ನ್ಯೂಸ್

ಬಡತನ ಯಾರಿಗೆ?

ಮೋಹನ್​ ಶೆಟ್ಟಿ

ಜಗತ್ತಿನಲ್ಲೆಲ್ಲ ಒಂದು ಕೂಗು ಕೇಳಿ ಬರುತ್ತಿದೆ. ನಾ ಬಡವ ನಾ ಸಿರಿವಂತ ಎಂಬುದು. ಸಾಕಷ್ಟು ಬೆಳ್ಳಿ-ಬಂಗಾರ, ದೊಡ್ಡ ಮನೆ, ಬಹಳ ಹೊಲ ಇದ್ದರೆ ಮಾತ್ರ ಸಿರಿವಂತ, ಇದೆಲ್ಲ ಇಲ್ಲದವ ಬಡವನೆಂಬ ಭ್ರಮೆ ನಮ್ಮೆಲ್ಲರದು. ಅಂತರಂಗದೊಳಗೆ ಭಕ್ತಿನಿಧಿ ಇದ್ದವರು ಶ್ರೀಮಂತರೆಂಬ ಸತ್ಯದ ಅರಿವು ನಮಗೆ ತಿಳಿಯದು. ಭಕ್ತರಿಗೆ ಬಡತನವಿದೆಯೇ ಎಂಬುದನ್ನು ಆಯ್ದಕ್ಕಿ ಲಕ್ಕಮ್ಮನ ಮಾತಿನಲ್ಲಿ ತಿಳಿಯೋಣ.

ಭಕ್ತಂಗೆ ಬಡತನ ಉಂಟೆ? ನಿತ್ಯಂಗೆ ಮರಣ ಉಂಟೆ?/ಭಕ್ತರು ಬಡವರೆಂದು ಮತ್ತೊಂದು ಕೊಟ್ಟಿಹೆನೆಂದು/ತಿಳಿದಡೆ ಮಾರಯ್ಯ ಪ್ರಿಯ ಅಮರೇಶ್ವರ/ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ. ಭಕ್ತಿ ಇಲ್ಲದವರೇ ಬಡವರು, ಭಕ್ತಿ ಇದ್ದವರೇ ಸಿರಿವಂತರು. ಸಿರಿವಂತಿಕೆ ಶಿವಭಕ್ತರಿಗಿಲ್ಲವೆಂದು ತಿಳಿದು ನಾವು ಉಪಕಾರ ಮಾಡಲು ಮುಂದಾಗುತ್ತೇವೆ. ಇಂತಹ ಜಗತ್ತಿನ ವಿಚಿತ್ರ ಕಂಡು ಆಯ್ದಕ್ಕಿ ಲಕ್ಕಮ್ಮಸರ್ವರಿಗೂ ಜ್ಞಾನವಾಗುವಂತೆ ತಿಳಿಸಿದ್ದಾಳೆ.

ಬಡತನ ಯಾರಿಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಶಿವಭಕ್ತರಿಗೆ ಬಡತನವಿದೆಯೇ? ನಿತ್ಯಂಗೆ ಅಂದರೆ ಶಿವನಿಗೆ ಮರಣವಿದೆಯೇ ಎಂದು ಕೇಳಿದ್ದಾಳೆ. ಭಕ್ತನು ದೇವರನ್ನು ನಂಬಿ ಬದುಕುವವನು. ಶಿವನು ಮಹಾದಾನಿ, ಅವನು ಅಂತರಂಗ ಬಹಿರಂಗದಲ್ಲಿ ದೊಡ್ಡ ಸಿರಿವಂತ. ಭಕ್ತಿ, ಜ್ಞಾನ ಮತ್ತು ಶಿವಯೋಗದಲ್ಲಿ ಸಿರಿವಂತರು ಎಲ್ಲದರಲ್ಲೂ ಸಿರಿವಂತರು. ಶಿವಭಕ್ತರು ಯಾವತ್ತಿಗೂ ದೊಡ್ಡವರು.

ಜಗತ್ತಿಗೂ ದೊಡ್ಡವರು. ಅತ್ಯಂತ ಕೆಚ್ಚೆದೆಯ ನುಡಿಯಿಂದ ಲಕ್ಕಮ್ಮ ಹೇಳುತ್ತಾಳೆ: ಭಕ್ತರು ಬಡವರೆಂದು ಸಹಾಯ ಮಾಡಲು ಹೋದರೆ ಹೇಗೆ? ಶಿವಭಕ್ತರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಶಿವಭಕ್ತರು ದುರಾಸೆ ಇಲ್ಲದವರು. ಭಕ್ತರಿಗೆ ಬಡತನ ಬರಬೇಕಾದರೆ ಶಿವನು ಸತ್ತಾಗ ಮಾತ್ರ. ಶಿವನಿಗೆ ಸಾವಿಲ್ಲ. ಅಮರೇಶ್ವರ ಲಿಂಗ ಎಲ್ಲಿವರೆಗೆ ಇರುವುದೋ ಅಲ್ಲಿವರೆಗೆ ಶಿವಭಕ್ತರು ಮಹಾ ಸುಖಿಗಳೆಂದು ಅವರನ್ನು ಅರಿಯಬೇಕು. ಶಿವನು ನಿತ್ಯ ಸತ್ಯ. ಶಿವಭಕ್ತರು ಸದಾ ನಿತ್ಯ ಸುಖಿ ಹಾಗೂ ಸಿರಿವಂತರೂ ಆಗಿರುತ್ತಾರೆ. ಇದನ್ನರಿತು ನಿತ್ಯ ಸುಖಿಗಳಾಗಿ ಬದುಕುವುದನ್ನು ಕಲಿಯಬೇಕು. ಆಯ್ದಕ್ಕಿ ಲಕ್ಕಮ್ಮ ಕೇವಲ ಹೇಳಿಲ್ಲ, ಹೇಳಿದ್ದನ್ನು ಆಚರಣೆಯಲ್ಲಿ ತಂದ ಶಿವಶರಣೆ.