ಶಿವಾನಂದ ತಗಡೂರು
ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್) ರಾಜ್ಯದಲ್ಲಿ ಹೈನೋದ್ಯಮವನ್ನು ಪ್ರೋತ್ಸಾಹಿಸಿ, ಬೆಳೆಸಿದ ಪರಿಣಾಮವಾಗಿ ನಾಡಿನ ಉದ್ದಗಲಕ್ಕೂ ಹಾಲಿನ ಡೇರಿಗಳು ಹರಡಿಕೊಂಡಿವೆ. ಇದೀಗ ಗಡಿ ದಾಟಿ ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ, ಗೋವಾ ಸೇರಿದಂತೆ ಎಲ್ಲೆಡೆ ವ್ಯಾಪಿಸಿವೆ. ರೈತ ಸಮುದಾಯದ ಅಭ್ಯುದಯದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆಎಂಎಫ್ಗೆ ಹಾಲಿನ ಹೊಳೆಯೇ ಹರಿದು ಬರುತ್ತಿದ್ದು ಪ್ರತಿ ದಿನದ ಸಂಗ್ರಹ 1 ಕೋಟಿ ಲೀಟರ್ ದಾಟಿರುವುದು ದಾಖಲೆಯಾಗಿದೆ. ಹಾಲು ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ ಪರಿಣಾಮ ಐದು ದಶಕಗಳಲ್ಲಿ ಹೈನೋದ್ಯಮದಲ್ಲಿ ಕ್ರಾಂತಿಯೇ ಆಗಿದೆ.
ಇಡೀ ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದಿದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. ಸುದೀರ್ಘ ಇತಿಹಾಸ ಹೊಂದಿರುವ ಕೆಎಂಎಫ್ ಕೇವಲ ಹಾಲು, ಮೊಸರು, ಮಜ್ಜಿಗೆ ಮಾರಾಟ ಮಾಡುತ್ತಿಲ್ಲ. ಬದಲಿಗೆ ಬೆಣ್ಣೆ, ತುಪ್ಪ, ಐಸ್ಕ್ರೀಂ, ಬಿಸ್ಕೆಟ್, ಚಾಕಲೇಟ್ಗಳನ್ನು ಕೂಡ ತಯಾರಿಸಿ ಮಾರಾಟ ಮಾಡುತ್ತಿದೆ. ಇದಲ್ಲದೆ, ಜಾಮೂನು, ರಸಗುಲ್ಲಾ, ಪೇಡಾ ಸೇರಿದಂತೆ ಹಲವಾರು ಸಿಹಿ ಉತ್ಪನ್ನಗಳೂ ಇವೆ. ಎಲ್ಲವೂ ಸೇರಿ 150ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳು ನಂದಿನಿ ಬ್ರ್ಯಾಂಡ್ನಡಿ ಮಾರಾಟ ಆಗುತ್ತಿವೆ.
ದಾಖಲೆಯ ಒಳಹರಿವು: ಕೆಎಂಎಫ್ಗೆ ನಿತ್ಯ ಬರುತ್ತಿರುವ ಹಾಲಿನ ಪ್ರಮಾಣ ಕಳೆದ ವರ್ಷವೇ 1 ಕೋಟಿ ಲೀಟರ್ ದಾಟಿತ್ತು. ಈ ವರ್ಷವೂ ಮೇ ತಿಂಗಳಲ್ಲಿ ಕೋಟಿ ಲೀಟರ್ಗೆ ಹೋಗಿತ್ತು. ಸದ್ಯ ಪ್ರತಿದಿನ 1.3 ಕೋಟಿ ಲೀಟರ್ ಹಾಲು ಕೆಎಂಎಫ್ಗೆ ಬರುತ್ತಿದೆ. ಪ್ರತಿ ಲೀಟರ್ಗೆ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ರೈತರ ಖಾತೆಗೆ ನಿತ್ಯ 32 ಕೋಟಿ ರೂ.: ರೈತರಿಗೆ ಹೈನೋದ್ಯಮವೇ ಈಗಲೂ ಕುಟುಂಬದ ಆದಾಯದ ಮೂಲ. ಲಕ್ಷಾಂತರ ಕುಟುಂಬಗಳು ನಿತ್ಯದ ಖರ್ಚಿಗೂ ಹಾಲು ಮಾರಾಟವನ್ನೇ ನಂಬಿಕೊಂಡಿವೆ. ಪ್ರತಿ ದಿನ 32 ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಏಕೈಕ ಸಂಸ್ಥೆ ಕೆಎಂಎಫ್ ಎನ್ನುವುದು ವಿಶೇಷ.
