ನ್ಯೂಸ್

ಪ್ರತಿ ಮನೆಯ ನಳದಲ್ಲೂ ಸಾರಾಯಿ ಹರಿಸುತ್ತೇವೆ ಎಂಬ ಮಾತು ನಿಜವಾಯಿತು ಕೇರಳದ ಈ ಪಟ್ಟಣದಲ್ಲಿ..!

ತ್ರಿಶ್ಶೂರ್: ಪ್ರತಿ ಮನೆಯ ನಳದಲ್ಲೂ ಸಾರಾಯಿ ಹರಿಯುವಂತೆ ಮಾಡುತ್ತೇವೆ ಎಂಬ ವ್ಯಂಗ್ಯದ ಮಾತು ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರ ಭಾಷಣ ಕೇಳುವಾಗ ಜನಸಾಮಾನ್ಯನ ಬಾಯಿಯಲ್ಲಿ ಹರಿದಾಡುವುದು ಸಹಜ, ಸರ್ವೇ ಸಾಮಾನ್ಯ. ಆದರೆ, ಆ ಮಾತು ನಿಜವಾದರೆ!

ಹೌದು, ಇಂಥದ್ದೊಂದು ವಿಲಕ್ಷಣ ಸನ್ನಿವೇಶ ಕೇರಳದ ಚಾಲಕ್ಕುಡಿ ಪಟ್ಟಣದಲ್ಲಿ ನಡೆದಿದೆ. ಇಡೀ ಪಟ್ಟಣದ ನಿವಾಸಿಗಳಿಗೆ ಅಂಥ ಭಾಗ್ಯ ಸಿಗಲಿಲ್ಲ, ಬಿಡಿ. ಒಂದು ಅಪಾರ್ಟ್​ಮೆಂಟ್​ನ 18 ಮನೆಗಳಲ್ಲಿ ಪ್ರತಿಮನೆಯ ನಳದಲ್ಲೂ ಸೋಮವಾರ ನೀರಿನ ಬದಲು ಮದ್ಯ ಹರಿಯ ತೊಡಗಿತ್ತು!

ಅಂಥ ಅದೃಷ್ಟ ಅವರಿಗೆ ಹೇಗೆ ಸಿಕ್ಕಿತು ಎಂದು ಹುಬ್ಬೇರಿಸಬೇಡಿ. ನಡೆದುದು ಇಷ್ಟು- ಅಬಕಾರಿ ಅಧಿಕಾರಿಗಳು ವಿವಿಧ ಬ್ರಾಂಡುಗಳ 450 ಪೆಟ್ಟಿಗೆ ಭಾರತದಲ್ಲೇ ಉತ್ಪಾದಿಸಿದ ವಿದೇಶಿ ಮದ್ಯದ ಬಾಟಲಿಗಳನ್ನು ವಶಪಡಿಸಿದ್ದರು. ಕೋರ್ಟ್​ ನಿರ್ದೇಶನದ ಪ್ರಕಾರ ಅವರು ಅದನ್ನು ನಾಶಪಡಿಸಿದ್ದು ಇದೇ ಅಪಾರ್ಟ್​ಮೆಂಟ್ ಸಮೀಪದ ಬಯಲು ಪ್ರದೇಶದಲ್ಲಿ. ಅಲ್ಲೊಂದು ಬಾವಿ ಇತ್ತು. ಅದರ ನೀರಿನ ಜತೆಗೆ ಈ ಮದ್ಯ ಹೋಗಿ ಸೇರಿಕೊಂಡಿದೆ.

ಆ ಬಾವಿಯ ನೀರನ್ನು ಈ ಅಪಾರ್ಟ್​ಮೆಂಟ್ ನಿವಾಸಿಗಳು ಬಳಸುತ್ತಿದ್ದರು. ಸೋಮವಾರ ಬೆಳಗ್ಗೆ ಎಲ್ಲರಿಗೂ ಶಾಕ್! ನೀರಿನ ಬದಲು ನಳದಲ್ಲಿ ಮದ್ಯ ಹರಿಯ ತೊಡಗಿದಾಗ ಎಲ್ಲ ಹದಿನೆಂಟು ಕುಟುಂಬದವರೂ ಬೀದಿಗೆ ಬಂದು ಕೋಲಾಹಲವೇ ಸೃಷ್ಟಿಯಾಗಿತ್ತು. ಬಾವಿ ಬಳಿ ಹೋಗಿ ಗಮನಿಸಿದಾಗ ವಸ್ತು ಸ್ಥಿತಿ ಎಲ್ಲರಿಗೂ ಅರಿವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಅಧಿಕಾರಿಗಳು, ಆರು ವರ್ಷಗಳ ಹಿಂದೆ ಇರಿಂಜಾಲಕುಡದಲ್ಲಿನ ಬಾರ್ ಒಂದರಿಂದ 2,200 ಲೀಟರ್ ಮದ್ಯವನ್ನು ವಶಪಡಿಸಲಾಗಿತ್ತು. ಅದನ್ನು ಇಲ್ಲಿ ನಾಶ ಮಾಡುವ ವೇಳೆ ಅದರಿಂದ ಇಷ್ಟೆಲ್ಲ ರಾದ್ಧಾಂತ ಆಗಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ. ಸದ್ಯ ಈ ಅಪಾರ್ಟಮೆಂಟ್ ನಿವಾಸಿಗಳ ಅನುಕೂಲಕ್ಕಾಗಿ 5,000 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ಒದಗಿಸಿದ್ದು, ನೀರು ಕೂಡ ಪೂರೈಸಿದ್ದೇವೆ. ಈಗ ಬಾವಿಯನ್ನು ಸ್ವಚ್ಛಗೊಳಿಸುವ ಕೆಲಸ ಮುಂದುವರಿದಿದೆ ಎಂದಿದ್ದಾರೆ. (ಏಜೆನ್ಸೀಸ್)