ನ್ಯೂಸ್

ರಾಹುಲ್​ಗಾಂಧಿ ಜಾತಿ ಬಗ್ಗೆ ಕೇಳೋದ್ರಲ್ಲಿ ತಪ್ಪೇನಿದೆ; ಕಿರಣ್ ರಿಜಿಜು

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜಾತಿಯ ಬಗ್ಗೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ(ಜುಲೈ 31) ಹೇಳಿದ್ದಾರೆ.

ರಾಹುಲ್​ಗಾಂಧಿ ಅವರು ಜಾತಿಯ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಜನರ ಜಾತಿಯನ್ನು ದಿನ ಬಿಟ್ಟು ದಿನ ಕೇಳುತ್ತಿದ್ದಾರೆ. ಜನರ ಜಾತಿ ಕೇಳುವ ಮೂಲಕ ಕಾಂಗ್ರೆಸ್ ದೇಶವನ್ನು ವಿಭಜಿಸಲು ಪಿತೂರಿ ನಡೆಸಿದೆ. ರಾಹುಲ್ ಗಾಂಧಿಯವರ ಜಾತಿಯ ಬಗ್ಗೆ ಮಾತನಾಡುವಾಗ ಮಾತ್ರ ತುಂಬಾ ಪ್ರತಿಭಟನೆಗಳು ನಡೆಯುತ್ತವೆ ಎಂದು ರಿಜಿಜು ಹೇಳಿದರು.

ಕಾಂಗ್ರೆಸ್ ದಿನ ಬಿಟ್ಟು ದಿನ ಜಾತಿಯ ಬಗ್ಗೆ ಮಾತನಾಡುತ್ತದೆ. ಅವರು (ರಾಹುಲ್ ಗಾಂಧಿ) ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾದಾಗ ಅವರ ಜಾತಿಯನ್ನು ಕೇಳುತ್ತಾರೆ. ಸಶಸ್ತ್ರ ಪಡೆ ಸಿಬ್ಬಂದಿಯ ಜಾತಿಯನ್ನು ಕೇಳುತ್ತಾರೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಜನರ ಜಾತಿಯನ್ನು ಕೇಳುತ್ತಾರೆ. ಅವರು ಜನರ ಜಾತಿಯ ಬಗ್ಗೆ ಕೇಳಬಹುದು ಆದರೆ ಅವರ ಜಾತಿಯ ಬಗ್ಗೆ ಯಾರೂ ಕೇಳಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ದೇಶ, ಪ್ರಜಾಪ್ರಭುತ್ವ ಮತ್ತು ಆರ್ಥಿಕತೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ. ಜನರನ್ನು ವಿಭಜಿಸುವ ಕಾಂಗ್ರೆಸ್​​ ಪ್ರಯತ್ನಗಳನ್ನು ಯಶಸ್ವಿಯಾಗಲು ಬಿಜೆಪಿ ಬಿಡುವುದಿಲ್ಲ ಎಂದು ತಿಳಿಸಿದರು. ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ಮಂಗಳವಾರ (ಜುಲೈ 31) ಜಾತಿ ಗೊತ್ತಿಲ್ಲದವರು ಜಾತಿಗಣತಿಯ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದರು. (ಏಜೆನ್ಸೀಸ್​​)