ಈ ಜಗತ್ತಿನಲ್ಲಿ ಕಾಣುವ ಅದ್ಭುತವೆಂದರೆ ಯಾರೂ, ಎಂದೂ, ಎಲ್ಲೂ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಿಲ್ಲ! ಸಾಕ್ಷಾತ್ಕಾರ ಮಾಡಿಕೊಂಡವರು ಎಲ್ಲೂ ಯಾವ ರೀತಿಯಲ್ಲೂ ಜಾಹೀರಾತಿನ ಮೂಲಕ ಸಾಕ್ಷಾತ್ಕಾರ ಪಡೆದುಕೊಂಡಿದ್ದೇನೆಂದು ಪ್ರಸಾರ ಮಾಡುವುದಿಲ್ಲ. ಈಗ ನಾವು ಕಾಣುತ್ತಿರುವ ‘ಭಕ್ತರು’ ಎಂದರೆ ತಮ್ಮ ತಮ್ಮ
ಸನಾತನಧರ್ಮದಲ್ಲಿ ಮೊದಲ ಆದ್ಯತೆ ದಯಾಮಯನಾದ ಭಗವಚ್ಛಕ್ತಿಗೆ. ನಿಜವಾದ ಸಾಧಕ ಏನೇ ತೊಂದರೆ ಬಂದಾಗ್ಯೂ ಸಾಧನಾಪಥದಲ್ಲಿ ಸಾಗುತ್ತಿರುತ್ತಾನೆ. ಈ ವಿಚಾರವನ್ನು ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಅದ್ಭುತ ರೀತಿಯಲ್ಲಿ ವಿವರಿಸುತ್ತಿದ್ದರು.
ಭಕ್ತ ಈಶಾನನಿಗೆ ಕುರಿತು ತಿಳಿಸುತ್ತಾರೆ; ‘ಇನ್ನೊಂದು ವಿಷಯ ಕೇಳು, ಅತಿಯಾಗಿ ಬಾಹ್ಯಾಚಾರದಲ್ಲಿ ತೊಡಗಬೇಡ. ಒಮ್ಮೆ ಒಬ್ಬ ಸಾಧುವಿಗೆ ತಡೆಯಲಾರದ ಬಾಯಾರಿಕೆಯಾಯಿತು. ಚಕ್ಕಳ ಚೀಲದಲ್ಲಿ ನೀರು ಹೊತ್ತುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿ ನೀರು ಕೊಡಲು ಮುಂದೆ ಬಂದ. ಸಾಧು ಆತನನ್ನು ಕೇಳಿದ; ‘ಏನು ನಿನ್ನ ಚೀಲವನ್ನು ಚೆನ್ನಾಗಿ ತೊಳೆದಿದ್ದೀಯಾ?’ ಆತ ಹೇಳಿದ, ‘ಸ್ವಾಮಿ, ನನ್ನ ಚೀಲ ಸಂಪೂರ್ಣ ಶುದ್ಧವಾಗಿದೆ. ಆದರೆ ನಿಮ್ಮ ಚೀಲದೊಳಗೆ ಮಲ-ಮೂತ್ರ, ಇನ್ನೂ ಏನೇನೋ ಕಶ್ಮಲ ತುಂಬಿವೆ. ಆದ್ದರಿಂದ ಹೇಳುತ್ತೇನೆ, ನೀವು ನಿಸ್ಸಂಕೋಚವಾಗಿ ನನ್ನ ಚೀಲದಿಂದ ನೀರು ಕುಡಿಯಬಹುದು. ಇದರಿಂದ ನಿಮಗೆ ಯಾವ ಕೇಡೂ ಸಂಭವಿಸದು.’ ಆ ನೀರು ಹೊರುವ ವ್ಯಕ್ತಿ ‘ನಿಮ್ಮ ಚೀಲ’ ಎಂದುದರ ಅರ್ಥ ದೇಹ, ಹೊಟ್ಟೆ ಇತ್ಯಾದಿ. ‘ಭಗವನ್ನಾಮದಲ್ಲಿ ಶ್ರದ್ಧೆ ಇಡು. ಬಳಿಕ ನೀನು ತೀರ್ಥಾದಿಗಳಿಗೆ ಹೋಗಬೇಕಾದ ಯಾವ ಆವಶ್ಯಕತೆಯೂ ಇರದು’ ಎಂದು ತಿಳಿಸಿದ ಪರಮಹಂಸರು ಭಾವೋನ್ಮತ್ತರಾಗಿ ಹಾಡುತ್ತಿದ್ದಾರೆ:
ಏತಕೆ, ಇನ್ನೇತಕೆ? ಕಾಶಿ, ಕಾಂಚಿಯೋ,
ಗಯೆಯೋ, ಗಂಗೆಯೋ ಪುಣ್ಯ ಕ್ಷೇತ್ರಗಳೇತಕೆ?
