ನ್ಯೂಸ್

ಅಧಿಕಾರ ಸಿಕ್ಕಾಗ ಬಿಜೆಪಿ ಸಂಕಲ್ಪ ಶಕ್ತಿ ಸಾಕಾರ: ಬಿ.ಎಲ್.ಸಂತೋಷ್

ಮೃತ್ಯುಂಜಯ ಕಪಗಲ್

ಬೆಂಗಳೂರು: ಬಿಜೆಪಿ ಎಂದ ಕೂಡಲೇ ಕೆಲವು ವಿಚಾರಗಳಿಗೆ ಪರ, ಕೆಲವಕ್ಕೆ ವಿರೋಧ ಅನ್ನುವ ಬಣ್ಣ ಹಚ್ಚುತ್ತಾರೆ. ಹಾಗೆಂದ ಮಾತ್ರಕ್ಕೆ ಬಿಜೆಪಿ ಸಂಘಟನೆ ಬದಲಾಗುವುದಿಲ್ಲ. ಅದಕ್ಕೆ ಅದರದ್ದೇ ಆದ ಚೌಕಟ್ಟಿದೆ. ನಿರ್ಣಯಿಸುವ ಸ್ಥಾನಕ್ಕೆ ಬಂದಾಗ, ಅಧಿಕಾರದ ಬಲ ಸಿಕ್ಕಾಗ ತನ್ನ ಸಂಕಲ್ಪಶಕ್ತಿ ಸಾಕಾರಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದವೀಧರರ ಸಂಘ ಬೆಂಗಳೂರಿನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ನೀಡಲಾದ ಸನ್ಮಾನ ಹಾಗೂ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಜೆಪಿ ಮುಸ್ಲಿಮ್ ವಿರೋಧಿ ಎಂದು ಬಿಂಬಿಸಿದರು. ನಿರ್ಣಯದ ಸ್ಥಾನಕ್ಕೆ ಬಂದಾಗ ರಾಷ್ಟ್ರಪತಿ ಹುದ್ದೆಗೆ ಎಪಿಜೆ ಅಬ್ದುಲ್ ಕಲಾಂ ಅವರನ್ನು ನೇಮಿಸಿತು. ಮೊದಲ ಸಲ ಸಂಪೂರ್ಣ ಬಲದಿಂದ ಅಧಿಕಾರಕ್ಕೆ ಬಂದಾಗ ಮೊದಲು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದು ದಲಿತ ಸಮುದಾಯದ ರಾಮನಾಥ್ ಕೋವಿಂದ ಅವರನ್ನು. ಎರಡನೇ ಸಲ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಾಗ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತು ಎಂದು ಹೇಳಿದರು.

ಬಿಜೆಪಿ ರಾಜಕೀಯವನ್ನು ಒಪ್ಪದ ಅನೇಕ ಸಂಘಟನೆಗಳ ಕಾರ್ಯಕರ್ತರೂ ಇಲ್ಲಿದ್ದಾರೆ. ಅವರೆಲ್ಲರೂ ಛಲವಾದಿ ನಾರಾಯಣಸ್ವಾಮಿಯವರ ಅಭಿಮಾನಿಗಳು. ಅವರಿಗಿರುವ ಛಲದ ಆ ಗುಣ ಅವರು ಇಲ್ಲಿಗೆ ಬರಲು ತಾಕತ್ತು ಕೊಟ್ಟಿದೆ ಎಂದರು.

ಮೂರು ಬಲಗಳ ನೆನಪು

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಲ್ಲೆಡೆ ಹೇಳುತ್ತಿದ್ದುದು- ಮೂರು ಶಬ್ದಗಳು. ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ. ಶಿಕ್ಷಣದ ಮೂಲಕ ವ್ಯಕ್ತಿತ್ವ ನಿರ್ಮಾಣ ಮತ್ತು ಉತ್ಕೃಷ್ಟತೆ ಸಾಧಿಸಬೇಕು. ಸಂಘಟನೆ ಮೂಲಕ ಶಕ್ತಿ ಪಡೆದುಕೊಳ್ಳಬೇಕು. ಒಟ್ಟಿಗಿದ್ದರೆ ಮಾತ್ರ ಬಲ ಎಂದರು.

