ದೆಹಲಿ: ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ಕಂಪನಿಯು 2023ರ ಏಪ್ರಿಲ್ನಲ್ಲಿ ಭಾರತದ 74 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021ರ ಐಟಿ ನಿಯಮಗಳ ಅನುಸಾರವಾಗಿ ಕಂಪನಿಯು ಮಾಸಿಕ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಎಲ್ಲ ವಿವರಗಳನ್ನು ನಮೂದಿಸಲಾಗಿದೆ.
ಈ ವರದಿಯು 2023ರ ಏಪ್ರಿಲ್ 1ರಿಂದ ಏಪ್ರಿಲ್ 30ರ ನಡುವಿನ ಅವಧಿಯದಾಗಿದ್ದು, ಭಾರತದ ಬಳಕೆದಾರರ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ವಾಟ್ಸ್ಆ್ಯಪ್ ತೆಗೆದುಕೊಂಡ ಕ್ರಮ ಹಾಗೂ ಕಾನೂನು, ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೇಲ್ಮನವಿ ಸಮಿತಿಯಿಂದ ತೆಗೆದುಕೊಳ್ಳಲಾದ ಕ್ರಮ ಮತ್ತು ಖಾತೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ.
ಈ ಕುರಿತು ವಾಟ್ಸ್ಆ್ಯಪ್ ವಕ್ತಾರರು ಮಾತನಾಡಿದ್ದು, 2021ರ ಐಟಿ ನಿಯಮಗಳ ಅನುಸಾರವಾಗಿ ನಾವು ಏಪ್ರಿಲ್ ತಿಂಗಳ ವರದಿಯನ್ನು ಪ್ರಕಟಿಸಿದ್ದೇವೆ. ಬಳಕೆದಾರ ಸುರಕ್ಷತಾ ವರದಿಯು, ಗ್ರಾಹಕರಿಂದ ಸ್ವೀಕರಿಸಿದ ದೂರುಗಳ ಆಧಾರಕ್ಕನುಗುಣವಾದ ತೆಗೆದುಕೊಳ್ಳಲಾದ ಕ್ರಮ ಮತ್ತು ನಮ್ಮ ಪ್ಲಾಟ್‌ಫಾರ್ಮ್‌ಗೆ ಅನುಸಾರವಾಗಿ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)