ಭವತಾರಿಣಿಯ ದಿವ್ಯನಾಮದಲ್ಲಿ ಶ್ರದ್ಧೆ ಇದ್ದು
ಹೃನ್ಮಂದಿರದಲ್ಲಿ ಅವಳು ವಿರಾಜಮಾನಳಾಗಿದ್ದಾಗ...
ಎಲ್ಲರೂ ಈ ದಿವ್ಯ ಗಾನಾಮೃತವನ್ನು ಸವಿಯುತ್ತಿದ್ದಾರೆ. ಪರಮಹಂಸರು; ‘ನಿಜವಾದ ಶ್ರದ್ಧೆಯಿಂದಲೇ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡು ಬಿಡಬಹುದು. ಆತನ ಸಂಬಂಧವಾಗಿ ಹೇಳಿರುವುದರಲ್ಲೆಲ್ಲ ಪೂರ್ಣ ಶ್ರದ್ಧೆ ಇಡುವುದಾದರೆ ಸಾಕ್ಷಾತ್ಕಾರ ಇನ್ನೂ ಬೇಗ ದೊರೆತುಬಿಡುತ್ತದೆ.’ ಈ ರೀತಿಯಲ್ಲಿ ಪರಮಹಂಸರು ‘ಶ್ರದ್ಧೆ’ಯೇ ಸಾಕ್ಷಾತ್ಕಾರದ ಮೂಲ ಎನ್ನುತ್ತಾರೆ. ಹೀಗೆ ವಿವರಿಸುತ್ತ ಪರಮಹಂಸರು ಸಮಾಧಿಸ್ಥರಾಗಿದ್ದಾರೆ. ಸಮಾಧಿಸ್ಥಿತಿಯಲ್ಲಿ ಅವರು ಭಗವತಿಗೆ ಹೇಳುತ್ತಿದ್ದಾರೆ; ‘ತಾಯೆ, ಬೇಕಾಗಿರುವುದು ಶ್ರದ್ಧೆ, ಈ ಹಾಳು ಪ್ರಾಪಂಚಿಕ ವಿಚಾರ ಎಂಬುದು ತೊಲಗಿಹೋಗಲಿ, ಅದು ನಾಶವಾಗಲಿ! ಶ್ರದ್ಧೆ ಬೇಕು, ಗುರುವಾಕ್ಯದಲ್ಲಿ ಶ್ರದ್ಧೆ, ಬಾಲಕನಂತಹ ಶ್ರದ್ಧೆ...’. ಪರಮಹಂಸರು ಭಕ್ತರಿಗೆ ಶ್ರದ್ಧೆಯ ಬಗ್ಗೆ ಉದಾಹರಣೆಗಳನ್ನು ನೀಡುತ್ತ ರಾಮಾಯಣದ ಈ ಸಂದರ್ಭವನ್ನು ವಿವರಿಸುತ್ತಾರೆ; ‘ರಾಮಲಕ್ಷ್ಮಣರು ಪಂಪಾಸರೋವರಕ್ಕೆ ಹೋಗಿದ್ದರು. ಅಲ್ಲಿ ಒಂದು ಕಾಗೆ ನೀರು ಕುಡಿಯಲು ಆತುರದಿಂದ ಮತ್ತೆ ಮತ್ತೆ ಆ ಸರೋವರದ ದಡದ ಹತ್ತಿರ ಹೋಗುತ್ತ ನೀರನ್ನು ಮಾತ್ರ ಕುಡಿಯದೆ ಹಿಂದಿರುಗುತ್ತಿರುವುದನ್ನು ಲಕ್ಷ್ಮಣ ನೋಡಿದ. ಆತ ಕಾರಣ ಕೇಳಲಾಗಿ ಶ್ರೀರಾಮ ಹೇಳಿದ, ‘‘ತಮ್ಮ, ಇದು ಪರಮ ಭಕ್ತ ಕಾಗೆ. ಅಹರ್ನಿಶಿ ಇದು ರಾಮನಾಮವನ್ನು ಜಪಿಸುತ್ತಿದೆ. ನೀರಡಿಕೆಯಿಂದ ಗಂಟಲು ಒಣಗಿ ಬತ್ತಿ ಹೋಗುತ್ತಿದೆ. ಆದರೂ ಅದಕ್ಕೆ ನೀರು ಕುಡಿಯಲು ಆಗುತ್ತಿಲ್ಲ. ಅದು ಯೋಚಿಸುತ್ತಿದೆ, ‘ನೀರು ಕುಡಿಯಲು ಹೋದರೆ ಆ ಸಮಯದಲ್ಲಿ ರಾಮನಾಮ ಜಪ ನಿಂತು ಹೋಗುವುದಲ್ಲ, ಏನು ಮಾಡುವುದು?’’ ಎಂದು’. ಇದು ನೈಜ ಶ್ರದ್ಧಾವಂತರ ಪ್ರಯತ್ನ.
