ನ್ಯೂಸ್

Bhagwant Mann | ಪಂಜಾಬ್​​ ಪ್ರವಾಹ; ಕೇಂದ್ರದ 1600 ಕೋಟಿ ರೂ ಯಾವುದಕ್ಕೆ ಸಾಲುತ್ತದೆ..? 50000 ಕೋಟಿ ಪಾವತಿಸಿ ಎಂದ ಸಿಎಂ ಭಗವಂತ್​ ಮಾನ್​!

Bhagwant Mann: ಇತ್ತೀಚೆಗೆ ಪಂಜಾಬ್​​ನಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಮೊತ್ತ ಆರಂಭಿಕ ಅಂದಾಜಿನ ಪ್ರಕಾರ ಸುಮಾರು 13,800 ಕೋಟಿ ರೂ.ಗಳಾಗಿದ್ದು, ಕೇಂದ್ರ ಸರ್ಕಾರ ಕೇವಲ 1,600 ಕೋಟಿ ರೂ.ಗಳ ನೆರವು ನೀಡಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ(ಸೆ 19) ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಿಎಂ ಮಾನ್​, ಆರಂಭಿಕ ನಷ್ಟವೇ 13,800 ಕೋಟಿ ರೂಪಾಯಿಗಳಷ್ಟಿದ್ದು, ಅಂತಿಮ ಅಂಕಿ ಅಂಶವು ಇನ್ನೂ ಹೆಚ್ಚಾಗಿರುತ್ತದ. ಹೀಗಿದ್ದಾಗ ಕೇವಲ 1,600 ಕೋಟಿ ರೂಪಾಯಿಗಳನ್ನು ನೀಡಿರುವುದು ಯಾವುದಕ್ಕೆ ಸಾಲುತ್ತದೆ? ಸರ್ಕಾರ ತಮಾಷೆ ಮಾಡುತ್ತಿದೆಯೇ..? ಎಂದು ಪ್ರಶ್ನಿಸಿದರು. ಇದು ಸಾಗರದಲ್ಲಿ ಒಂದು ಹನಿ ಮಾತ್ರ, ಕೇಂದ್ರ ಸರ್ಕಾರ ರಾಜ್ಯದ ಗ್ರಾಮೀಣಾಭಿವೃದ್ಧಿ ನಿಧಿಗೆ 8,000 ಕೋಟಿ ರೂಪಾಯಿಗಳನ್ನೂ ಕೂಡ ತಡೆಹಿಡಿದಿದೆ ಇದೇ ವೇಳೆ ತಿಳಿಸಿದರು.

ಪಂಜಾಬ್ ಸರ್ಕಾರವು ಕೃಷಿ ಉತ್ಪನ್ನಗಳ ಮಾರಾಟ ಅಥವಾ ಖರೀದಿಯ ಮೇಲೆ ವಿಧಿಸಲಾಗುವ ಶೇಕಡಾ ಮೂರು ರಷ್ಟು ಸೆಸ್ ಆಗಿರುವ RDF ಅನ್ನು ರಸ್ತೆಗಳು ಮತ್ತು ಮಂಡಿಗಳು ಅಥವಾ ರೈತರ ಸಗಟು ಮಾರುಕಟ್ಟೆಗಳನ್ನು ನಿರ್ವಹಿಸಲು ಬಳಸುತ್ತದೆ. ಇದನ್ನು (ಆರ್‌ಡಿಎಫ್ ಪಾವತಿ) ಯಾವುದೇ ಕಾರಣವಿಲ್ಲದೆ ನಿಲ್ಲಿಸಲಾಗಿದೆ, ಸಾಮಾನ್ಯವಾಗಿ ಬಿಜೆಪಿಯೇತರ ಸರ್ಕಾರಗಳ ವಿಷಯದಲ್ಲಿ ಮಾತ್ರ ಇಂತಹ ಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಅಂಕಿ ಅಂಶಗಳ ಸಮೇತ ಕೇಂದ್ರ ಅನುದಾನವನ್ನು ವಿವರಿಸಿದ ಮಾನ್​​..

