ಕುತ್ತೃಷ್ಣೋಪಶಮಂ ತದ್ವತ್ ಶೀತಾದ್ಯುಪಶಮಂ ಸುಖಂ |
ಮನ್ಯತೇ ಬಾಲಬುದ್ಧಿತ್ವಾತ್ ದುಃಖಮೇವ ಹಿ ತತ್ಪುನಃ ||
ಹಸಿವು ಬಾಯಾರಿಕೆಗಳ ಉಪಶಮ ಮತ್ತು ಚಳಿ ಮೊದಲಾದವುಗಳ ಉಪಶಮ ಇವನ್ನೇ ಬುದ್ದಿಯಿಲ್ಲದವರು ಸುಖವೆಂದು ಭಾವಿಸುತ್ತಾರೆ. ಅವುಗಳೂ ಸಹ ದುಃಖವೇ. ಮನುಷ್ಯನಿಗೆ ಮೂರು ರೀತಿಯ ಅನುಭವಗಳು ಆಗುತ್ತವೆ. ಒಂದು ದುಃಖದ ಅನುಭವ, ಇನ್ನೊಂದು ಸುಖದ ಅನುಭವ ಮತ್ತೊಂದು ಆನಂದದ ಅನುಭವ. ಸುಖ ಮತ್ತು ದುಃಖದ ಅನುಭವಗಳು ಹೊರಗಡೆಯ ವಿಷಯ ವಸ್ತುಗಳ ಭೋಗದಿಂದ ಪ್ರಾಪ್ತಿಯಾಗುತ್ತವೆ.
ಹೊರಗಡೆಯ ವಸ್ತುಗಳನ್ನು ನಾವು ಬಯಸುತ್ತೇವೆ, ಅದು ಸಿಕ್ಕಾಗ ಸುಖ, ಸಿಗದಿದ್ದಾಗ ದುಃಖ. ಹೊರಗಡೆಯ ಪ್ರಿಯವಾಗಿರುವ ವಸ್ತುಗಳು ನಮ್ಮ ಬಳಿ ಬಂದಾಗ ಸುಖದ ಅನುಭವ, ಅದೇ ದೂರವಾದಾಗ ದುಃಖದ ಅನುಭವ. ಅಪ್ರಿಯರೊಂದಿಗೆ ಭೇಟಿಯಾದರೆ ದುಃಖ, ಪ್ರಿಯರೊಂದಿಗೆ ಭೇಟಿಯಾದರೆ ಸುಖ. ಹೊರಗಡೆ ಇರುವ ಈ ಜಗತ್ತಿನ ಸಂಬಂಧದಲ್ಲಿ ಈ ಎರಡು ಅನುಭವಗಳು ನಮಗೆ ಆಗುತ್ತಲೇ ಇರುತ್ತವೆ. ಆನಂದದ ಅನುಭವ ಹೊರಗಡೆಯ ವಸ್ತುಗಳಿಂದ ಸಿಗುವಂಥದಲ್ಲ. ಆನಂದ ಸುಖವಲ್ಲ, ಆನಂದ ಮತ್ತು ಸುಖದ ನಡುವೆ ಅಂತರವಿದೆ, ಸುಖವು ನಮಗೆ ನಮ್ಮ ಜೀವನದಲ್ಲಿ ದುಃಖದ ಅಭಾವವಾಗಿದೆ. ಎಲ್ಲಿ ದುಃಖವಿಲ್ಲ ಅದನ್ನು ಸುಖ ಎಂದು ನಾವು ಕರೆಯುತ್ತಿದ್ದೇವೆ.
ದುಃಖವು ಸುಖದ ಅಭಾವವಾಗಿದೆ. ಎಲ್ಲಿ ಸುಖವಿಲ್ಲ ಅಲ್ಲಿ ದುಃಖದ ಅನುಭವ. ಆನಂದ, ದುಃಖ ಮತ್ತು ಸುಖದ ಎರಡರ ಅಭಾವವಾಗಿದೆ. ಯಾವಾಗ ನಮ್ಮ ಮನಸ್ಸು ಪರಿಪೂರ್ಣವಾಗಿ ಶಾಂತ ಸ್ಥಿತಿಯಲ್ಲಿ ನಿಲ್ಲುವುದೋ ಆಗಿನ ಸ್ಥಿತಿಯ ಹೆಸರು ಆನಂದ. ಹೊರಗಡೆಯ ವಿಷಯವಸ್ತುಗಳು ನಮ್ಮ ಅಂತಃಕರಣದಲ್ಲಿ ಯಾವುದೇ ರೀತಿಯ ಪ್ರಭಾವವನ್ನು ಬೀರದೇ ಇದ್ದಾಗ, ಅಲ್ಲಿ ದುಃಖವೂ ಇಲ್ಲ, ಸುಖವೂ ಇಲ್ಲ. ಅದನ್ನೇ ಆನಂದ ಎಂದು ಕರೆಯುತ್ತೇವೆ.