ನ್ಯೂಸ್

ರಾಹುಲ್ ಗಾಂಧಿ ಕಾಲಿಟ್ಟು ಹೋದಲ್ಲಿ ಬಿಜೆಪಿಗೆ ಜಯ: ನನ್ನ ಗೆಲುವಿಗೂ ಅವರು ಬಂದು ಹೋಗಲಿ ಎಂದ ಬಿಜೆಪಿ ಅಭ್ಯರ್ಥಿ

ಗದಗ: ರಾಜ್ಯದಲ್ಲಿ ಚುನಾವಣೆ ಕಾವೇರಿದ್ದು, ಪ್ರಚಾರದ ಭರಾಟೆಯಲ್ಲಿ ಟೀಕೆಗಳ ಸುರಿಮಳೆಯೊಂದಿಗೆ, ಆರೋಪ-ಪ್ರತ್ಯಾರೋಪಗಳ ವಾಗ್ದಾಳಿಯೂ ನಡೆಯಲಾರಂಭಿಸಿದೆ. ಈ ಮಧ್ಯೆ ಬಿಜೆಪಿಯ ಅಭ್ಯರ್ಥಿಯೊಬ್ಬರು ತಮ್ಮ ಗೆಲುವಿಗಾಗಿ ರಾಹುಲ್ ಗಾಂಧಿ ಬರಲಿ ಎಂದೂ ಮಾರ್ಮಿಕವಾಗಿ ಆಶಿಸಿದ್ದಾರೆ.

ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ್ ಇಂದು ಗದಗದಲ್ಲಿ ಮಾತನಾಡಿ, ಕಾಂಗ್ರೆಸ್​ನ ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಿದ್ದು, ರಾಹುಲ್ ಗಾಂಧಿ ಕಾಲಿಟ್ಟು ಹೋದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯ ರಾಜ್ಯ ಪ್ರವಾಸವನ್ನು ಲೇವಡಿ ಮಾಡಿದ ಸಿ.ಸಿ.ಪಾಟೀಲ್, ಅವರು ರಾಷ್ಟ್ರದ ತುಂಬ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಆದರೆ ಆ ಯಾತ್ರೆ ಬಳಿಕ 176 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಅದರಲ್ಲಿ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ ಎಂದರು. ರಾಹುಲ್ ಗಾಂಧಿ ಆದಷ್ಟು ಬೇಗ ಗದಗಕ್ಕೂ ಬಂದು ಹೋಗಲಿ ಎಂದಿರುವ ಅವರು, ಬಾಗಲಕೋಟೆ, ವಿಜಯಪುರ ಬಿಜೆಪಿ ಅಭ್ಯರ್ಥಿಗಳು ಪುಣ್ಯವಂತರು ಎಂದು ಹೇಳಿದ್ದಾರೆ.