ಇನ್ನು ಸಹಜವಾಗಿ ನ್ಯಾಯ ಸಿಗದ ಕಡೆ ಸಂಘರ್ಷ ಅನಿವಾರ್ಯ. ಆ ದಾರಿಯಲ್ಲಿ ಸಾಗುತ್ತ ಸಮಾಜಕ್ಕೆ ದಿಕ್ಕು ತೋರಿಸುತ್ತಿರುವ ಹಲವು ಮುಖಂಡರು ಇಲ್ಲಿದ್ದಾರೆ. ದಲಿತರ ಏಳಿಗೆ, ಶೋಷಿತರ ಏಳಿಗೆಗೆ ಕೆಲಸ ಮಾಡಿದವರು ಬಹಳ ಮಂದಿ ಇಲ್ಲಿದ್ದಾರೆ.

ದಲಿತರ, ಹಿಂದುಳಿದವರ ಏಳಿಗೆಗೆ ಬರೀ ದಲಿತ ಸಮುದಾಯದವರೇ ಹೋರಾಡಿದ್ದಾರೆ ಎಂದರೆ ಸೂಕ್ತವಲ್ಲ. ಮಂಗಳೂರಿನ ಕುದ್ಮುಲ್ ರಂಗರಾಯರಂತಹ ಅನೇಕ ಹಿರಿಯರು ಶೋಷಿತರ ಪರವಾಗಿ ಹೋರಾಡಿದ್ದಾರೆ ಎಂದು ಸಂತೋಷ್ ಸ್ಮರಿಸಿಕೊಂಡರು.

ಮೆಟ್ಟಿಲಾಗಿ ಬಳಸಿದವರೇ ಜಾಸ್ತಿ

ಶೋಷಿತ ಸಮಾಜವನ್ನು ಮೆಟ್ಟಿಲಾಗಿ ಉಪಯೋಗಿಸಿದವರೇ ಜಾಸ್ತಿ. ಅಂಥವರಿಂದ ಸಮಾಜಕ್ಕೆ ಯಾವುದೇ ಲಾಭವಾಗಿಲ್ಲ. ಬಣ್ಣದ ಮಾತುಗಳಿಗೆ, ಆವೇಶಕ್ಕೆ ಮರುಳಾಗಿ ಮರೀಚಿಕೆಯ ಹಿಂದೆ ಹೋಗುತ್ತೇವೆ. ಆದರೆ ಅವೆಲ್ಲ ಸುಳ್ಳು ಎಂದು ಗೊತ್ತಾಗಬೇಕಾದರೆ ವ್ಯಕ್ತಿತ್ವ ಮಾಗಬೇಕು. ಆಗ ಮಾತ್ರ ಸತ್ಯ ಗೊತ್ತಾಗುತ್ತದೆ. ಛಲವಾದಿ ಅವರಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಅವರ ಕಾರಣಕ್ಕೆ ಇನ್ನು ಹತ್ತು ಜನ ದೊಡ್ಡವರಾದಾಗ ಸಂತೋವಾಗುತ್ತದೆ.

ಸಮಾಜ, ದೇಶ, ಜಗತ್ತು ಎಲ್ಲದಕ್ಕೂ ಈಗ ಸಂಕ್ರಮಣ ಸ್ಥಿತಿ (ಟರ್ನಿಂಗ್ ಪಾಯಿಂಟ್) ಬಂದಿದೆ. ಒಟ್ಟಾಗಿ ಹೋಗಬೇಕು ಅನ್ನುವವರು ಒಂದು ಕಡೆ, ಸಮಾಜವನ್ನು ಒಡೆದು ಛಿದ್ರ ಮಾಡಬೇಕು ಅನ್ನುವವರು ಮತ್ತೊಂದು ಕಡೆ. ಸಬ್‌ ಕಾ ಸಾಥ್‌ ಸಬ್ ಕಾ ವಿಕಾಸ್- ಎಲ್ಲರಿಗೂ ಮುಕ್ತ ಅವಕಾಶಗಳು, ನ್ಯಾಯಾಂಗ ಕೂಡ 360 ಡಿಗ್ರಿ ನ್ಯಾಯ ಒದಗಿಸಬೇಕು ಎನ್ನುವ ಧ್ಯೇಯದಡಿ ಕೇಂದ್ರದ ಭಾರತೀಯ ಜನತಾ ಪಕ್ಷದ ಸರಕಾರ ಕೆಲಸ ಮಾಡುತ್ತಿದೆ.