ಡೇರಿಯಲ್ಲಿ 23 ಲಕ್ಷ ಸದಸ್ಯರು: 1975ರಲ್ಲಿ ಕೇವಲ 4 ಹಾಲು ಒಕ್ಕೂಟಗಳೊಂದಿಗೆ ಪ್ರಾರಂಭವಾದ ಕೆಎಂಎಫ್ ಇಂದು 16 ಹಾಲು ಒಕ್ಕೂಟಗಳ ಗುಚ್ಛವಾಗಿ ಬೃಹದಾಕಾರವಾಗಿ ಬೆಳೆದು ನಿಂತಿದೆ. 16 ಸಾವಿರಕ್ಕೂ ಹೆಚ್ಚು ಹಾಲಿನ ಡೇರಿಗಳಲ್ಲಿ 26,840 ಸದಸ್ಯರಿದ್ದಾರೆ. ಪ್ರತಿ ವರ್ಷ ಹಾಲಿನ ಡೇರಿ ಮತ್ತು ಸದಸ್ಯರ ಸಂಖ್ಯೆ ಮಾತ್ರವಲ್ಲ, ಹಾಲು ಉತ್ಪಾದನೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಮಾರುಕಟ್ಟೆ ಸ್ಥಿತಿಗತಿ: ಸಂಗ್ರಹವಾಗುತ್ತಿರುವ 1 ಕೋಟಿ ಲೀಟರ್ ಹಾಲಿನಲ್ಲಿ ನಿತ್ಯ 70 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಸುಮಾರು 20 ಲಕ್ಷ ಲೀಟರ್ ಹಾಲನ್ನು ಪುಡಿ ಮಾಡಲು ಉಪಯೋಗಿಸಲಾಗುತ್ತಿದೆ.
5 ದಿನ ಕ್ಷೀರಭಾಗ್ಯ: ಶಾಲಾ ಮಕ್ಕಳು ಮತ್ತು ಅಂಗನವಾಡಿ ಮಕ್ಕಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ಕ್ಷೀರಭಾಗ್ಯ ಯೋಜನೆಗೆ ಹಾಲಿನ ಪುಡಿಯನ್ನು ಬಳಸಿಕೊಳ್ಳಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆ ಇಲ್ಲದಿದ್ದರೆ, ಹೆಚ್ಚುವರಿ ಹಾಲಿನ ಪುಡಿ ಗೋದಾಮಿನಲ್ಲಿ ಕೊಳೆಯಬೇಕಾದ ಸಂದರ್ಭ ಎದುರಾಗಿತ್ತು. ವಾರದಲ್ಲಿ 5 ದಿನ ಕ್ಷೀರಭಾಗ್ಯ ಯೋಜನೆ ಜಾರಿಗೆ ಬಂದಿದ್ದರಿಂದ ಕೆಎಂಎಫ್ಗೆ ನಷ್ಟದ ಹೊರೆ ತಪ್ಪಿದೆ. ಕೆಎಂಎಫ್ ಅಸ್ತಿತ್ವಕ್ಕೆ ಬಂದಿದ್ದು: ವಿಶ್ವಬ್ಯಾಂಕ್ ಸಹಯೋಗ ದೊಂದಿಗೆ 1975ರಲ್ಲಿ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಹಕಾರಿ ತತ್ವದ ಆಧಾರದ ಮೇಲೆ ಕರ್ನಾಟಕ ಹೈನು ಅಭಿವೃದ್ಧಿ ನಿಗಮ (ಕೆಡಿಡಿಸಿ) ಪ್ರಾರಂಭವಾಯಿತು. 1984ರಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಸ್ಥಾಪನೆಯಾದರೆ, 1987ರಲ್ಲಿ ಹೈನೋದ್ಯಮ ಚಟುವಟಿಕೆಯನ್ನು 13 ಜಿಲ್ಲೆಗಳ ವ್ಯಾಪ್ತಿಗೆ ವಿಸ್ತರಿಸಲಾಯಿತು. ಈಗ 16 ಹಾಲು ಒಕ್ಕೂಟಗಳಲ್ಲಿ ಎಲ್ಲ ಜಿಲ್ಲೆಗಳು ಸೇರಿಕೊಂಡಿವೆ.
ಮಕ್ಕಳಿಗೆ ಅಮೃತ: ಮಕ್ಕಳ ದೇಹದ ಬೆಳವಣಿಗೆಗೆ ಮತ್ತು ಪೋಷಣೆಗೆ ಬೇಕಾದ ಹೆಚ್ಚಿನ ಅಂಶಗಳೆಲ್ಲವನ್ನೂ ಹಾಲು ಒಳಗೊಂಡಿದೆ. ಎಮ್ಮೆ ಹಾಲಿಗಿಂತ ಆಕಳ ಹಾಲು ತಾಯಿಯ ಎದೆಹಾಲಿಗೆ ಸರಿಸಮಾನವಾದದ್ದು. ಪ್ರೊಟೀನ್ ಅಂಶ: ತಾಯಿಯ ಎದೆಹಾಲಿನಲ್ಲಿ ಶೇಕಡ 1.1 ಪೊ›ಟೀನ್, ಶೇ. 4.2 ಕೊಬ್ಬು, ಶೇ. 7 ಲ್ಯಾಕ್ಟೋಸ್ ಇದ್ದು ಪ್ರತಿ 100 ಗ್ರಾಂ ಹಾಲು 72 ಕಿಲೋ ಕ್ಯಾಲರಿಗಳಷ್ಟು ಚೈತನ್ಯವನ್ನು ಒದಗಿಸುತ್ತದೆ. ಹಸುವಿನ ಹಾಲಿನಲ್ಲಿ ಶೇ. 3.4 ಪೊ›ಟೀನ್, ಶೇ. 3.6 ಕೊಬ್ಬು, ಶೇ. 4.6 ಲ್ಯಾಕ್ಟೋಸ್ ಇದ್ದು ಪ್ರತಿ 100 ಗ್ರಾಂ ಹಾಲು 66 ಕಿಲೋ ಕ್ಯಾಲರಿಗಳಷ್ಟು ಚೈತನ್ಯವನ್ನು ಒದಗಿಸುತ್ತದೆ.