ನ್ಯೂಸ್

ದೇಶ ವಿರೋಧಿ ಚಟುವಟಿಕೆಗೆ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ಯಾರಿಗಿದೆ?

ಬೆಂಗಳೂರು: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿ ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡಿ, ಶಾಂತಿ ಕದಡುವ ನಿರ್ದಿಷ್ಟ ಸಂಘಟನೆಗಳನ್ನು ನಿಷೇಧಿಸಲು ದೇಶದಲ್ಲಿ 2002ರಲ್ಲಿ ಯುಎಪಿಎ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ದೇಶ ವಿರೋಧಿ ಕೃತ್ಯದಲ್ಲಿ ತೊಡಗಿರುವ ನಿರ್ಧಿಷ್ಟ ಸಂಘಟನೆಯನ್ನು ಈ ಕಾಯ್ದೆಯಡಿ ನಿಷೇಧಿಸಲು ಕೇಂದ್ರ ಗೃಹ ಇಲಾಖೆಗೆ ಅಧಿಕಾರ ಇದೆ.

ಆದರೆ, ನಿಷೇಧಕ್ಕೊಳಪಡುವ ಸಂಘಟನೆಯು ದೇಶ ವಿರೋಧಿ ಕೃತ್ಯ ಎಸಗಿರುವುದಕ್ಕೆ ಸಂಬಂಧಿಸಿದ ಬಲವಾದ ಸಾಕ್ಷ್ಯ ಒದಗಿಸಬೇಕಾಗುತ್ತದೆ. ನಿರ್ಧಿಷ್ಟ ಸಂಘಟನೆ ಪದೇಪದೆ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೆ, ಆ ದುಷ್ಕೃತ್ಯಗಳನ್ನು ವರದಿ ಮಾಡಿ ಆಯಾ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರಕ್ಕೆ ಈ ಸಂಘಟನೆ ನಿಷೇಧಿಸುವಂತೆ ವರದಿ ನೀಡಬೇಕು. ಕೆಲ ವರ್ಷಗಳಿಂದ ನಡೆಸಿದ ಕುಕೃತ್ಯಗಳ ಬಗ್ಗೆ ಸಾಕ್ಷ್ಯ, ದಾಖಲೆ ಸಮೇತ ವರದಿಯಲ್ಲಿ ಉಲ್ಲೇಖಿಸಿರಬೇಕು.

ರಾಜ್ಯ ಗೃಹ ಇಲಾಖೆಯು ಈ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳಿಸಿಕೊಡುತ್ತದೆ. ಸಂಘಟನೆ ಬಗ್ಗೆ ಆಂತರಿಕ ತನಿಖೆ ನಡೆಸಿ ಬಲವಾದ ಸಾಕ್ಷ್ಯ ಸಿಕ್ಕರೆ, ಸಂಘಟನೆ ವಿರುದ್ಧ ವರದಿ ನೀಡಿದ ರಾಜ್ಯದಲ್ಲಿ ಮಾತ್ರ ನಿಷೇಧಿಸಿ ಅಧಿಸೂಚನೆ ಹೊರಡಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.