ಪರಮಹಂಸರು ಆಗಾಗ್ಗೆ ಭಕ್ತರೊಂದಿಗೆ ಕೀರ್ತನಸೇವೆಯಲ್ಲಿ ತಲ್ಲೀನರಾಗುತ್ತಿದ್ದರು. ಅಂಥ ಒಂದು ದಿನ ಭಕ್ತ ಶ್ರೀಧರಸೇನನ ಮನೆಯಲ್ಲಿ ದುರ್ಗಾಪೂಜೆಯ ಮಹೋತ್ಸವ. ಶ್ರೀ ವೈಷ್ಣವಚರಣ ಹಾಗೂ ಅನೇಕ ಕೀರ್ತನಕಾರರೂ ಅಲ್ಲಿ ಬಂದಿದ್ದಾರೆ. ಪರಮಹಂಸರು ಮಧುರ ಕಂಠದಿಂದ ಹಾಡುತ್ತಿದ್ದಾರೆ. ವೈಷ್ಣವಚರಣನೂ ಒಂದು ಕೀರ್ತನೆ ಹಾಡುತ್ತಾನೆ. ಅದೇ ಪರಮಹಂಸರನ್ನು ಭಾವಸಮಾಧಿಗೆ ಕರೆದೊಯ್ಯುತ್ತಿತ್ತು. ‘ಶ್ರದ್ಧೆಯ ಸರೋವರದಿ ತಾಯ ನಾಮದ ನೌಕೆ ತೇಲುತಿದೆ ನೋಡು...’ ಈ ಹಾಡನ್ನು ಕೇಳಿದಾಕ್ಷಣ ಪರಮಹಂಸರು ಭಾವಸಮಾಧಿಯನ್ನು ಹೊಂದುತ್ತಿದ್ದರು. ಸ್ವಾಮಿ ವಿವೇಕಾನಂದರು ಅಂದಿನ ಯುವ ಸಂನ್ಯಾಸಿಗಳನ್ನು ಕೂಡಿಕೊಂಡು ಧ್ಯಾನ, ಜಪಾದಿಗಳ ಬಳಿ ಕಬೀರದಾಸರ ಈ ಗೀತೆಯನ್ನು ಹಾಡುತ್ತಿದ್ದರು.
ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ
ನಿನ್ನ ಬಳಿಯೇ ನಾನು ವಾಸಿಸಿರುವೇ .....
ಗುಡಿ ಮಸೀದಿಯಲ್ಲಿಲ್ಲ, ಕಾಶಿ ಕೈಲಾಸದಲ್ಲೋ
ದ್ವಾರಕೆ ಅಯೋಧ್ಯೆಯಲ್ಲಿ ದೊರೆವನಲ್ಲ ?
ಶ್ರದ್ಧೆ ಎಲ್ಲಿದೆಯೋ ಅಲ್ಲಿ ದೊರೆಯುವೆ ನಾನು
ನನಗಾಗಿ ಹುಡುಕಿದರೆ ದೊರೆವೆ ನಾನು...
ಭಗವಂತನು ಎಲ್ಲಿ ದೊರೆಯುತ್ತಾನೆ ಎಂಬ ಪ್ರಶ್ನೆಗೆ ಈ ಹಾಡಿನ ನುಡಿಗಳಲ್ಲಿ ಸ್ಪುಟವಾದ ಉತ್ತರ ದೊರೆಯುತ್ತಿತ್ತು ಎನ್ನಬಹುದು.
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)
(ಪ್ರತಿಕ್ರಿಯಿಸಿ: swajapa@gmail.com)
ನಾಳೆ ವೇದಕಾಲೀನ ಜ್ಞಾನ ಕುರಿತ ಅಂಕಣ ‘ಪ್ರಾಚೀನ ಜ್ಞಾನ’