ಪಂಜಾಬ್​​ಗೆ ಒಟ್ಟು 5,012 ಕೋಟಿ ರೂ ಅನುದಾನ ಸಿಕ್ಕಿತ್ತು, ಅದರಿಂದ ಎಸ್‌ಡಿಆರ್‌ಎಫ್ 3,820 ಕೋಟಿ ರೂ ಖರ್ಚು ಮಾಡಿದೆ. ಇದರಲ್ಲಿ ಯಾವುದೇ ರೀತಿಯಲ್ಲೂ ಅಕ್ರಮ ನಡೆದಿಲ್ಲ, ಉಳಿದಿರುವುದೇ ಸುಮಾರು 1,200 ಕೋಟಿ ರೂ, 12,000 ಕೋಟಿ ರೂ. ಎಲ್ಲಿಂದ ಬಂತು? ಬಿಜೆಪಿ ಆ ಮೊತ್ತಕ್ಕೆ ಮತ್ತೊಂದು ಸೊನ್ನೆ ಸೇರಿಸಿದೆ ಎಂದು ವ್ಯಂಗ್ಯವಾಡಿದರು. ಪಂಜಾಬ್ ಸರ್ಕಾರದ ವಿಪತ್ತು ನಿಧಿಯಲ್ಲಿ 12,000 ಕೋಟಿ ರೂಪಾಯಿಗಳನ್ನು ಹೊಂದಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಪಂಜಾಬ್‌ನ ಸರಕು ಮತ್ತು ಸೇವಾ ತೆರಿಗೆ ಆದಾಯದಲ್ಲಿ ಕೇಂದ್ರವು 50,000 ಕೋಟಿ ರೂ.ಗಳನ್ನು ಪಾವತಿಸಿಬೇಕಿದ್ದು, ಅದನ್ನು ನಮಗೆ ನೀಡಿದರೆ ಕೇಂದ್ರದ ಯಾವುದೇ ವಿಶೇಷ ಪ್ಯಾಕೇಜ್ ಅಗತ್ಯವಿಲ್ಲ, ಅದರಲ್ಲಿಯೇ ನಾವು ನಮ್ಮ ಪ್ರವಾಹ ಪರಿಹಾರ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತೇವೆ ಎಂದರು.

ಉತ್ತರದ ರಾಜ್ಯಗಳಲ್ಲಿ ಪ್ರಚಂಡ ಪ್ರವಾಹ

ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಮತ್ತು ಕಾಲೋಚಿತ ಹೊಳೆಗಳಿಂದ ಪ್ರವಾಹ ಉಂಟಾಗಿದೆ. ಅಲ್ಲದೆ, ಪಂಜಾಬ್‌ನಲ್ಲಿ ಸುರಿದ ಭಾರೀ ಮಳೆಯು ಪ್ರವಾಹ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಕಳೆದ ವಾರದ ವೇಳೆಗೆ, 55 ಜನರು ಸಾವನ್ನಪ್ಪಿದ್ದಾರೆ ಮತ್ತು ರಾಜ್ಯಾದ್ಯಂತ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳು ಮುಂದುವರೆದಿದ್ದು, ನೀರಿನಿಂದ ಹರಡುವ ರೋಗಗಳು ಕುರಿತು ಅಪಾಯವಿದೆ. 2,000 ಕ್ಕೂ ಹೆಚ್ಚು ಹಳ್ಳಿಗಳು ಮತ್ತು ಸುಮಾರು ನಾಲ್ಕು ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ, 1.93 ಲಕ್ಷ ಹೆಕ್ಟೇರ್ ಭೂಮಿಯ ಬೆಳೆಗಳು ಹಾನಿಗೊಳಗಾಗಿವೆ ಎಂದು ಕಂದಾಯ ಸಚಿವ ಹರ್ದೀಪ್ ಸಿಂಗ್ ಮುಂಡಿಯನ್ ಹೇಳಿದ್ದಾರೆ.(ಏಜೆನ್ಸೀಸ್​​)