ನ್ಯೂಸ್

ನನ್ನ ಪತಿ ಎಲ್ಲಿ ಎಂದು ಟ್ವೀಟ್​ ಮಾಡಿದ ಮಹಿಳೆ ಡಾಕ್ಟರ್​ ನೀಡಿದ ಉತ್ತರದಿಂದ ಕುಸಿದು ಬಿದ್ದರು!

ಹೈದ್ರಾಬಾದ್​: ನನ್ನ ಪತಿ ಎಲ್ಲಿ ಎಂದು ಟ್ವೀಟ್​ ಮಾಡಿದ್ದ ಮಹಿಳೆಗೆ ವೈದ್ಯರು ನೀಡಿದ ಉತ್ತರದಿಂದ ಆಕೆ ಕುಸಿದು ಬಿದ್ದರು.

ನಿಮ್ಮ ಪತಿ ಕೊರೊನಾ ವೈರಸ್​ ಸೋಂಕಿನಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿದ್ದರೂ ಫಲಕಾರಿಯಾಗದೆ ಮೃತಪಟ್ಟರು. ಮೃತ ದೇಹವನ್ನು ಪಡೆಯಲು ಕುಟುಂಬದವರು ಬಾರದ ಹಿನ್ನೆಲೆಯಲ್ಲಿ ಪೊಲೀಸರು ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಿದರು ಎಂದು ವೈದ್ಯರು ನೀಡಿದ ಉತ್ತರ ಕೇಳಿ ಮಹಿಳೆ ಆತಂಕಕ್ಕೆ ಒಳಗಾಗಿದ್ದಾರೆ.

ನನ್ನ ಪತಿ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಈಗ ಅವರ ಬಗ್ಗೆ ಮಾಹಿತಿ ಇಲ್ಲ. ಆಸ್ಪತ್ರೆಯಲ್ಲಿ ಅವರು ಕಾಣುತ್ತಿಲ್ಲ ಎಂದು ಅಲಂಪಲ್ಲಿ ಮಾಧವಿ ಟ್ವೀಟ್​ ಮಾಡಿದ್ದರು. ಟ್ವೀಟ್​ ಅನ್ನು ತೆಲಂಗಾಣ ಸಿಎಂ ಚಂದ್ರಶೇಖರರಾವ್​ ಅವರ ಪುತ್ರ ಕೆ.ಟಿ.ರಾಮರಾವ್​ ಅವರಿಗೂ ಟ್ಯಾಗ್​ ಮಾಡಿದ್ದರು.

ಮಹಿಳೆ ಟ್ವೀಟ್​ ಮಾಡುತ್ತಲೆ ಗಾಂಧಿ ಎದೆ ರೋಗಗಳ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಎಂ.ರಾಜರಾವ್​ ಅವರು ಮಹಿಳೆಗೆ ಉತ್ತರ ನೀಡಿದರು.

ನಿಮ್ಮ ಪತಿ ಮಧುಸೂಧನ್ ಅವರನ್ನು ಆಸ್ಪತ್ರೆಗೆ ಏ.30ರಂದು ದಾಖಲಿಸಲಾಯಿತು. ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ಸೋಂಕು ಹರಿಡುರುವದು ದೃಢಪಟ್ಟಿತು. ಕೂಡಲೇ ಚಿಕಿತ್ಸೆ ಮುಂದುವರೆಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೇ 1ರಂದು ಮೃತರಾದರು. ಕೂಡಲೇ ಅವರ ಕುಟುಂಬದವರಿಗೆ ಮಾಹಿತಿ ನೀಡುವಂತೆ ವೈದ್ಯರಿಗೆ ಹಾಗೂ ಪೊಲೀಸರಿಗೆ ತಿಳಿಸಲಾಯಿತು.

ವೈದ್ಯರು ಹಾಗೂ ಪೊಲೀಸರು ಕುಟುಂಬದವರನ್ನು ಸಂಪರ್ಕಿಸಿದಾಗ ಶವ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರು ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ನೀತಿಯಂತೆ ಪೊಲೀಸರು ಶವ ಸಂಸ್ಕಾರ ನಡೆಸಿದರು. ಪೊಲೀಸರಿಗೆ ಶವ ಹಸ್ತಾಂತರ ಮಾಡಿದ್ದಕ್ಕೆ ಸಹಿ ಪಡೆಯಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ ಎಂದು ವೈದ್ಯರು ಉತ್ತರ ನೀಡಿದರು.

ಪೊಲೀಸರು ಹಾಗೂ ವೈದ್ಯರು ಕುಟುಂಬದವರಿಗೆ ಮಾಹಿತಿ ನೀಡದೆ ಶವ ಸಂಸ್ಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. (ಏಜೆನ್ಸೀಸ್​)