೋಂದಣಿ ಮಾಡುವುದರಿಂದ ಮೌಲ್ಯ ಹೆಚ್ಚಿರಲಿದೆ. ಇಂತಹ ಆಸ್ತಿಯನ್ನು ಬೇರೊಬ್ಬರಿಗೆ ವರ್ಗಾವಣೆ ಅಥವಾ ಮಾರಾಟಕ್ಕೂ ಅನುಕೂಲವಾಗಿದೆ.