ವಿಧಾನ ಪರಿಷತ್ ನಾಯಕನ ಸ್ಥಾನ ಪ್ರಮುಖವಾದುದು. ಅಂತಹ ಅತ್ಯಂತ ಪ್ರಮುಖ ಜಾಗಕ್ಕೆ ಅವರಿಗೆ ಸ್ಥಾನ ದೊರೆತಿದೆ. ಅವರಿಗೆ ಮತ್ತಷ್ಟು ಅವಕಾಶಗಳನ್ನು ಕೊಡುತ್ತಾ ನಾವೆಲ್ಲ ಅವರ ಜತೆ ಕೈಜೋಡಿಸಬೇಕಾಗಿದೆ ಎಂದು ಹುರಿದುಂಬಿಸಿದರು.

ಸಂಘಟನೆಗಳು ಛಿದ್ರ

ಕರ್ನಾಟಕದಲ್ಲಿ ಎರಡು ಸಂಘಟನೆಗಳು ನಿರಂತರವಾಗಿ ಅನೇಕರ ತಂತ್ರಕ್ಕೆ ಒಳಗಾಗಿ ಛಿದ್ರವಾಗುತ್ತ ಬಂದಿವೆ. ಅವುಗಳಂದರೆ ರೈತ ಸಂಘಟನೆ ಮತ್ತು ದಲಿತ ಸಂಘಟನೆಗಳು. ಹೀಗಾಗಬಾರದಿತ್ತು. ಎಷ್ಟು ರೈತ ಸಂಘಟನೆಗಳಿವೆ, ಒಂದೇ ಇದ್ದಿದ್ದರೆ ರೈತರ ಧ್ವನಿ ಹೇಗಿರುತ್ತಿತ್ತು. ಅದೇ ರೀತಿ ದಲಿತ ಸಂಘಟನೆಗಳು ಅನೇಕ ಆಗಿವೆ ಎಂದು ಮರುಗಿದರು.

ಸಮಾಜವನ್ನು ಮೇಲೆತ್ತಬೇಕಾದರೆ ಮೊದಲು ವ್ಯಕ್ತಿ ಶಿಕ್ಷಣ ಆಗಬೇಕು, ನಂತರ ಸಂಘಟನೆ ಆಗಬೇಕು. ಸಂಘೇಶಕ್ತಿ ಕಲೌಯುಗೇ. ಒಟ್ಟಿಗಿದ್ದರೆ ಮಾತ್ರ ಬಲ. ಕಲಿಯುಗದಲ್ಲಿ ದೇವರೇ ಬರುತ್ತಾನೆ ಎಂದೇನಿಲ್ಲ. ಆದರೆ ಒಗ್ಗಟ್ಟಾಗಿದ್ದು ಒಳ್ಳೆಯ ಕೆಲಸ ಮಾಡುವವರ ಜತೆಗೆ ಇರುತ್ತಾನೆ.

ಸಮಾಜದ ಏಳಿಗೆ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ಒಟ್ಟಾಗಬೇಕು. ಬಿಜೆಪಿ ಬಗ್ಗೆ ಅರಿವಿಲ್ಲದವರು ಸಹ ಇಲ್ಲಿಗೆ ತುಂಬಾ ಮಂದಿ ಬಂದಿರಬಹುದು. ಹತ್ತು ಹಲವು ಕವಲುಗಳಾಗಿ ಇರುವವರು ಒಟ್ಟಾಗಬೇಕು. ವ್ಯವಸ್ಥೆಗಳು ಪೂರಕವಾಗಿ ಬದಲಾಗಬೇಕಾದರೆ ಮಾನಸಿಕತೆ ಕೂಡ ಹಾಗೇ ಬದಲಾಗಬೇಕು ಎಂದು ಬಿ.ಎಲ್.ಸಂತೋಷ್‌ ಅಭಿಪ್ರಾಯ ಪಟ್ಟರು.