ನ್ಯೂಸ್

ಲಾಕ್​ಡೌನ್​ ಯಾವಾಗ ಅಂತ್ಯವಾಗುತ್ತೆ...? 14ಕ್ಕೆ ಮುಗಿಯುತ್ತಾ, ವಿಸ್ತರಣೆ ಆಗುತ್ತಾ...?

ಬೆಂಗಳೂರು: ಕರೊನಾ ವೈರಸ್​ ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಮಾ.25ರಿಂದ ಆರಂಭವಾಗಿ ಏಪ್ರಿಲ್​​ 14ರವರೆಗೆ ಲಾಕ್​ಡೌನ್​ ಘೋಷಿಸಿದೆ. ಲಾಕ್​ಡೌನ್​ ಅವಧಿಯಲ್ಲಿ ಬಸ್ಸು, ರೈಲು, ಮೆಟ್ರೋರೈಲು ಮತ್ತು ವಿಮಾನ ಸೇರಿ ಎಲ್ಲ ಬಗೆಯ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ವೈಯಕ್ತಿಕ ವಾಹನ ಬಳಕೆಯನ್ನೂ ನಿರ್ಬಂಧಿಸಲಾಗಿದೆ. ಅಗತ್ಯಸೇವೆಗಳನ್ನು ಹೊರತುಪಡಿಸಿ, ಬೇರಾವುದೇ ಕಚೇರಿ, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲರೂ ಮನೆಯೊಳಗೇ ಇದ್ದು, ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸಬೇಕಾಗಿದೆ.

ಇದರಿಂದಾಗಿ ಜನರಲ್ಲಿ ಒಂದು ರೀತಿಯಲ್ಲಿ ಬಲವಂತದ ಗೃಹಬಂಧನಕ್ಕೆ ಒಳಗಾದ ಭಾವನೆ ಮೂಡಿ, ವಿಲವಿಲ ಒದ್ದಾಡುತ್ತಿದ್ದಾರೆ.
ಅಷ್ಟೇ ಅಲ್ಲ, ತರಕಾರಿ, ದಿನಸಿ ವಸ್ತುಗಳನ್ನು ಖರೀದಿಸಲೂ ಜನರು ಪರಿತಪಿಸುತ್ತಿದ್ದಾರೆ. ಸಮಯ ಕಳೆಯುವ ರೀತಿ ತಿಳಿಯದೆ ಕಂಗಾಲಾಗಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಲಾಕ್​ಡೌನ್​ ಯಾವಾಗ ಕೊನೆಗೊಳ್ಳುತ್ತೋ, ಯಾವಾಗ ಹೊರಬಂದು ಸ್ವಚ್ಛಂದವಾಗಿ ಓಡಾಡುವಂತಾಗುತ್ತದೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಇದುವರೆಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿರುವ ಲಾಕ್​ಡೌನ್​ ಒಮ್ಮೆಲೇ ತೆರೆದು, ಎಲ್ಲ ಬಗೆಯ ಸೇವೆಗಳು ಮರುಆರಂಭವಾದರೆ ಎದುರಾಗಬಹುದಾದ ಅಪಾಯದ ಬಗ್ಗೆಯೂ ಮನದ ಒಂದು ಮೂಲೆಯಲ್ಲಿ ಭೀತಿಯಿದೆ. ಆದರೆ, ಹೊರಗೆ ಓಡಾಡುವಷ್ಟಾದರೂ ಲಾಕ್​ಡೌನ್​ ಸಡಿಲಗೊಂಡರೆ ಸಾಕು ಎಂಬುದು ಕೆಲವರ ಭಾವನೆಯಾಗಿದೆ.

ಕೇಂದ್ರ ಸರ್ಕಾರ ಕೂಡ ಇದೇ ರೀತಿಯ ಚಿಂತನೆ ನಡೆಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜತೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಕೂಡ ಹಂತಹಂತವಾಗಿ ಲಾಕ್​ಡೌನ್​ ಅನ್ನು ಸಡಿಲಗೊಳಿಸುವ ಸಾಧ್ಯತೆ ಬಗ್ಗೆ ಚರ್ಚಿಸಿದ್ದರು. ಈ ನಿಟ್ಟಿನಲ್ಲಿ ಸೂಕ್ತವಾದ ತಂತ್ರಗಾರಿಕೆ ರೂಪಿಸಿ, ತಿಳಿಸುವಂತೆಯೂ ಸೂಚಿಸಿದ್ದರು.

ಕೇಂದ್ರ ಸರ್ಕಾರದ ಈ ಚಿಂತನೆಗೆ ಪೂರಕವೆಂಬಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಕೂಡ ಕರೋನಾ ವೈರಸ್​ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಸೋಂಕು ಸಾಂಕ್ರಾಮಿಕವಾಗಿ ಹರಡದಂತೆ ತಡೆಯಲು ಪ್ರಧಾನಿ ಮೋದಿ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಇದೀಗ ಸೋಂಕು ಹರಡುವಿಕೆ ನಿರ್ದಿಷ್ಟ ಭಾಗಗಳಿಗೆ ಸೀಮಿತವಾಗಿದೆ. ಅಂಥ ಭಾಗಗಳಲ್ಲಿ ಮಾತ್ರ ಲಾಕ್​ಡೌನ್​ ಮುಂದುವರಿಸಿ, ಉಳಿದೆಡೆಗಳಲ್ಲಿ ಹಂತಹಂತವಾಗಿ ಸಡಿಲಗೊಳಿಸಲು ಕಾಲ ಪರಿಪಕ್ವವಾಗಿರುವುದಾಗಿಯೂ ಡಬ್ಲ್ಯುಎಚ್​ಒ ಹೇಳಿತ್ತು.

ಏಪ್ರಿಲ್​ 30ರವರೆಗೆ ಮುಂದುವರಿಯುವ ಸಾಧ್ಯತೆ: ರಾಷ್ಟ್ರದ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಆದಷ್ಟು ಬೇಗ ಲಾಕ್​ಡೌನ್​ ಅನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರ ಕೂಡ ಉತ್ಸುಕವಾಗಿದೆ. ಆದರೆ, ಕೆಲವು ರಾಜ್ಯಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ಅನ್ನು ಮಾಸಾಂತ್ಯದವರೆಗೆ ಮುಂದುವರಿಸುವ ಬಗ್ಗೆಯೂ ಚಿಂತನೆ ನಡೆಸಿದೆ ಎನ್ನಲಾಗಿದೆ.
ಆದರೂ, ಸೋಂಕು ಹರಡುವಿಕೆ ಹೆಚ್ಚಾಗಿರುವ ಪ್ರದೇಶಗಳಿಗೆ ಮಾತ್ರ ಲಾಕ್​ಡೌನ್​ ಅನ್ನು ಸೀಮಿತಗೊಳಿಸಿ, ಉಳಿದೆಡೆಗಳಲ್ಲಿ ಹಂತಹಂತವಾಗಿ ಲಾಕ್​ಡೌನ್​ ಕೊನೆಗೊಳಿಸುವ ಸಾಧ್ಯತೆಗಳೂ ಇರುವುದಾಗಿ ಹೇಳಲಾಗುತ್ತಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾದರೆ ಕನಿಷ್ಠ ಏಪ್ರಿಲ್​ 12 ಅಥವಾ 13ರವರೆಗೆ ಕಾಯುವುದು ಅನಿವಾರ್ಯ.